ಅಂಗಾರಕನ ಅಂಗಳದಲ್ಲೇ ಉಳಿಯಿತೇ ‘ಮಾಮ್’?
ಮನೆಯ ಸಮೀಪದಲ್ಲಿಯೇ ಆಡಿಕೊಂಡಿದ್ದ ಮಗು ನಾಪತ್ತೆಯಾದಾಗ ಹೆತ್ತ ತಾಯಿಗೆ ಎಷ್ಟು ನೋವಾಗುವುದೋ, ಈಗ ಭಾರತಕ್ಕೂ ಸಹ ಅಂತಹ ವೇದನೆ ಕಾಡುತ್ತಿದೆ. ಒಂದಲ್ಲ ಒಂದು ದಿನ ಈ ಮಗು ಮನೆಯಿಂದ ದೂರವಾಗುತ್ತದೆ ಎಂಬ ಭರವಸೆ ಇದ್ದರೂ ಸಹ, ಈಗ ದಿಢೀರನೆ ಕಾಣೆಯಾಗಿರುವುದು ಕಸಿವಿಸಿ ಎನಿಸಿದೆ. ಮನೆಯಿಂದ ದೂರ ಉಳಿದರೂ ಚಿಂತೆಯಿಲ್ಲ. ಇಡೀ ವಿಶ್ವದಲ್ಲಿಯೇ ಖ್ಯಾತಿಗಳಿಸಿ, ತಾನು ಹೋದ ಉದ್ದೇಶವನ್ನು ಈಡೇರಿಸಿದೆ. ಈ ಬಗ್ಗೆ ತಾಯಿಗೆ ಹೆಮ್ಮೆ ಇದೆ. ಹೌದು ನಮ್ಮ ಮನೆಯಿಂದ ಪಕ್ಕದ ಮನೆಯಲ್ಲಿ ಆಡಲು ಹೋಗಿದ್ದ ‘ಮಾಮ್’ (Mars Orbiter Mission) ಈಗ ಸಂಪರ್ಕ ಕಳೆದುಕೊಂಡಿದೆ. 8 ವರ್ಷಗಳ ತನ್ನ ಸುದೀರ್ಘ ಪಯಣವನ್ನು ಬಹುತೇಕ ಮುಕ್ತಾಯಗೊಳಿಸಿದೆ. 2013 ನವೆಂಬರ್ 5, ಭಾರತೀಯರ ಪಾಲಿಗೆ ಮಹತ್ವದ ದಿನ. ಇಡೀ ಜಗತ್ತೇ ಭಾರತವನ್ನು ಬೆರಗು ಕಣ್ಣಿನಿಂದ ನೋಡಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯರು ಎನಿಸಿಕೊಂಡ ಯುನೈಟೆಡ್ ಸ್ಟೇಟ್ಸ್, ರಶ್ಯ, ಚೀನಾ ಮತ್ತು ಯುರೋಪ್ ರಾಷ್ಟ್ರಗಳಿಗೆ ಸಡ್ಡು ಹೊಡೆಯುವಂತೆ ಮಾಡಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ).
ಅಂದು ಭಾರತವು ತನ್ನ ಮೊದಲ ಕಾರ್ಯಾಚರಣೆಯಲ್ಲಿ ಮಂಗಳನನ್ನು ತಲುಪಲು ‘ಮಂಗಳಯಾನ’ ಹೆಸರಿನ ಕಕ್ಷೆಗಾಮಿ ನೌಕೆಯನ್ನು ಯಶಸ್ವಿಯಾಗಿ ಮಾಡಿತ್ತು. ಕೇವಲ ಉಡಾವಣೆ ಮಾತ್ರ ಯಶಸ್ವಿಯಾಗಲಿಲ್ಲ. ಮುಂದಿನ ಹತ್ತು ತಿಂಗಳಲ್ಲಿ ಅದು ನಿರ್ದಿಷ್ಟ ಕಕ್ಷೆಯನ್ನು ತಲುಪುವ ಮೂಲಕ ಅದರ ಉದ್ದೇಶ ಈಡೇರಿಕೆಯೂ ಸ್ಪಷ್ಟವಾದಾಗ ಬಾಹ್ಯಾಕಾಶ ದಿಗ್ಗಜರೆನಿಸಿದ ರಾಷ್ಟ್ರಗಳು ಬೆರಗಾಗಿದ್ದವು. ಆ ಮೂಲಕ ಭಾರತವು ಅಮೆರಿಕ, ರಶ್ಯ, ಯುರೋಪ್‌ನಂತಹ ದಿಗ್ಗಜ ಬಾಹ್ಯಾಕಾಶ ಪರಿಶೋಧಕರ ಕ್ಲಬ್‌ಗೆ ಸೇರಿತ್ತು. ಭಾರತೀಯರನ್ನು ವೈಜ್ಞಾನಿಕ ಪ್ರಪಂಚದ ವೇದಿಕೆಯಲ್ಲಿ ಇರಿಸುವ ಮೂಲಕ ಈ ಮಿಷನ್ ದೇಶಕ್ಕೆ ಹೆಮ್ಮೆಯ ಪ್ರತೀಕವಾಗಿದೆ. ಬಾಹ್ಯಾಕಾಶದ ಶಾಂತಿಯುತ ಅನ್ವೇಷಣೆಯಲ್ಲಿ ಭಾಗವಹಿಸುವ ಮತ್ತೊಂದು ರಾಷ್ಟ್ರವನ್ನು ಹೊಂದಲು ಜಗತ್ತಿಗೆ ಇದು ಮುಖ್ಯವಾಗಿತ್ತು. ಭಾರತಕ್ಕೆ ಇದು ಕೇವಲ ಪ್ರತಿಷ್ಠೆಯ ವಿಷಯವಾಗಿರಲಿಲ್ಲ. ತನ್ನ ಸ್ವಂತ ಜನರ ಅನುಕೂಲಕ್ಕಾಗಿ ತನ್ನ ಅಭಿವೃದ್ಧಿಯನ್ನು ಹೆಚ್ಚಿಸುವ ಭಾರತದ ಸಾಮರ್ಥ್ಯಕ್ಕೆ ಹೆಚ್ಚು ಪ್ರಸಕ್ತವಾಗಿತ್ತು.
ದೂರಸಂಪರ್ಕ, ಹವಾಮಾನ ಮೇಲ್ವಿಚಾರಣೆ, ನೇವಿಗೇಷನ್ ಸೇರಿದಂತೆ ಬಾಹ್ಯಾಕಾಶ ಬಳಕೆಯೊಂದಿಗೆ ವೈಜ್ಞಾನಿಕ ಪರಿಶೋಧನೆಯನ್ನು ಸಂಯೋಜಿಸುವ ಮತ್ತು ಸಂಯೋಜಿತ ಬಾಹ್ಯಾಕಾಶ ಕಾರ್ಯಕ್ರಮಗಳ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಸೇರಿದಂತೆ 21ನೇ ಶತಮಾನದ ತಾಂತ್ರಿಕ ವಿಭಾಗಗಳ ಶಿಕ್ಷಣವನ್ನು ಉತ್ತೇಜಿಸಲು ದೊಡ್ಡ ಪ್ರಯೋಜನವಾಗಿದೆ. ಆ ಮೂಲಕ ದೇಶದ ಸುಧಾರಣೆ ಮತ್ತು ಭದ್ರತೆಗೆ ಸಹಾಯ ಮಾಡುವ ಮೀಸಲಾದ ಸಂಪನ್ಮೂಲಗಳು ಮತ್ತು ಸೇವೆಗಳನ್ನು ಒದಗಿಸುವುದು ಅಗತ್ಯವಾಗಿತ್ತು. ಈ ಕಾರಣಗಳಿಗಾಗಿ ‘ಮಾಮ್’ ಯಶಸ್ವಿಯಾಗಿತ್ತು.
ತುಲನಾತ್ಮಕವಾಗಿ ಹೋಲಿಕೆ ಮಾಡುವುದಾದರೆ ‘ಮಾಮ್’ ಒಂದು ಸಾಧಾರಣ ಮಿಷನ್ ಆಗಿತ್ತು. ಇದು ಮಂಗಳನ ಮೇಲ್ಮೈಯ ಕೆಲವು ಚಿತ್ರಣ ಮತ್ತು ಸ್ಪೆಕ್ಟ್ರೋಸ್ಕೋಪಿಕ್ ಅವಲೋಕನಗಳನ್ನು ಮತ್ತು ವಾತಾವರಣದ ಕೆಲವು ಡೈನಾಮಿಕ್ಸ್ ಮತ್ತು ಸಂಯೋಜನೆಯ ಅಧ್ಯಯನಗಳನ್ನು ಒದಗಿಸುವ ಉದ್ದೇಶ ಹೊಂದಿತ್ತು. ಜೊತೆಗೆ ಬಹಳ ಮುಖ್ಯವಾಗಿ ಮಿಥೇನ್ ಹೊರಸೂಸುವಿಕೆಯನ್ನು ಅಧ್ಯಯನ ಮಾಡುವ ಉದ್ದೇಶವಿತ್ತು. ಏಕೆಂದರೆ ಹಿಂದಿನ ಕಾರ್ಯಾಚರಣೆಗಳಿಂದ ಗಮನಿಸಲಾದ ಮಿಥೇನ್‌ನ ನಿರಂತರ ಉಪಸ್ಥಿತಿಯು ಸಕ್ರಿಯ ಉತ್ಪಾದನಾ ಕಾರ್ಯವಿಧಾನವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡುವುದಾಗಿತ್ತು. ಮಾಮ್ ಮಂಗಳನ ಅಂಗಳದಲ್ಲಿನ ಮಿಥೇನ್ ಮೂಲದ ಬಗ್ಗೆ ಕೆಲವು ಸುಳಿವುಗಳನ್ನು ನೀಡುವ ಭರವಸೆಯೂ ಇತ್ತು.
