ವನ್ಯ ಪ್ರಾಣಿಗಳೂ.. ರೈತರ ಗೋಳೂ...

Update: 2022-10-13 07:05 GMT

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬ್ಯಾಟರಾಯನಹಳ್ಳಿ ನಮ್ಮೂರು. ನಮ್ಮ ಹಳ್ಳಿಯ ದಕ್ಷಿಣಕ್ಕಿರುವ ಬೆಟ್ಟದ ಹಿಂದಿನಿಂದಲೇ ಕುಪ್ಪಂ, ಆಂಧ್ರಪ್ರದೇಶದ ಗಡಿ ಪ್ರಾರಂಭವಾಗುತ್ತದೆ. ನಿವೃತ್ತಿಯಾದ ಕಳೆದ ವರ್ಷ ಒಂದು ಎಕರೆ ಜಮೀನಿನಲ್ಲಿ ಹಣ್ಣಿನ ಸಸಿಗಳು ಮತ್ತು ಇನ್ನಿತರ ಸಸಿ(ಮರ)ಗಳನ್ನು ಮಿಶ್ರಣ ಮಾಡಿ ನೆಟ್ಟೆ. ಮಳೆ ಎರಡುಮೂರು ತಿಂಗಳು ಮಾಯವಾಗಿಬಿಡುತ್ತಿತ್ತು. ಆಗ ಟ್ಯಾಂಕರ್‌ನಲ್ಲಿ ನೀರುಣಿಸಲಾಗುತ್ತಿತ್ತು. ಅಂತೂ ಇಂತೂ ಒಂದೇ ವರ್ಷದಲ್ಲಿ 3ರಿಂದ 12 ಅಡಿಗಳ ಎತ್ತರದವರೆಗೂ ಗಿಡಗಳು ಬೆಳೆದುನಿಂತಿವೆ. ಅದೇ ಜಮೀನಿನಲ್ಲಿ ಗಿಡಗಳ ಸುತ್ತಲೂ ಟ್ರ್ಯಾಕ್ಟರ್ ಹೊಡೆಸಿ ಅವರೆ, ಹಲಸಂದಿ ಸಾಲುಗಳ ಮಧ್ಯೆ ಶೇಂಗಾ ಬಿತ್ತಲಾಯಿತು. ಹಲಸಂದಿ, ಅವರೆ ಹಸಿರಾಗಿ ಬೆಳೆದಿದ್ದರೆ, ಶೇಂಗಾ ಸಸಿಗಳು ಹೂವು ಬಿಟ್ಟು ನೆಲದಲ್ಲಿ ಬುಡ್ಡೆ ಹೊಡೆದಿದ್ದವು. ಆದರೆ ಪಕ್ಕದಲ್ಲೇ ಇದ್ದ ಕಾಡಿನಿಂದ ಬಂದ ಕೋತಿಗಳ ದಂಡು ಶೇಂಗಾ ಗಿಡಗಳನ್ನೆಲ್ಲ ಕಿತ್ತಾಕಿಹೋಗುತ್ತಿದ್ದವು. 

