ಫೀಡರ್‌ಗಳಿಗೆ ಮೀಟರ್ ಅಳವಡಿಕೆ ಟೆಂಡರ್‌ನಲ್ಲಿ ಅಕ್ರಮ?

Update: 2022-10-11 04:32 GMT

ಬೆಂಗಳೂರು: ಫೀಡರ್‌ಗಳಿಗೆ ಮೀಟರ್‌ಗಳನ್ನು ಅಳವಡಿಸುವ ಮುನ್ನ ತಾಂತ್ರಿಕವಾಗಿ ನಿರ್ದಿಷ್ಟ ನಿರೂಪಣೆಗಳು, ಪ್ರಮಾಣ ಪತ್ರ, ಸಂರಕ್ಷಣೆ, ಕಾರ್ಯನಿರ್ವಹಣಾ ಪ್ರಮಾಣ ಪತ್ರಗಳನ್ನು ಖಚಿತಪಡಿಸಿ ಕೊಳ್ಳದೆಯೇ ಟೆಂಡರ್ ಆಹ್ವಾನಿಸಲಾಗಿತ್ತು. ಅಲ್ಲದೆ ದಾಖಲೆಯಲ್ಲಿ ಸಮರ್ಥನೀಯ ಕಾರಣಗಳಿಲ್ಲದಿದ್ದರೂ ಟೆಂಡರ್ ಆಹ್ವಾನ ದಿನಾಂಕದಿಂದ 13 ತಿಂಗಳ ನಂತರ ಮೀಟರ್‌ಗಳನ್ನು ಅಳವಡಿಸುವ ಉದ್ದೇಶದ 30.79 ಕೋಟಿ ರೂ. ಮೊತ್ತದ  ಯೋಜನೆಯನ್ನು  ಗುತ್ತಿಗೆ ನೀಡಲಾಗಿತ್ತು ಎಂಬುದನ್ನು ಮಹಾಲೆಕ್ಕಪರಿಶೋಧಕರ ವರದಿಯು ಬಹಿರಂಗಗೊಳಿಸಿದೆ.

ಕಾಮಗಾರಿಗಳ ಆದೇಶಗಳನ್ನು ಗುತ್ತಿಗೆದಾರರಿಗೆ ನೀಡುವ ಮುನ್ನ ಅಗತ್ಯವಿದ್ದಂತಹ ಅನುಮತಿಗಳನ್ನು ಪಡೆದುಕೊಳ್ಳವುದರಲ್ಲಿಯೂ ಹಿಂದಿನ ಕಾಂಗ್ರೆಸ್ ಸರಕಾರವು ವಿಳಂಬ ಧೋರಣೆ ಅನುಸರಿಸಿತ್ತು. ಹೀಗಾಗಿ ದೀನ್‌ದಯಾಳ್ ಉಪಾಧ್ಯಾಯ ಯೋಜನೆಯಿಂದಲೇ ವಿದ್ಯುತ್ ಸರಬರಾಜು ಕಂಪೆನಿಗಳು ಹೊರಬಂದಿದ್ದವು ಎಂಬುದನ್ನು ಸಿಎಜಿ ವರದಿಯು ಮುನ್ನೆಲೆಗೆ ತಂದಿದೆ.

 ಹಾಗೆಯೇ 62.87 ಕೋಟಿ ರೂ. ಮೊತ್ತದಲ್ಲಿ 30,069 ವಿದ್ಯುತ್ ವಿತರಣಾ ಟ್ರಾನ್ಸ್‌ಫಾರ್ಮರ್ ಕೇಂದ್ರಗಳಿಗೆ  ಮೀಟರ್ ಅಳವಡಿಕೆಯನ್ನು ಮಾಡಲಾಗಿತ್ತು. ಆದರೆ  ಮೀಟರ್‌ಗಳನ್ನು ಸಿಮ್ ಮತ್ತು ಮೋಡೆಮ್‌ನ ಅಳವಡಿಕೆ ಮೂಲಕ ಅಂತರ್ಗತಗೊಳಿಸಲಾಗಿರಲಿಲ್ಲ. ಹೀಗಾಗಿ ವಿದ್ಯುತ್‌ನ ಪ್ರತಿಯೊಂದು ವಾಸ್ತವಿಕ ಸಮಯದ ಸರಬರಾಜನ್ನು ಸೆರೆಹಿಡಿಯುವುದು ಸಾಧ್ಯವಾಗಲಿಲ್ಲ. ಕಡೆಗೆ ಇದು ಮೀಟರ್‌ಗಳನ್ನು ಅಳವಡಿಸುವ ಉದ್ದೇಶವನ್ನೇ ವಿಫಲಗೊಳಿಸಿತ್ತು ಎಂದೂ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 ಇನ್ನು 18,831 ವಿದ್ಯುತ್ ವಿತರಣಾ ಟ್ರಾನ್ಸ್‌ಫಾರ್ಮರ್‌ಗಳ ಕೇಂದ್ರಗಳ ಪೈಕಿ ಕೇವಲ 2,098 ಮಾತ್ರ ವಿದ್ಯುತ್ ಲೆಕ್ಕ ಪರಿಶೋಧನೆ ನಡೆಸಲಾಗಿತ್ತು. ಇನ್ನುಳಿದ ಕೇಂದ್ರಗಳಲ್ಲಿ ಲೆಕ್ಕಪರಿಶೋಧನೆ ನಡೆಸದ ಕಾರಣ ಮೀಟರ್ ಅಳವಡಿಸುವ ಉದ್ದೇಶವನ್ನೇ ವಿಫಲವಾಗಿಸುವ ಮೂಲಕ ಕರ್ನಾಟಕ ವಿದ್ಯುತ್ ವಿತರಣಾ ಸಂಹಿತೆಯನ್ನೂ ಉಲ್ಲಂಘಿಸಿತ್ತು.