ಇವೆಲ್ಲವುಗಳಿಗಿಂತ ಮಾಮ್ ಅತಿ ಕಡಿಮೆ ವೆಚ್ಚದ ಮಿಷನ್ ಆಗಿತ್ತು. ಇತರ ರಾಷ್ಟ್ರಗಳ ಮಂಗಳಯಾನಗಳಿಗೆ ಹೋಲಿಸಿದರೆ, ಇಸ್ರೋ ನಿರ್ಮಿಸಿದ ಮಾಮ್ ಚಿಕ್ಕ ರಾಕೆಟ್ ಮತ್ತು ಪೇಲೋಡ್ ಅನ್ನು ಹೊಂದಿತ್ತು. ಇದರ ಒಟ್ಟು ವೆಚ್ಚ ಕೇವಲ 450 ಕೋಟಿ ರೂ.ಯಾಗಿತ್ತು. ಬೇರೆ ಬೇರೆ ರಾಷ್ಟ್ರಗಳು ಇದಕ್ಕಿಂತ ಎರಡು ಪಟ್ಟು ವೆಚ್ಚದ ಮಿಷನ್‌ಗಳನ್ನು ಕಳಿಸಿದ್ದರೂ ಸಹ ಯಶಸ್ವಿಯಾಗಿರಲಿಲ್ಲ. ಅಲ್ಲದೇ, 2013ಕ್ಕೂ ಮೊದಲು ಜಗತ್ತಿನ ವಿವಿಧ ರಾಷ್ಟ್ರಗಳು ಮಂಗಳನ ಕಕ್ಷೆ ತಲುಪಲು 50ಕ್ಕೂ ಹೆಚ್ಚು ಬಾರಿ ಪ್ರಯತ್ನಿಸಿದ್ದವು. ಅದರಲ್ಲಿ 30 ಪ್ರಯತ್ನಗಳು ವಿಫಲವಾಗಿದ್ದವು. ಈ ಬಹುತೇಕ ಯೋಜನೆಗಳೆಲ್ಲ ಉಡಾವಣೆ ಹಂತ, ಭೂ ಕಕ್ಷೆಯಿಂದ ಮಂಗಳ ಕಕ್ಷೆಗೆ ಸೇರುವ ಹಾದಿಯಲ್ಲಿ ವಿಫಲಗೊಂಡಿದ್ದವು. ಆದರೆ ಭಾರತವು ಚೊಚ್ಚಲ ಯತ್ನದಲ್ಲೇ ಯಶಸ್ಸು ಗಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಪಾತ್ರವಾಗಿತ್ತು ಮತ್ತು ಮಂಗಳನ ಕಕ್ಷೆಗೆ ನೌಕೆ ಕಳುಹಿಸಿದ ಏಶ್ಯದ ಮೊದಲ ರಾಷ್ಟ್ರ ಎನಿಸಿಕೊಂಡಿತ್ತು. ಹೀಗೆ ವಿವಿಧ ಅಂಶಗಳಿಗೆ ಪ್ರಥಮವಾಗಿದ್ದ ‘ಮಾಮ್’ ಇತ್ತೀಚೆಗೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.
