ಬಳ್ಳಾರಿಯ ಕುವೆಂಪು ನಗರದ ಬಡಾವಣೆ : ರಾಷ್ಟ್ರೋತ್ಥಾನ ಪರಿಷತ್‌ಗೆ ನಿಯಮಬಾಹಿರವಾಗಿ 30 ವರ್ಷಗಳಿಗೆ ಗುತ್ತಿಗೆ

Update: 2022-09-29 02:29 GMT

ಬೆಂಗಳೂರು, ಸೆ.29: ನಾಗರಿಕ ಸೌಲಭ್ಯ ನಿವೇಶನವನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲು ನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೂ ನಿಯಮಬಾಹಿರವಾಗಿ ಬಳ್ಳಾರಿಯ ಕುವೆಂಪು ನಗರದ ಬಡಾವಣೆಯಲ್ಲಿನ ಬಹುಕೋಟಿ ರೂ. ಬೆಲೆಬಾಳುವ 5.92 ಎಕರೆ ವಿಸ್ತೀರ್ಣದ ಪೈಕಿ 24,008 ಚ.ಮೀ ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನವನ್ನು ನಿಯಮಬಾಹಿರವಾಗಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು  ರಾಜ್ಯ ಬಿಜೆಪಿ ಸರಕಾರವು ರಾಷ್ಟ್ರೋತ್ಥಾನ ಪರಿಷತ್‌ಗೆ ಶೇ.25ರ ದರದಲ್ಲಿ 30 ವರ್ಷಗಳಿಗೆ ಗುತ್ತಿಗೆ  ನೀಡಿದೆ. ಇದರಿಂದ ಬೊಕ್ಕಸಕ್ಕೆ ಅಂದಾಜು  7.50 ಕೋಟಿ ರೂ. ನಷ್ಟ ಸಂಭವಿಸಿದೆ.

ಬೆಂಗಳೂರಿನ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ವಿವಿಧೆಡೆ ಗೋಮಾಳವನ್ನು ಕಾನೂನು ಇಲಾಖೆಯ ವಿರೋಧದ ನಡುವೆ ಮತ್ತು ಪ್ರಚಲಿತ ಮಾರುಕಟ್ಟೆ ದರಕ್ಕಿಂತಲೂ ಚಿಲ್ಲರೆ ದರಕ್ಕೆ ಮಂಜೂರು ಮಾಡಿರುವ ರಾಜ್ಯ ಸರಕಾರವು ಬಳ್ಳಾರಿ ನಗರದಲ್ಲಿಯೂ ನಿಯಮಬಾಹಿರವಾಗಿ ಒಟ್ಟಾರೆ 24,008.00 ಚ.ಮೀ. ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನವನ್ನು 30 ವರ್ಷದ ಅವಧಿಗೆ ಗುತ್ತಿಗೆ  ಮಂಜೂರು ಮಾಡಿ ಸಂಘ ನಿಷ್ಠೆಯನ್ನು ಮೆರೆದಿದೆ.

ಅಂಗವಿಕಲರ ಹಾಗೂ ಬುದ್ಧಿಮಾಂದ್ಯರ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಸಂಸ್ಥೆಗಳಿಗೆ, ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸುವ ಸಂಸ್ಥೆಗಳಿಗೆ ಮತ್ತು ಕೇಂದ್ರ, ರಾಜ್ಯ ಸರಕಾರದ ಅಂಗ ಸಂಸ್ಥೆಗಳಿಗೆ ಮಾತ್ರ ಪ್ರಾಧಿಕಾರವು ನಿಗದಿಪಡಿಸಿದ ಮೊತ್ತದ ಶೇ.50ರ ದರದಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು ಮಂಜೂರು ಮಾಡಲು ಅವಕಾಶವಿದೆ. ಆದರೆ ಇತರ ಸಂಘ ಸಂಸ್ಥೆಗಳಿಗೆ ನಿಗದಿತ ಮೊತ್ತಕ್ಕೆ ರಿಯಾಯಿತಿ ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಇಲಾಖೆಯು ನೀಡಿದ್ದ ಸ್ಪಷ್ಟ ಅಭಿಪ್ರಾಯವನ್ನು ಬದಿಗೆ ಸರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರ ಒತ್ತಡಕ್ಕೆ ಮಣಿದ ಇಲಾಖೆಯು ನಿಯಮವನ್ನು ಉಲ್ಲಂಘಿಸಿ ಬಹುಕೋಟಿ ರೂ. ಬೆಲೆ ಬಾಳುವ ಜಮೀನನ್ನು ಪ್ರಚಲಿತ ಮಾರುಕಟ್ಟೆ ದರ ಶೇ. 25ರಷ್ಟು ದರಕ್ಕೆ  ಮಂಜೂರು ಮಾಡಿದೆ. ಈ ಸಂಬಂಧ ''the-file.in''ಆರ್‌ಟಿಐ ಅಡಿಯಲ್ಲಿ ಸಮಗ್ರ ದಾಖಲಾತಿಗಳನ್ನು ಪಡೆದುಕೊಂಡಿದೆ.

