ಮೇಲ್ಮನವಿಗೆ ಅನರ್ಹವೆಂದ ಲೋಕಾಯುಕ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್

Update: 2022-09-30 02:38 GMT

ಬೆಂಗಳೂರು: ನಕಲಿ ಪ್ರಮಾಣಪತ್ರಗಳನ್ನು  ಸೃಷ್ಟಿಸಿ  ಮಾಜಿ ಸೈನಿಕರ ಕೋಟಾದಡಿಯಲ್ಲಿ 22 ಮಂದಿಯನ್ನು ಶಿಕ್ಷಕರನ್ನಾಗಿ ನೇಮಿಸಿರುವ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸುವ ಸಂಬಂಧ ಲೋಕಾಯುಕ್ತ ಕಾನೂನು ಕೋಶ ಮತ್ತು ಲೋಕಾಯುಕ್ತದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನಡುವೆ ಒಮ್ಮತ ಇಲ್ಲದಿರುವುದು ಇದೀಗ ಬಹಿರಂಗವಾಗಿದೆ.

ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಬೇಕಾಗಿರುವ ಮತ್ತು ಈಗಾಗಲೇ ಸಲ್ಲಿಸಲಾಗಿರುವ ಎಸ್‌ಎಲ್‌ಪಿಗಳನ್ನು ಪರಿಶೀಲಿಸುವ ಸಂಬಂಧ 2022ರ ಸೆ.17ರಂದು ನಡೆದಿದ್ದ ಪರಿಶೀಲನಾ ಸಭೆಯಲ್ಲಿ ಲೋಕಾಯುಕ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಲೋಕಾಯುಕ್ತ ಕಾನೂನು ಕೋಶದ ಭಿನ್ನ ಆಭಿಪ್ರಾಯಗಳನ್ನು ತಳೆದಿರುವುದರ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡವಳಿಗಳು ‘the-file.in’ಗೆ ಲಭ್ಯವಾಗಿದೆ.

‘ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರು ಪ್ರಕರಣವು ಮೇಲ್ಮನವಿ ಸಲ್ಲಿಸಲು ಅರ್ಹವಿಲ್ಲವೆಂದು ಅಭಿಪ್ರಾಯಪಟ್ಟಿರುತ್ತಾರೆ. ಲೋಕಾಯುಕ್ತ ಕಾನೂನು ಕೋಶದ ಮುಖ್ಯಸ್ಥರು ಈ ಪ್ರಕರಣವು ಮೇಲ್ಮನವಿ ಸಲ್ಲಿಸಲು ಅರ್ಹವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯವನ್ನು ಲೋಕಾಯುಕ್ತರು ಅನುಮೋದಿಸಿರುತ್ತಾರೆ. ಹಾಗೆಯೇ ಒಂದನೇ ಅಪರ ವಾದೇಕ್ಷಕರು ಪ್ರಕರಣವು ಮೇಲ್ಮನವಿ ಸಲ್ಲಿಸಲು ಅರ್ಹವಿಲ್ಲವೆಂದು ಅಭಿಪ್ರಾಯಪಟ್ಟಿರುತ್ತಾರೆ’ ಎಂದು ನಡವಳಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಅರ್ಜಿದಾರ ಶ್ರೀಕಾಂತ್ ಮತ್ತು ಆಯ್ಕೆ ಪ್ರಾಧಿಕಾರದ ಸದಸ್ಯರು 2006-7ಮತ್ತು 2007-08ನೇ ವರ್ಷದಲ್ಲಿ 22 ಜನರನ್ನು ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಮಾಜಿ ಸೈನಿಕ ಕೋಟಾದಡಿಯಲ್ಲಿ ನೇಮಕಾತಿ ಮಾಡಿಕೊಂಡಿದ್ದರು. ಇದು ಲೋಕಾಯುಕ್ತದಲ್ಲಿ ಮೊಕದ್ದಮೆ (ಕ್ರೈಂ ನಂ 04/2014) ದಾಖಲಾಗಿತ್ತು. ಪ್ರಕರಣವು 2006-07 ಮತ್ತು 2007-08ನೇ ವರ್ಷಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 8(2)ರ ಅನ್ವಯ ಪ್ರಕರಣದ ತನಿಖೆಯನ್ನು ನಡೆಸುವಂತಿಲ್ಲ. ಹೀಗಾಗಿ ಈ ಪ್ರಕರಣದಲ್ಲಿನ ನಡವಳಿಗಳನ್ನು ಮುಂದುವರೆಸುವುದು ವ್ಯರ್ಥ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತ್ತು ಎಂಬುದು ನಡವಳಿಯಿಂದ ತಿಳಿದು ಬಂದಿದೆ.