ನವೆಂಬರ್ 2013ರಲ್ಲಿ ಉಡಾವಣೆಯಾದ ನೌಕೆಯು, ಸೆಪ್ಟಂಬರ್ 2014ರಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ತಲುಪಿತ್ತು. ಅಲ್ಲಿಂದ ಇಲ್ಲಿಯವರೆಗಿನ ತನ್ನ ಸುದೀರ್ಘ ಪಯಣವನ್ನು ಅಂತ್ಯಗೊಳಿಸಿದೆ. ಇದರ ಅಂತ್ಯಕ್ಕೆ ನಿಖರ ಕಾರಣಗಳನ್ನು ಇಸ್ರೋ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ ಖಗೋಳ ತಜ್ಞರು ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಮಾಮ್ ಎಪ್ರಿಲ್ 2020ರಲ್ಲಿಯೇ ದೀರ್ಘಕಾಲದ ಪಯಣದಿಂದ ಸುಸ್ತಾಗಿತ್ತು. ಅದರಲ್ಲಿನ ಸ್ವಯಂಚಾಲಿತ ಕಾರ್ಯವಿಧಾನದಲ್ಲಿ ಸಂವಹನ ಅಡಚಣೆ ಉಂಟಾಗಿರಬಹುದು, ಉಪಗ್ರಹದ ಬ್ಯಾಟರಿ ಖಾಲಿಯಾಗಿದ್ದು ಸಂವಹನಕ್ಕೆ ಅಡಚಣೆಯಾಗಿರಬಹುದು, ಆರ್ಬಿಟರ್‌ನಲ್ಲಿ ಪ್ರೊಪೆಲ್ಲಂಟ್ ಖಾಲಿಯಾಗಿರಬಹುದು ಎಂಬುದು ಖಗೋಳತಜ್ಞರ ಅನಿಸಿಕೆ.
‘ಮಾಮ್’ ಸಂವಹನಕ್ಕಾಗಿ ಸ್ವಯಂ ಚಾಲಿತ ಬ್ಯಾಟರಿ ವ್ಯವಸ್ಥೆ ಹೊಂದಿತ್ತು. ಅದಕ್ಕಾಗಿ ಸೌರ ರಚನೆಯ ರೆಕ್ಕೆಯನ್ನು ಹೊಂದಿದ್ದು, ಬಾಹ್ಯಾಕಾಶ ನೌಕೆಯ ಒಂದು ಬದಿಯಲ್ಲಿ ಮೂರು ಫಲಕಗಳನ್ನು ಅಳವಡಿಸಲಾಗಿತ್ತು. ಇದರಿಂದ ಅದು 800 ವ್ಯಾಟ್‌ಗಳ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಲಿಥಿಯಂ ಐಯಾನ್ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಿತ್ತು. ಆದರೆ ಬಾಹ್ಯಾಕಾಶ ನೌಕೆಯು ಇತ್ತೀಚೆಗೆ ಗ್ರಹಣಗಳ ಸರಣಿಯನ್ನು ಎದುರಿಸಿದೆ. ಇತ್ತೀಚೆಗೆ ಮಂಗಳನಲ್ಲಿ ಏಳೂವರೆ ಗಂಟೆಗಳ ಕಾಲ ಗ್ರಹಣಗಳು ಸಂಭವಿಸಿದ್ದವು. ಉಪಗ್ರಹದ ಬ್ಯಾಟರಿಯನ್ನು ಕೇವಲ ಒಂದು ಗಂಟೆ ಮತ್ತು ನಲವತ್ತು ನಿಮಿಷಗಳ ಗ್ರಹಣಗಳನ್ನು ತಡೆದುಕೊಳ್ಳಲು ಮಾತ್ರ ನಿರ್ಮಿಸಲಾಗಿತ್ತು. ದೀರ್ಘಾವಧಿಯ ಗ್ರಹಣವು ಬ್ಯಾಟರಿಗಳನ್ನು ಸುರಕ್ಷಿತ ಮಿತಿಯನ್ನು ಮೀರಿ ಖಾಲಿ ಮಾಡಿರಬಹುದು. ಮಾಮ್ ಮಂಗಳನಲ್ಲಿ ಮಿಥೇನ್ ಅನ್ನು ಹುಡುಕಲು ವಿನ್ಯಾಸಗೊಳಿಸಲಾದ ಸಂವೇದಕವನ್ನು ಸಹ ಹೊತ್ತೊಯ್ದಿತ್ತು. ಮಿಥೇನ್ ಮೂಲತಃ ಪ್ರಾಣಿಗಳಿಂದ ಉತ್ಪತ್ತಿಯಾಗುವ ಅನಿಲವಾಗಿದೆ. ಅದು ಮಂಗಳನಲ್ಲಿದೆ ಎಂದರೆ ಖಂಡಿತವಾಗಿಯೂ ಅಲ್ಲಿ ಜೀವಿಗಳ ಅಸ್ತಿತ್ವ ಇರಬಹುದು ಎಂಬ ಶಂಕೆ ಕಾಡುತ್ತದೆ. ಮಾಮ್ ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ರವಾನಿಸಿದೆ. ಆದರೆ ಸಂಶೋಧನೆಗಳನ್ನು ಇಸ್ರೋ ಇನ್ನೂ ಬಹಿರಂಗಪಡಿಸಿಲ್ಲ.