 ಬಳ್ಳಾರಿಯಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಿಸಿಕೊಳ್ಳಲು ಒತ್ತಡ ಹೇರಿದ್ದ ರಾಷ್ಟ್ರೋತ್ಥಾನ ಪರಿಷತ್, ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರವು ಸ್ವಕುಳಸಾಳಿ ಸಮಾಜ, ಮಡಿವಾಳ ಮಾಚಿದೇವ ಸಂಘ, ಜಿಲ್ಲಾ ಒಕ್ಕಲಿಗರ ಸಂಘ, ಪದ್ಮಶಾಲಿ ಸಮಾಜ, ಮಸ್ಜಿದ್- ಎ-ಅಕ್ಷಾ ತಂಜೀಮ್ ಸಮಿತಿ, ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಶೇ. 10ರ ದರದಲ್ಲಿ ಮಂಜೂರು ಮಾಡಿರುವುದನ್ನು ಉಲ್ಲೇಖಿಸಿ ಬಳ್ಳಾರಿಯಲ್ಲಿ ನಾಗರಿಕ ಸೌಲಭ್ಯ ನಿವೇಶನವನ್ನು ಮಂಜೂರು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

 ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್, ಬಳ್ಳಾರಿ ನಗರದ ಶಾಸಕ ಜಿ ಸೋಮಶೇಖರ್ ರೆಡ್ಡಿ, ಸಂಸದ ವೈ ದೇವೇಂದ್ರಪ್ಪ ಅವರು ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ಸಿ ಎ ನಿವೇಶನವನ್ನು ಮಂಜೂರು ಮಾಡಿಕೊಡಲು ಶಿಫಾರಸು ಪತ್ರ ನೀಡಿರುವುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

ಸಿ.ಎ. ನಿವೇಶನಕ್ಕೆ  ರಾಷ್ಟ್ರೊತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ ದಿನೇಶ್ ಹೆಗ್ಡೆ ಅವರು   2021ರ ಮೇ 16ರಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು.

ಶೈಕ್ಷಣಿಕ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸಲು  ನಾಗರಿಕ ಸೌಲಭ್ಯ ನಿವೇಶನ ಮಂಜೂರಾತಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ್ದ  ಪ್ರಾಧಿಕಾರವು 2021ರ ಆಗಸ್ಟ್ 18ರಂದು ಸಭೆ ನಡೆಸಿತ್ತು. ಬಳ್ಳಾರಿ ನಗರದ ಕುವೆಂಪು ನಗರದ ಬಡಾವಣೆಯಲ್ಲಿ ಒಟ್ಟು 5.92 ಎಕರೆಯಲ್ಲಿನ ಪೈಕಿ 24,008.00 ವಿಸ್ತೀರ್ಣದ ನಾಗರಿಕ ಸೌಲಭ್ಯ ನಿವೇಶನಕ್ಕೆ ಚ.ಮೀ.ಗೆ 6,500 ರೂ.ಗಳಂತೆ ಒಟ್ಟು ನಿವೇಶನಕ್ಕೆ 15,60,52,000 ರು. ನಿಗದಿಪಡಿಸಿ ನಿರ್ಣಯ ಕೈಗೊಂಡಿತ್ತು.