ಅಲ್ಲದೆ ಪ್ರಕರಣದ ಸಂಬಂಧಿಸಿದ ವ್ಯಾಪ್ತಿಯು ಪೊಲೀಸ್ ಠಾಣೆಯಲ್ಲಿ ವರದಿ ದಾಖಲು ಮಾಡಲು ಮತ್ತು ವ್ಯಾಪ್ತಿಯ ಪೊಲೀಸ್ ಠಾಣೆಯು ಕ್ರಮಕೈಗೊಳ್ಳಲು ಮಿತಿ ಅನ್ವಯವಾಗುವುದಿಲ್ಲ. ಭಾರತೀಯ ದಂಡ ಸಂಹಿತೆ ಕಲಂ 420ಕ್ಕೆ ಸಂಬಂಧಿಸಿದಂತೆ ಸಂಜ್ಞೆಯ ತೆಗೆದುಕೊಳ್ಳುವುದಕ್ಕೆ ಅಡ್ಡಿ ಇಲ್ಲ. ಹೀಗಾಗಿ ಉಚ್ಛ ನ್ಯಾಯಾಲಯವು ಕಾನೂನು ರೀತಿಯಂತೆ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯವನ್ನು ಲೋಕಾಯುಕ್ತ/ಪ್ರತಿವಾದಿಗಳಿಗೆ ಕಾಯ್ದಿರಿಸಿ ಆದೇಶ ಮಾಡಿತ್ತು ಎಂಬುದು ನಡವಳಿಯಿಂದ ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ: 2006-07ರಿಂದ 2009-10ನೇ ಸಾಲಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸೈನಿಕರ/ಅವಲಂಬಿತರ ಖೋಟಾದಡಿಇಯಲ್ಲಿ ನಕಲಿ ಸೃಷ್ಟಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಆರೋಪದಡಿಯಲ್ಲಿ ಯಾದಗಿರಿಯ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲರೂ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ,ನೌಕರರೂ ಗುರಿಯಾಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸದುರ್ಗ ಉಪನಿರ್ದೇಶಕರ ಕಚೇರಿಯಲ್ಲಿನ ಹಿಂದಿನ ಪ್ರಥಮದರ್ಜೆ ಸಹಾಯಕ ಶ್ರೀಕಾಂ (ಯಾದಗಿರಿಯಲ್ಲಿ ಪ್ರಸ್ತುತ ಸೇವೆ)  ಮತ್ತು ಶಹಾಪೂರ ತಾಲೂಕಿನ ದೋರನಹಳ್ಳಿಯ ಸರ್ಕಾರಿ

ಪ್ರೌಢಶಾಲೆಯ ಪ್ರಥಮದರ್ಜೆ ಸಹಾಯಕರ ಅವರ ಮುಂದಿನ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ತಡೆಹಿಡಿದು ದಂಡನೆ ವಿಧಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ಅಲ್ಲದೆ ಈ ಪ್ರಕರಣದ ಕುರಿತು ಆಪಾದಿತರಿಗೆ ಕಠಿಣ ದಂಡನೆ ವಿಧಿಸಲು ಯಾವುದೇ ಹೊಸ ಅಂಶಗಳನ್ನೂ ಅಧಿಕಾರಿಗಳು ಸರಕಾರಕ್ಕೆ ಮಂಡಿಸಿಲ್ಲ. ವಿಚಾರಣೆ ವರದಿಯಲ್ಲಿನ ಅಂಶಗಳನ್ನು ಹೊರತುಪಡಿಸಿ ದಂಡನೆ ಪರಿಷ್ಕರಣೆ ಮಾಡಲು ಹೊಸ ಅಂಶಗಳನ್ನೂ ಸಲ್ಲಿಸಿಲ್ಲ.