 ‘ಮೀಟರ್‌ಗಳನ್ನು ತಯಾರಿಸುವ ಗುತ್ತಿಗೆದಾರರ ಅನುಭವ, ಈ ಹಿಂದೆ ಸರಬರಾಜು ಮಾಡಿದ್ದ ಮೀಟರ್‌ಗಳ ಪರಿಮಾಣ/ಸಂಖ್ಯೆ, ಮೀಟರ್‌ಗಳ ತಾಂತ್ರಿಕ ನಿರ್ದಿಷ್ಟ ನಿರೂಪಣೆಗಳನ್ನು ಖಚಿತಪಡಿಸಿಕೊಳ್ಳದೆಯೇ ಎರಡು ಟೆಂಡರ್‌ಗಳನ್ನು 2016ರ ನವೆಂಬರ್ ಮತ್ತು 2017ರ ಎಪ್ರಿಲ್‌ನಲ್ಲಿ  ಆಹ್ವಾನಿಸಲಾಗಿತ್ತು. ಮೊದಲ ಮತ್ತು ಎರಡನೆಯ ಟೆಂಡರ್‌ಗಳಿಗೆ ಪ್ರತಿಕ್ರಿಯೆ ಇಲ್ಲದ ಕಾರಣ ರದ್ದುಗೊಳಿ ಸಲಾಗಿತ್ತು. 2017ರ ಜುಲೈನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ತೆರೆದಿದ್ದ ತಾಂತ್ರಿಕ ಮತ್ತು ವಾಣಿಜ್ಯ ಬಿಡ್‌ನಲ್ಲಿಯೂ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಅದನ್ನು ರದ್ದುಗೊಳಿಸಿದ್ದ ನಿಗಮವು 2018ರ ಜನವರಿಯಲ್ಲಿ ಮೂರನೇ ಟೆಂಡರ್ ಆಹ್ವಾನಿಸಿತ್ತು. ಮಾರ್ಚ್ 2019ರಲ್ಲಿ ಟೆಂಡರ್ ಆಹ್ವಾನ ದಿನಾಂಕ (ಜನವರಿ 2018) 13 ತಿಂಗಳ ಅವಧಿ ನಂತರ ದಾಖಲೆಯಲ್ಲಿ ಸಮರ್ಥನೀಯ ಕಾರಣಗಳಿಲ್ಲದೇ ನೀಡಲಾಗಿತ್ತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ಅದೇ ರೀತಿ 325.63 ಕೋಟಿ ರೂ. ಮೊತ್ತದಲ್ಲಿ ಫೀಡರ್‌ಗಳನ್ನು ಪ್ರತ್ಯೇಕಗೊಳಿಸುವ ಕಾಮಗಾರಿಗಳನ್ನು ನಡೆಸುವ ಮುನ್ನ ರೈಲ್ವೆ ಪ್ರಾಧಿಕಾರದಿಂದ ಸಮಯೋಚಿತವಾಗಿ ಅನುಮತಿ ಪಡೆಯದ ಕಾರಣ ಕಾಮಗಾರಿಗಳು ನಿಗದಿತ ದಿನಾಂಕದೊಳಗೆ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಶಿವಮೊಗ್ಗದಲ್ಲಿನ 68 ಫೀಡರ್‌ಗಳ ಪೈಕಿ 9 ಹಾಗೂ ಚಿಕ್ಕಮಗಳೂರಲ್ಲಿನ 56 ಫೀಡರ್‌ಗಳ ಪೈಕಿ 7 ಮಾತ್ರ ಜುಲೈ 2018ಕ್ಕೆ ಬದಲಿಗೆ 2022ರ ಮಾರ್ಚ್‌ನಲ್ಲಿ ಪೂರ್ಣಗೊಂಡಿದ್ದವು. ವಿಳಂಬವಾಗಿದ್ದರಿಂದಾಗಿ  ಶಿವಮೊಗ್ಗದಲ್ಲಿ 111 ಗ್ರಾಮಗಳು ಮತ್ತು ಚಿಕ್ಕಮಗಳೂರಿನ 93 ಗ್ರಾಮ ಸೇರಿ ಒಟ್ಟು 204 ಗ್ರಾಮಗಳು ಮೂರು ವರ್ಷಗಳಿಂದ ವಿದ್ಯುತ್ ಸರಬರಾಜಿನಿಂದ ವಂಚಿತವಾಗಿದ್ದವು ಎಂಬುದು ಮಹಾಲೆಕ್ಕ ಪರಿಶೋಧಕರ ವರದಿಯಲ್ಲಿ ವಿವರಿಸಲಾಗಿದೆ.