ಈ ನಿವೇಶನ ಮೌಲ್ಯದ ಶೇ.10ರಷ್ಟು ಮೊತ್ತವನ್ನು ಅಂದರೆ 1,56,05,200 ರೂ.ಗಳನ್ನು  ಠೇವಣಿ ರೂಪದಲ್ಲಿ ಪರಿಷತ್ ಜಮೆ ಮಾಡಿತ್ತು. ಇನ್ನುಳಿದ ಶೇ. 90ರಷ್ಟು ಅಂದರೆ 14,04,46,800 ರೂ.ಗಳನ್ನು ಪ್ರಾಧಿಕಾರಕ್ಕೆ 15 ದಿನಗಳ ಒಳಗಾಗಿ ಸಂದಾಯ ಮಾಡಲು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ಸೂಚಿಸಿತ್ತು ಎಂಬುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

ರಾಷ್ಟ್ರೋತ್ಥಾನಕ್ಕೆ ನೋಂದಣಿ ಮಾಡಲು ಪತ್ರ

‘ರಾಷ್ಟ್ರೋತ್ಥಾನ ಪರಿಷತ್ ಒಂದು ಸಾರ್ವಜನಿಕ ಸಂಸ್ಥೆಯಾಗಿದ್ದು 55 ವರ್ಷಗಳಿಂದ ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಶಿಕ್ಷಣ, ಆರೋಗ್ಯ, ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಬೆಂಗಳೂರು ನಗರದಲ್ಲಿ 250 ಕೊಳಚೆ ಪ್ರದೇಶಗಳಲ್ಲಿ ಬಡಮಕ್ಕಳಿಗಾಗಿ ಉಚಿತ ಮನೆಪಾಠ ತರಗತಿ ನಡೆಸುತ್ತಿದೆ. ಈ ಮೊದಲು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಸಂಸ್ಥೆಗಳಿಗೆ ಅತೀ ಕಡಿಮೆ ರಿಯಾಯಿತಿ ದರದಲ್ಲಿ ಮಂಜೂರು ಮಾಡಿದೆ. ಹೀಗಾಗಿ ರಾಜ್ಯಾದ್ಯಂತ ಬಹುಮುಖಿ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವ ನಮ್ಮ ಸಂಸ್ಥೆಗೆ ನಿವೇಶನದ ಒಟ್ಟು ಮೌಲ್ಯದ ಶೆ.20ರ ದರದಲ್ಲಿ ಪಾವತಿಸಿಕೊಂಡು ರಾಷ್ಟ್ರೋತ್ಥಾನ ಪರಿಷತ್ ಹೆಸರಿನಲ್ಲಿ ನೋಂದಣಿ ಮಾಡಿಕೊಡಬೇಕು’ ಎಂದು ಪರಿಷತ್‌ನ ನಾ.ದಿನೇಶ್ ಹೆಗ್ಡೆ 2021ರ ಸೆ.27ರಂದು ಪ್ರಾಧಿಕಾರದ ಆಯುಕ್ತರಿಗೆ ಕೋರಿಕೆ ಪತ್ರ ಸಲ್ಲಿಸಿದ್ದರು.

 ಈ ಪತ್ರವನ್ನು ಪರಿಶೀಲಿಸಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯು ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳಲ್ಲಿ ಪ್ರಾಧಿಕಾರದ ಹಂತದಲ್ಲಿ ರಿಯಾಯಿತಿ ನೀಡಲು ಅವಕಾಶವಿರುವುದಿಲ್ಲ. ಆದ್ದರಿಂದ ಈಗಾಗಲೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರಿಯಾಯಿತಿ ದರದಲ್ಲಿ ಸಿ.ಎ. ನಿವೇಶನ ಮಂಜೂರು ಮಾಡಿ ಸರಕಾರವು ಹೊರಡಿಸಿರುವ ಆದೇಶದಂತೆ ಈ ಸಂಸ್ಥೆಗೂ ರಿಯಾಯಿತಿ ದರದಲ್ಲಿ ಮಂಜೂರು ಮಾಡಲು ಆದೇಶ ಕೋರಿ ಪ್ರಸ್ತಾವವನ್ನು ಸರಕಾರದ ಅನುಮೋದನೆಗೆ ಸಲ್ಲಿಸಲು ಸರ್ವಾನುಮತದಿಂದ ನಿರ್ಣಯಿಸಿ 2021ರ ನವೆಂಬರ್ 8ರಂದು ನಗರಾಭಿವೃದ್ಧಿ ಇಲಾಖೆ ಸರಕಾರದ ಕಾರ್ಯದರ್ಶಿಗೆ ಪತ್ರ ಬರೆದಿತ್ತು.