ಇತ್ತೀಚಿನ ವರ್ಷಗಳಲ್ಲಿ ನಮ್ಮ ಊರೇ ಅಲ್ಲ, ಸುತ್ತಮುತ್ತಲಿನ ಬಹಳಷ್ಟು ಹಳ್ಳಿಗಳಲ್ಲಿ ಹಣ್ಣು-ತರಕಾರಿ ಹಾಕುವುದನ್ನು ರೈತರು ಬಿಟ್ಟೇಬಿಟ್ಟಿದ್ದಾರೆ. ವನ್ಯ ಪ್ರಾಣಿಗಳನ್ನು ರಕ್ಷಿಸುವ ಕಾನೂನಿನಿಂದ ಯಾವುದೇ ಪ್ರಾಣಿಗಳನ್ನು ಕೊಲ್ಲುವಂತಿಲ್ಲ. ನಮ್ಮ ಹಳ್ಳಿ/ಸುತ್ತಮುತ್ತಲಿನ ಹಳ್ಳಿಗಳ ದುರದೃಷ್ಟವೆಂದರೆ ಕಾಡಿನಲ್ಲಿರುವ ಹೇರಳ ಸಂಖ್ಯೆಯ ಕೋತಿ, ಜಿಂಕೆ, ನವಿಲು, ಕಾಡುಹಂದಿ, ಮೊಲಗಳಿಂದ ರೈತರಿಗೆ ಯಾವುದೇ ಬೆಳೆಗಳು ಕೈಗೆ ದೊರಕುತ್ತಿಲ್ಲ. ಈಗೀಗ ಹಣ್ಣು, ತರಕಾರಿ ಬೆಳೆಗಳನ್ನು ಹಾಕುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಕೇಂದ್ರ/ರಾಜ್ಯ ಸರಕಾರಗಳ ನೀತಿಗಳಿಂದ ರೈತರು ಬೆಳೆಯುವ ಬೆಳೆಗಳಿಗೆ ಯಾವುದೇ ರೀತಿಯಲ್ಲೂ ಸರಿಯಾದ ಬೆಲೆ ದೊರಕುತ್ತಿಲ್ಲ. ಜೊತೆಗೆ ರೈತರು ಸಾಲ ಮಾಡಿಕೊಂಡು ಬೆಳೆದರೆ ವನ್ಯಪ್ರಾಣಿಗಳು ಹಗಲು ರಾತ್ರಿಯೆನ್ನದೆ ತಿಂದುಹಾಕುತ್ತಿವೆ. ಯಾವುದನ್ನೂ ಕೊಲ್ಲುವಂತಿಲ್ಲ. ಒಂದು ಕಡೆ ನಷ್ಟ, ಇನ್ನೊಂದು ಕಡೆ ವನ್ಯಪ್ರಾಣಿಗಳ ಕಾಟ. ಹಳ್ಳಿಗಳಲ್ಲಿ ಈಗ ಯಾವುದೇ ವಾಣಿಜ್ಯ ಬೆಳೆಗಳನ್ನು ಬೆಳೆಯುವುದಿಲ್ಲ. ಎಲ್ಲರೂ ರಾಗಿ ಮಾತ್ರ ಬೆಳೆಯುತ್ತಾರೆ. ಆ ರಾಗಿಯನ್ನೂ ಕೋತಿ, ನವಿಲು, ಜಿಂಕೆ ಮತ್ತು ಕಾಡುಹಂದಿಗಳು ರಾತ್ರೋರಾತ್ರಿ ಬಂದು ತಿಂದು ತುಳಿದಾಡಿ ನಾಶ ಮಾಡಿ ಹೋಗುತ್ತವೆ. ಇನ್ನು ಮಾವು, ತೆಂಗು ಅಥವಾ ಯಾವುದೇ ಹಣ್ಣುಗಳ ತೋಟಗಳನ್ನು ಮಾಡಿದ ರೈತರು ತೋಟಗಳ ಕಡೆಗೆ ಹೋಗುವುದನ್ನೇ ಬಿಟ್ಟುಬಿಟ್ಟಿದ್ದಾರೆ. ನಾನು ಹೋಗಿದ್ದ ದಿನ ಹಳ್ಳಿಯಲ್ಲಿ ಕೋತಿಗಳನ್ನು ಹಿಡಿಯಲು ನಾಲ್ಕಾರು ಬೋನುಗಳನ್ನು ತಂದು ಅವುಗಳಿಗೆ ಏನೇನೋ ಹಾಕಿ ಹಿಡಿಯುತ್ತಿದ್ದರು. ಸಾಯಂಕಾಲದ ಹೊತ್ತಿಗೆ ಮೂವತ್ತು ಕೋತಿಗಳನ್ನು ಹಿಡಿದು ಒಂದು ವಾಹನಕ್ಕೆ ತುಂಬಿದ್ದರು. ತಪ್ಪಿಸಿಕೊಂಡಿರುವ ಕೋತಿಗಳನ್ನು ಮರುದಿನವೂ ಹಿಡಿದು ಅವುಗಳನ್ನು ದೂರದ ಕಾಡಿಗೆ ಬಿಟ್ಟುಬರುವುದಾಗಿ ತಿಳಿಯಿತು. ಈ ಕೋತಿಗಳೆಲ್ಲ ಹಳ್ಳಿ ಕೋತಿಗಳಾಗಿದ್ದು ಇವು ಹೊಲತೋಟಗಳ ಕಡೆಗೆ ಹೋಗುವುದಿಲ್ಲವಂತೆ! ಇನ್ನು ಹೊಲಗದ್ದೆ ತೋಟಗಳಿಗೆ ಬಂದು ಬೆಳೆಗಳನ್ನು ನಾಶಮಾಡಿ ಹೋಗುವ ಕಾಡು ಕೋತಿಗಳನ್ನು ಹಿಡಿಯುವುದು ಸಾಧ್ಯವಿಲ್ಲದ ಮಾತು. ಅವು ಸುತ್ತಲಿನ ಕಾಡಿನಿಂದ ಯಾವಾಗಲೋ ಒಮ್ಮೆ ಗುಂಪುಗಳಲ್ಲಿ ಜನರಿಲ್ಲದಿರುವುದನ್ನು ನೋಡಿಕೊಂಡು ಬಂದು ಏನು ಸಿಕ್ಕಿದರೂ ಅದನ್ನು ತಿಂದು, ಹಾಳುಮಾಡಿ ಹೋಗುತ್ತವೆ. ಇನ್ನೊಂದು ವಿಸ್ಮಯದ ಸಂಗತಿ ಎಂದರೆ ನಮ್ಮೂರಿನಲ್ಲಿ ಹಿಡಿದ ಊರು ಕೋತಿಗಳನ್ನು ಹತ್ತಾರು ಕಿ.ಮೀ.ಗಳ ದೂರದಲ್ಲಿ ಬಿಟ್ಟುಬಂದರೆ, ಅದೇ ರೀತಿ ಬೇರೆಬೇರೆ ಊರುಗಳ ಜನರು ಹಿಡಿದ ಕೋತಿಗಳನ್ನು ಇಲ್ಲಿನ ಬೆಟ್ಟಕ್ಕೆ ತಂದು ಬಿಟ್ಟುಹೋಗುತ್ತಾರೆ. ಅಂತೂ ಕೋತಿಗಳ ವಲಸೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ನಡೆಯುತ್ತಿದೆ. ಕೋತಿ, ಜಿಂಕೆ, ನವಿಲು, ಕಾಡುಹಂದಿ, ಮೊಲ ಎಲ್ಲವೂ ರೈತರ ಬೆಳೆಗಳನ್ನು ನಾಶಮಾಡಿ ಅವರ ಬದುಕನ್ನು ಹೈರಾಣ ಮಾಡಿಬಿಟ್ಟಿವೆ.

