ಉಕ್ರೇನ್‍ಗೆ ವಾಯುರಕ್ಷಣಾ ವ್ಯವಸ್ಥೆ: ಜೋ ಬೈಡನ್ ಆಶ್ವಾಸನೆ

Update: 2022-10-11 03:00 GMT
(ಫೋಟೊ - PTI)

ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ವ್ಯಾಪಕ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ, ಉಕ್ರೇನ್ ನೆರವಿಗೆ ಮುಂದಾಗಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಉಕ್ರೇನ್‍ಗೆ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಒದಗಿಸುವುದಾಗಿ ಘೋಷಿಸಿದ್ದಾರೆ.

ಕೀವ್ ಮತ್ತು ಉಕ್ರೇನ್‍ನ ಇತರ ಪ್ರಮುಖ ನಗರಗಳ ಮೇಲೆ ರಷ್ಯಾ ಭೀಕರ ದಾಳಿ ನಡೆಸಿದ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ಝೆಲೆನ್ಸ್ಕಿ ಅವರ ಜತೆ ದೂರವಾಣಿ ಮೂಲಕ ಮಾತನಾಡಿದ ಅಮೆರಿಕಾ ಅಧ್ಯಕ್ಷರು ಈ ಭರವಸೆ ನೀಡಿದ್ದಾರೆ ಎಂದು ಶ್ವೇತಭವನ ಪ್ರಕಟಿಸಿದೆ.

ತನ್ನನ್ನು ರಕ್ಷಿಸಿಕೊಳ್ಳಲು ಕೀವ್‍ಗೆ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಸೇರಿದಂತೆ ಅಗತ್ಯವಾದ ಎಲ್ಲ ನೆರವನ್ನೂ ನಿಡುವುದಾಗಿ ಬೈಡನ್ ಹೇಳಿದ್ದಾರೆ. ಬೈಡನ್ ಜತೆ ಮಾತುಕತೆ ನಡೆಸಿದ ಬಳಿಕ ಟ್ವೀಟ್ ಮಾಡಿದ ಉಕ್ರೇನ್ ಅಧ್ಯಕ್ಷರು, "ವಾಯು ರಕ್ಷಣಾ ವ್ಯವಸ್ಥೆ ಪ್ರಸ್ತುತ ನಮ್ಮ ರಕ್ಷಣಾ ಕಾರ್ಯಾಚರಣೆಯ ಪ್ರಥಮ ಆದ್ಯತೆ" ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾದ ಹೇಯ ದಾಳಿಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ಬೈಡನ್ ಸಾಂತ್ವನ ಹೇಳಿದ್ದಾರೆ ಎಂದೂ ಶ್ವೇತಭವನದ ಪ್ರಕಟಣೆ ಹೇಳಿದೆ. ರಷ್ಯಾದ ಯುದ್ಧಾಪರಾಧ ಮತ್ತು ಅದು ಎಸಗುತ್ತಿರುವ ದೌರ್ಜನ್ಯಕ್ಕೆ ತಕ್ಕ ಬೆಲೆ ತೆರುವಂತೆ ರಷ್ಯಾವನ್ನು ಹೊಣೆ ಮಾಡಲು ಅಗತ್ಯ ಕ್ರಮಗಳ ಬಗ್ಗೆ ನ್ಯಾಟೊ ಕೂಟದ ಮಿತ್ರರಾಷ್ಟ್ರಗಳ ಜತೆ ಚರ್ಚಿಸಲಾಗುತ್ತಿದೆ ಎಂದೂ ಬೈಡನ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News