ನಷ್ಟವೆಂದಿದ್ದ ಆರ್ಥಿಕ ಇಲಾಖೆ

ರಾಷ್ಟ್ರೋತ್ಥಾನ ಪರಿಷತ್‌ಗೆ ರಿಯಾಯಿತಿ ದರದಲ್ಲಿ ಸಿ.ಎ. ನಿವೇಶನವನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆಯು ಸಹಮತಿಸಿರಲಿಲ್ಲ. ‘ಆಡಳಿತ ಇಲಾಖೆಯ ಪ್ರಸ್ತಾವವನ್ನು ಪರಿಶೀಲಿಸಿದೆ. ಪ್ರಸ್ತಾವಕ್ಕೆ ಆರ್ಥಿಕ ಇಲಾಖೆಯು ಸಹಮತಿಸಿರುವುದಿಲ್ಲ’ ಎಂದು  2022ರ ಜೂನ್ 15ರಂದೇ ತನ್ನ ಅಭಿಪ್ರಾಯ ತಿಳಿಸಿತ್ತು. ಅಲ್ಲದೆ ‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991ರ ನಿಯಮ 8(1)ರಲ್ಲಿ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಹಣವನ್ನು ನಿಗದಿಪೊಡಿಸಲು ಅವಕಾಶ ಕಲ್ಪಿಸಿರುವಂತೆ ಸಿ.ಎ. ನಿವೇಶನಕ್ಕೆ ರಿಯಾಯಿತಿ ನೀಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಪ್ರಸ್ತಾಪಿತ ಸಿ.ಎ. ನಿವೇಶನಕ್ಕೆ ರಿಯಾಯಿತಿ ನೀಡಿದಲ್ಲ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗುತ್ತದೆ’ ಎಂದೂ ಎಚ್ಚರಿಕೆ ನೀಡಿತ್ತು.

 ಈ ಎಲ್ಲ ಅಂಶಗಳನ್ನು ನಗರಾಭಿವೃದ್ಧಿ ಇಲಾಖೆಯು ದಾಖಲಿಸಿ ಸಚಿವ ಸಂಪುಟಕ್ಕೆ ಕಡತ ಮಂಡಿಸಿತ್ತು. ಈ ಸಂಬಂಧ 2022ರ ಜುಲೈ 20ರಂದು ನಡೆದಿದ್ದ ಸಚಿವ ಸಂಪುಟ ಸಭೆಯು 24,008 ಚ ಮೀ ವಿಸ್ತೀರ್ಣವುಳ್ಳ ನಾಗರಿಕ ಸೌಲಭ್ಯ ನಿವೇಶನದ ಗುತ್ತಿಗೆ ಮೊತ್ತವನ್ನು ಪ್ರಚಲಿತ ಮಾರುಕಟ್ಟೆ ದರದ ಶೇ.25ರಷ್ಟನ್ನು ನಿಗದಿಪಡಿಸಿ ನಿರ್ಣಯ ಕೈಗೊಂಡಿತು. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2022ರ ಆಗಸ್ಟ್  4ರಂದು ಆದೇಶವನ್ನೂ ಹೊರಡಿಸಿದೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಹುಣಸಚಿಕ್ಕಮಾರನಹಳ್ಳಿಯಲ್ಲಿ 9 ಎಕರೆ ಗೋಮಾಳವನ್ನು ಮಾರುಕಟ್ಟೆ ದರಕ್ಕಿಂತಲೂ ಶೇ.25ರ ದರದಲ್ಲಿ ಮಂಜೂರು ಮಾಡಿ ಬೊಕ್ಕಸಕ್ಕೆ ಅಂದಾಜು 9 ಕೋಟಿ ರೂ. ನಷ್ಟವನ್ನು ಹೊರಸಿರುವುದನ್ನು ಸ್ಮರಿಸಬಹುದು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News