ಆದರೆ ಈ ಪ್ರಕರಣವನ್ನು ಪುನರ್ ಪರಿಶೀಲಿಸಿಲು ವಿಚಾರಣೆ ವರದಿಯಲ್ಲಿನ ಅಂಶಗಳನ್ನು ಹೊರತುಪಡಿಸಿ ಕರ್ನಾಟಕ ನಾಗರಿಕ ಸೇವಾ(ಸಿಸಿಎ) ನಿಇಯಮಗಳು 1957ರ ನಿಯಮ 26ರಲ್ಲಿ ಹೇಳಿರುವಂತೆ ದಂಡನಾ ಆದೇಶವನ್ನು ಪುನರಾವಲೋಕಿಸಲು ಯಾವುದೇ ಸೂಕ್ತ ದಾಖಲೆಗಳು, ಪುರಾವೆಗಳು, ಹೊಸ ಅಂಶಗಳು ಮತ್ತು ಸಾಕಷ್ಟು ಸಕಾರಣಗಳು ಕಂಡುಬರುತ್ತಿಲ್ಲ ಎಂದೂ ಸಚಿವಾಲಯದ ಅಧಿಕಾರಿಗಳು ನಿಲುವು ತಳೆದಿರುವುದು ಪತ್ರದಿಂದ ಗೊತ್ತಾಗಿದೆ.

‘ಈ ಪ್ರಕರಣದ ಕುರಿತು ಆಪಾದಿತರಿಗೆ ಕಠಿಣ ದಂಡನೆ ವಿಧಿಸಲು ವಿಚಾರಣಾಧಿಕಾರಿಗಳ ವಿಚಾರನೆ ವರದಿಯಲ್ಲಿನ ಅಂಶಗಳನ್ನು ಹೊರತುಪಡಿಸಿ ಈ ಪ್ರಕರಣವನ್ನು ಪುನರ್ ಪರಿಶೀಲಿಸಲು ಕರ್ನಾಟಕ  ನಾಗರೀಕ ಸೇವಾ (ಸಿಸಿಎ) ನಿಯಮಗಳು 1957ರ ನಿಯಮ 26ರಲ್ಲಿ ತಿಳಿಸಿರುವಂತೆ ತಮ್ಮ ಶಿಫಾರಸಿಗೆ ಪೂರಕವಾದ ಹೊಸ ಅಂಶ, ಪುರಾವೆಗಳೊಂದಿಗೆ ಪ್ರಸ್ತಾವವನ್ನು ಸಲ್ಲಿಸಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಲಾಗುವುದು,’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕಲಬುರಗಿಯ ಹೆಚ್ಚುವರಿ ಆಯುಕ್ತರಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

ತುಮಕೂರು, ಕೋಲಾರ ಜಿಲ್ಲೆಯಲ್ಲಿನ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮವನ್ನು ಹೊರಗೆಳೆದಿದ್ದ ಲಂಚಮುಕ್ತ ನಿರ್ಮಾಣ ಕರ್ನಾಟಕ  ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಮುಖ್ಯಮಂತ್ರಿ,  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ, ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದರು. ಇದೀಗ   ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸರ್ಕಾರಕ್ಕೆ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದನ್ನು ಸ್ಮರಿಸಬಹುದು. ಈ ದೂರನ್ನಾಧರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಅವರು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದನ್ನು ಸ್ಮರಿಸಬಹುದು.

ಕೋಲಾರ ಜಿಲ್ಲೆಯೊಂದರಲ್ಲೇ 9 ಮಂದಿ ಶಿಕ್ಷಕರು ಅಕ್ರಮವಾಗಿ ನೇಮಕವಾಗಿದ್ದಾರೆ ಎಂದು ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯು ಸರ್ಕಾರಕ್ಕೆ ಪಟ್ಟಿಯನ್ನು ಒದಗಿಸಿದೆ. ಈ ಶಿಕ್ಷಕರ ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಶಿಕ್ಷಕರ ಹೆಸರುಗಳಿರಲಿಲ್ಲ ಎಂದು ವೇದಿಕೆಯು ಸರಕಾರದ ಗಮನಕ್ಕೆ ತಂದಿತ್ತು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News