ದಿಲ್ಲಿ ಗಲಭೆ: ಹೆಚ್ಚುವರಿ ಪಡೆಗಳ ನಿಯೋಜನೆಯಲ್ಲಿ ವಿಳಂಬದಿಂದ ಕೈಮೀರಿದ್ದ ಪರಿಸ್ಥಿತಿ; ಸತ್ಯಶೋಧನಾ ಸಮಿತಿ ವರದಿ
ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 2020 ರಲ್ಲಿ ಸಂಭವಿಸಿದ ಗಲಭೆಗಳ ಸಂದರ್ಭ ಕೇಂದ್ರ ಗೃಹ ಸಚಿವಾಲಯವು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲು ಶಂಕಾಸ್ಪದವಾಗಿ ವಿಳಂಬಿಸಿತ್ತು ಎಂದು ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಮದನ್ ಬಿ ಲೋಕೂರ್ (former Supreme Court judge Madan B. Lokur) ಅವರ ನೇತೃತ್ವದ ಸತ್ಯ-ಶೋಧನಾ ಸಮಿತಿ (fact-finding committee) ಹೇಳಿದೆ ಎಂದು thewire.in ವರದಿ ಮಾಡಿದೆ.
ಎರಡು ಸಮುದಾಯಗಳ ನಡುವಿನ ಉದ್ವಿಗ್ನತೆ ಭುಗಿಲೇಳಬಹುದೆಂದು ವಿಶೇಷ ಬ್ರ್ಯಾಂಚ್ ಹಾಗೂ ಗುಪ್ತಚರ ಘಟಕಗಳಿಂದ ಕನಿಷ್ಠ ಆರು ಆಂತರಿಕ ಎಚ್ಚರಿಕೆಗಳನ್ನು ಗಲಭೆ ಆರಂಭಗೊಂಡ ಫೆಬ್ರವರಿ 23 ರಂದು ದಿಲ್ಲಿ ಪೊಲೀಸರು ಪಡೆದಿದ್ದರೂ, ಫೆಬ್ರವರಿ 26 ರಂದು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಸಮಿತಿ ಕಂಡುಕೊಂಡಿದೆ.
ಗೃಹ ಸಚಿವಾಲಯ ತೋರಿದ ನಿರ್ಲಕ್ಷ್ಯದ ಧೋರಣೆಯು ಗಲಭೆಕೋರರಿಗೆ ಇನ್ನಷ್ಟು ಸಮಸ್ಯೆ ಸೃಷ್ಟಿಸಲು ಹಾಗೂ ಹಿಂಸೆ ನಡೆಸಲು ಮೂರು ದಿನಗಳ ಕಾಲ ಸಹಾಯ ಮಾಡಿತ್ತು ಎಂದು ಸಮಿತಿ ಹೇಳಿದೆ.
"ಕೇಂದ್ರ ಗೃಹ ಸಚಿವಾಲಯದ ನಿರ್ಲಕ್ಷ್ಯದ ಪ್ರತಿಕ್ರಿಯೆ, ದಿಲ್ಲಿ ಪೊಲೀಸರ ಧೋರಣೆ, ಮಾಧ್ಯಮಗಳಿಂದ ವಿಭಜನಾತ್ಮಕ ವಿಶ್ಲೇಷಣೆ ಮತ್ತು ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ಮುಸ್ಲಿಮರ ವಿರುದ್ಧ ಬಿಜೆಪಿಯ ದ್ವೇಷದ ಅಭಿಯಾನವು ಜೊತೆಯಾಗಿ ಈ ಗಲಭೆಗೆ ಕಾರಣವಾಯಿತು,'' ಎಂದು ಸಮಿತಿ ಹೇಳಿದೆ.
ಗಲಭೆಗೆ ಸಂಬಂಧಿಸಿದ 758 ಎಫ್ಐಆರ್ ಗಳ ಪೈಕಿ ಸಮಿತಿಯು 752 ಎಫ್ಐಆರ್ ಗಳನ್ನು ವಿಶ್ಲೇಷಿಸಿತ್ತು ಹಾಗೂ ಹೆಚ್ಚಾಗಿ ಮುಸ್ಲಿಮರಾಗಿದ್ದ ಸಿಎಎ ವಿರೋಧಿ ಪ್ರತಿಭಟನಾಕಾರರು ಹಾಗೂ ಹಿಂದುತ್ವ ಕಾರ್ಯಕರ್ತರು-ಈ ಎರಡು ಗುಂಪುಗಳ ಕುರಿತಂತೆ ದಿಲ್ಲಿ ಪೊಲೀಸರ ನಡೆ ತಾರತಮ್ಯದಿಂದ ಕೂಡಿತ್ತು, ಎಂದು ವರದಿ ಹೇಳಿದೆ.
ದಿಲ್ಲಿ ಪೊಲೀಸರು 700 ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿರುವ ಹೊರತಾಗಿ ಅಕ್ಟೋಬರ್ 2021 ಹಾಗೂ ಜನವರಿ 2022 ನಡುವೆ ಕೇವಲ 6 ಚಾರ್ಜ್ ಶೀಟ್ ಗಳನ್ನು ಸಲ್ಲಿಸಿರುವುದನ್ನೂ ಸಮಿತಿ ಗಣನೆಗೆ ತೆಗೆದುಕೊಂಡಿದೆ. ಎಫ್ಐಆರ್ 59 ರಲ್ಲಿ ಯುಎಪಿಎ(UAPA) ಹೇರಿರುವುದು ಅಸಮರ್ಥನೀಯ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ಈ ಪಂಚ ಸದಸ್ಯರ ಸಮಿತಿಯಲ್ಲಿ ದಿಲ್ಲಿ ಮತ್ತು ಮದ್ರಾಸ್ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಎ ಪಿ ಶಾ, ದಿಲ್ಲಿ ಹೈಕೋರ್ಟಿನ ಮಾಜಿ ನ್ಯಾಯಾಧೀಶ ಆರ್ ಎಸ್ ಲೋಧಿ, ಪಾಟ್ನಾ ಹೈಕೋರ್ಟಿನ ಮಾಜಿ ನ್ಯಾಯಾಧೀಶೆ ಅಂಜನಾ ಪ್ರಕಾಶ್ ಹಾಗೂ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ಇದ್ದರು.
ಇದನ್ನೂ ಓದಿ: 108ರ ವೃದ್ಧೆಯ ಕಾಲುಂಗರ ಕದಿಯಲು ಪಾದವನ್ನೇ ಕತ್ತರಿಸಿದ ದರೋಡೆಕೋರರು !