ದ್ವೇಷ ಭಾಷಣ: ಕಾರಂತ್ ವಿಚಾರಣೆಗೆ ಕಾನೂನು ಅಧಿಕಾರಿಗಳ ಸಮ್ಮತಿ

Update: 2022-09-28 03:53 GMT

ಬೆಂಗಳೂರು, ಸೆ.27: ಕಳೆದ ಐದು ವರ್ಷಗಳ ಹಿಂದೆ ಪುತ್ತೂರಿನ ಕಸ್ಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ ವಿವಾದಾತ್ಮಕ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಪೂರ್ವಾನುಮತಿ ನೀಡಬಹುದು ಎಂದು ಕಾನೂನು ಅಧಿಕಾರಿಗಳು ಸರಕಾರಕ್ಕೆ ಅಭಿಪ್ರಾಯ ನೀಡಿರುವುದು ಇದೀಗ ಬಹಿರಂಗವಾಗಿದೆ.

ಜಗದೀಶ್ ಕಾರಂತ್ ಅವರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕು ಎಂದು ವಿಧಾನಪರಿಷತ್‌ನ ಸದಸ್ಯ ಎನ್.ರವಿಕುಮಾರ್ ಮತ್ತಿತರರು ಸರಕಾರದ ಮೇಲೆ ಒತ್ತಡ ಹೇರಿರುವ ಬೆನ್ನಲ್ಲೇ ಪುತ್ತೂರಿನ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಪೂರ್ವಾನುಮತಿ ನೀಡಲು ಕಾನೂನು ಅಧಿಕಾರಿಗಳು ಸಮ್ಮತಿ ವ್ಯಕ್ತಪಡಿಸಿರುವುದು ಮಹತ್ವ ಪಡೆದುಕೊಂಡಿದೆ. ಈ ಕುರಿತು 'the-file.in’ ಗೆ ಕೆಲ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

ಕಾನೂನು ಅಧಿಕಾರಿಯ ಅಭಿಪ್ರಾಯವಿದು: ಪ್ರಸಕ್ತ ಪ್ರಕರಣದ ಸಂಪೂರ್ಣ ಕಡತ, ಮಂಗಳೂರು ಪಶ್ಚಿಮ ವಲಯದ ಡಿಜಿ/ಐಜಿಪಿ, ಅವರು ಸಲ್ಲಿಸಿದ್ದ ಪ್ರಸ್ತಾವನೆಗಳು, ದೋಷಾರೋಪಣೆ ಪಟ್ಟಿ ಹಾಗೂ ಇತರ ದಾಖಲಾತಿಗಳನ್ನು ಇಲಾಖೆಯು ಪರಿಶೀಲಿಸಿದೆ. ಪ್ರಕರಣದ ಪರಿಷ್ಕೃತ ಪ್ರಸ್ತಾವನೆ, ದೋಷಾರೋಪಣೆ ಪಟ್ಟಿಯೊಂದಿಗೆ ವಿವಾದಿತ ಭಾಷಣದ ಆಡಿಯೊ, ವೀಡಿಯೊ ಚಿತ್ರೀಕರಣಗಳನ್ನೊಳಗೊಂಡ ಸೀಡಿಯನ್ನು ಪರಿಶೀಲಿಸಲಾಯಿತು.

ಆರೋಪಿ ಪ್ರತಿಭಟನಾ ಸಭೆಯಲ್ಲಿ ವಿವಾದಾತ್ಮಕ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿರುವುದು ಕಂಡುಬಂದಿರುತ್ತದೆ. ತನಿಖಾಧಿಕಾರಿಗಳೂ ಸಲ್ಲಿಸಿರುವ ಪುನರ್ ನಿವೇದನೆಯ ಆಧಾರದಲ್ಲಿ ಹಾಗೂ ದೋಷಾರೋಪ ಪಟ್ಟಿಯೊಂದಿಗೆ ಸಲ್ಲಿಸಿರುವ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಐಪಿಸಿ ಕಲಂ 153(ಎ) 505(1)(ಬಿ) 505(2), 189, 504 ಅಡಿಯಲ್ಲಿ ಆರೋಪಿ ವಿರುದ್ಧದ ಆರೋಪಗಳು ದೃಢಪಟ್ಟಿವೆ.

ಆರೋಪಿಯನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸಿಆರ್‌ಪಿಸಿ ಕಲಂ 196(1) ಮತ್ತು 196(1ಎ) ಅಡಿ ಸರಕಾರವು ಪೂರ್ವಾನುಮತಿ ನೀಡಬಹುದು ಎಂದು ಹಿರಿಯ ಕಾನೂನು ಅಧಿಕಾರಿ ಅವರು 2022ರ ಸೆ.15ರಂದು ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಪುತ್ತೂರು ತಾಲೂಕು ಕಸ್ಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿ ಪುತ್ತೂರು ಹಿಂದೂ ಜಾಗರಣಾ ವೇದಿಕೆಯು ಸಂಪ್ಯ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಬ್ದುಲ್ ಖಾದರ್, ಚಂದ್ರ ಮತ್ತು ರುಕ್ಮಯ್ಯ ಅವರ ವಿರುದ್ಧ 2017ರ ಸೆ.15ರಂದು ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News