ಒಂದುವೇಳೆ ಮಂಗಳನಲ್ಲಿ ಜೀವಕಣಗಳು ಎಂದಾದರೊಮ್ಮೆ ಅಲ್ಲಿ ಇದ್ದವೇ ಅಥವಾ ಈಗಲೂ ಇವೆಯೇ ಎಂಬುದು ಪತ್ತೆಯಾದರೆ ಮುಂದೊಂದು ದಿನ ಅಂಗಾರಕನ ಅಂಗಳದಲ್ಲಿ ಮಾನವನ ಜೀವನ ಸಾಧ್ಯವಾಗಬಹುದೇನೋ? ಕಾದುನೋಡಬೇಕಿದೆ. ಒಟ್ಟಾರೆ ಅಂಗಾರಕನ ವಾತಾವರಣ, ಮೇಲ್ಮೈ ಲಕ್ಷಣ, ಗ್ರಹದ ವಿಕಾಸ, ಜೀವಕಣಗಳ ಸಂಭಾವ್ಯ ಅಸ್ತಿತ್ವ ಮತ್ತಿತರ ಪ್ರಶ್ನೆಗಳಿಗೆ ಸದ್ಯದಲ್ಲೇ ಉತ್ತರ ದೊರೆಯುವ ನಿರೀಕ್ಷೆ ಇದೆ. ಮಂಗಳಯಾನದಿಂದ ಪಡೆದ ಅನುಭವ ಮತ್ತು ಅದಕ್ಕಾಗಿ ನಿರ್ಮಿಸಲಾದ ತಂತ್ರಜ್ಞಾನಗಳೊಂದಿಗೆ, ಶುಕ್ರ ಆರ್ಬಿಟರ್ ಶುಕ್ರಯಾನ್ ಮತ್ತು ಆದಿತ್ಯ ಎಲ್-1 ಸೌರ ವೀಕ್ಷಣಾಲಯದಂತಹ ಆಂತರಿಕ ಸೌರವ್ಯೆಹವನ್ನು ಅನ್ವೇಷಿಸಲು ಇಸ್ರೋ ಹೆಚ್ಚಿನ ಕಾರ್ಯಾಚರಣೆಗಳನ್ನು ಯೋಜಿಸುತ್ತಿದೆ. 2024 ಅಥವಾ 2026ರಲ್ಲಿ ನವೀಕರಿಸಿದ ಆರ್ಬಿಟರ್ ಮತ್ತು 100 ಕಿಲೋಗ್ರಾಂಗಳಷ್ಟು (ಸುಮಾರು 220 ಪೌಂಡ್) ವೈಜ್ಞಾನಿಕ ಉಪಕರಣಗಳೊಂದಿಗೆ ಮಂಗಳಯಾನ-2 ಅನ್ನು ಉಡಾವಣೆ ಮಾಡಲು ಇಸ್ರೋ ಯೋಜಿಸುತ್ತಿದೆ. ಇಸ್ರೋದ ಅನುಭವಿ ವಿಜ್ಞಾನಿಗಳ ಇತ್ತೀಚಿನ ಭಾಷಣವು ಇಸ್ರೋ ಮಾರ್ಸ್ ಲ್ಯಾಂಡಿಂಗ್ ತಂತ್ರಜ್ಞಾನಗಳಲ್ಲಿಯೂ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಹೇಳುತ್ತದೆ. ಒಟ್ಟಾರೆಯಾಗಿ, ಮಿಷನ್ ಮಂಗಳಯಾನವು ಭಾರತದ ಹೊಸ ಗ್ರಹಗಳ ಕಾರ್ಯಕ್ರಮಕ್ಕಾಗಿ ಒಳನೋಟಗಳ ಹೊಸ ಪ್ರಪಂಚವನ್ನು ಸೃಷ್ಟಿಸಿದೆ. ಹಾಗಾಗಿ ಭಾರತದ ಪಾಲಿಗೆ ‘ಮಾಮ್’ ಅದ್ಭುತಗಳನ್ನು ಸೃಷ್ಟಿಸಿದ ಮಿಷನ್ ಆಗಿದೆ. ಇತ್ತೀಚೆಗೆ ಮುದ್ರಣಗೊಂಡ 2000 ರೂಪಾಯಿ ನೋಟಿನಲ್ಲೂ ಸ್ಥಾನ ಪಡೆಯುವ ಮೂಲಕ ಭಾರತೀಯ ಆರ್ಥಿಕತೆಯ ಹೆಗ್ಗುರುತಾಗಿದೆ ಎಂದರೆ ತಪ್ಪಲ್ಲ. ಅಲ್ಲವೇ?