 ವನ್ಯ ಪ್ರಾಣಿಗಳ ರಕ್ಷಣೆಯ ಕಾನೂನಿನಿಂದ ಅವುಗಳ ಸಂಖ್ಯೆ ಹಲವು ಪಟ್ಟು ಬೆಳೆದುನಿಂತಿದೆ. ಮೂರುನಾಲ್ಕು ದಶಕಗಳ ಹಿಂದೆ ನಮ್ಮ ಹಳ್ಳಿಯಲ್ಲಿ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಇಂದಿನಂತೆ ವನ್ಯ ಪ್ರಾಣಿಗಳ ಕಾಟ ಇರಲಿಲ್ಲ. ಈಗ ನಮ್ಮ ತೋಟದ ಸುತ್ತಲೂ ಬೆಳಗ್ಗೆ, ಸಾಯಂಕಾಲ ಜಿಂಕೆ, ನವಿಲು, ಕೋತಿಗಳು ರಾಜಾರೋಷವಾಗಿ ಹಿಂಡುಗಳಲ್ಲಿ ಓಡಾಡುತ್ತಿವೆ. ಹೊಲ, ತೋಟಗಳಲ್ಲಿ ಜನರು ಕಾಣಿಸದಿದ್ದರೆ ಸಾಕು, ಕೆಲವೇ ನಿಮಿಷಗಳಲ್ಲಿ ದಾಳಿ ನಡೆಸುತ್ತವೆ. ಒಟ್ಟಿನಲ್ಲಿ ನಮ್ಮ ಹಳ್ಳಿಗಳ ಸುತ್ತಮುತ್ತಲಿನ ರೈತರು ಯಾವುದೇ ರೀತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯದೇ ಕೈಬಿಟ್ಟಿದ್ದಾರೆ ಎನ್ನಬಹುದು. ಅಲ್ಲಿ ಇಲ್ಲಿ ತೋಟಗಳನ್ನು ಮಾಡಿಕೊಂಡಿರುವವರು ಹಗಲೂ-ರಾತ್ರಿ ಎನ್ನದೇ ಕಾವಲು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲ ತೊಂದರೆಗಳನ್ನು ಅನುಭವಿಸಿ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರಕುವುದಿಲ್ಲ. ಕೆಲವೊಮ್ಮೆ ಹೇರಳ ಮಳೆಯಿಂದ ಕೈಗೆ ಬಂದ ಬೆಳೆ ಬಾಯಿಗೆ ಬರುವುದಿಲ್ಲ. ಏರುತ್ತಿರುವ ಹಣದುಬ್ಬರ ಒಂದು ಕಡೆಯಾದರೆ, ವನ್ಯ ಪ್ರಾಣಿಗಳದ್ದು ಇನ್ನೊಂದು ಕಾಟ. ರೈತರು ಸಾಲಸೋಲ ಮಾಡಿಕೊಂಡು ಎಷ್ಟು ವರ್ಷಗಳ ಕಾಲ ಕೃಷಿ ಮಾಡಲು ಸಾಧ್ಯ? ಒಟ್ಟಿನಲ್ಲಿ ರೈತರು ಬೆಳೆಗಳನ್ನು ಕಾಪಾಡಿಕೊಳ್ಳುವ ಯಾವುದಾದರೂ ಉಪಾಯಗಳನ್ನು ಈಗ ತುರ್ತಾಗಿ ಕಂಡುಕೊಳ್ಳಬೇಕಿದೆ. ಸರಕಾರ ಕೂಡ ಇದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಅರಣ್ಯ-ಪರಿಸರ ಮತ್ತು ವನ್ಯಪ್ರಾಣಿಗಳನ್ನು ಉಳಿಸಿಕೊಳ್ಳುವುದು ಸಮಾಜ ಮತ್ತು ಸರಕಾರದ ಹೊಣೆಯಾದಂತೆ ರೈತರ ನಷ್ಟಕ್ಕೂ ಸರಕಾರವೇ ಹೊಣೆಯಾಗಬೇಕಿದೆ.

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News