 325.63 ಕೋಟಿ ರೂ. ಮೊತ್ತದಲ್ಲಿ ಫೀಡರ್‌ಗಳನ್ನು ಪ್ರತ್ಯೇಕಗೊಳಿಸುವ ಕಾಮಗಾರಿ ಗುತ್ತಿಗೆಯನ್ನು ಮುಂಬೈನ ಬಾಲಾಜಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಮತ್ತು ಬೆಂಗಳೂರಿನ ಏಷಿಯನ್ ಫ್ಯಾಬ್ ಟೆಕ್ ಲಿಮಿಟೆಡ್‌ಗೆ 2017ರ ಮಾರ್ಚ್‌ನಲ್ಲಿ ನೀಡಲಾಗಿತ್ತು. ಗುತ್ತಿಗೆ ಅವಧಿಯು ಕಾಮಗಾರಿ ಆದೇಶ ನೀಡಿದ ದಿನಾಂಕದಿಂದ 15 ತಿಂಗಳು ಆಗಿತ್ತು. ಅಂದರೆ ಜುಲೈ 2018ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿತ್ತು.

ಆದರೆ ಫೀಡರ್ ಪ್ರತ್ಯೇಕ ಗೊಳಿಸುವಿಕೆ ಕಾಮಗಾರಿಗಳನ್ನು ನಡೆಸಿಕೊಂಡು ಹೋಗುವ ಸಲುವಾಗಿ ರೈಲ್ವೆ ಪ್ರಾಧಿಕಾರದಿಂದ ಸಮಯೋಚಿತವಾಗಿ ಅನುಮತಿ ಪಡೆದುಕೊಂಡಿರಲಿಲ್ಲ. ವಿದ್ಯುತ್ ಮಾರ್ಗ ಕಾರಿಡಾರಿನಲ್ಲಿ ರೈಲ್ವೆ ಮಾರ್ಗವುಅಡ್ಡ ಹಾಯ್ದು ಹೋಗಿರುವ ವಾಸ್ತವಾಂಶವನ್ನು ಸವಿವರ ಯೋಜನೆ ವರದಿಯಲ್ಲಿ ತಿಳಿಸಿದ್ದರೂ ರೈಲ್ವೆ ಪ್ರಾಧಿಕಾರದಿಂದ ಅನುಮತಿ ಪಡೆದಿರಲಿಲ್ಲ.

ಹೀಗಾಗಿ ಕಾಮಗಾರಿಗಳು ಪೂರ್ಣಗೊಳ್ಳುವಲ್ಲಿ ವಿಳಂಬವಾಗಿತ್ತು ಎಂಬುದು ವರದಿಯಿಂದ ತಿಳಿದು ಬಂದಿದೆ.

ಅಷ್ಟೇ ಅಲ್ಲ ಟೆಂಡರ್ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ ವಿದ್ಯುತ್ ಸರಬರಾಜು ಕಂಪೆನಿಗಳು ಇಂಧನ ಸಚಿವಾಲಯದಿಂದ ಶೇ.15ರಷ್ಟು ಹೆಚ್ಚುವರಿ ಅನುದಾನವನ್ನು ಉಪಯೋಗಿಸಿಕೊಳ್ಳುವ ಸಲುವಾಗಿ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುತ್ ಯೋಜನೆಯಿಂದಲೇ ಹೊರಬಂದಿದ್ದವು ಎಂಬುದು ಗೊತ್ತಾಗಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News