1ಕೋಟಿ ರೂ. ಲಂಚ ಪಡೆದ ಡಿವೈಎಸ್ಪಿ ಶಾಂತಕುಮಾರ್

Update: 2022-10-17 03:25 GMT
pti

ಬೆಂಗಳೂರು, ಅ.16: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ೩೧ನೇ ಆರೋಪಿ ಡಿವೈಎಸ್ಪಿ ಶಾಂತಕುಮಾರ್ ಅವರು ಬೆಂಗಳೂರಿನ ಕೃಷಿ ಭವನದ ಮುಂದಿರುವ ಫುಟ್ಪಾತ್ ರಸ್ತೆಯಲ್ಲೇ 1 ಕೋಟಿ ರೂ. ಲಂಚ ಪಡೆದಿದ್ದರು. ಒಎಂಆರ್ ಉತ್ತರ ಪತ್ರಿಕೆಗಳ ಅಂಕವನ್ನು ಸ್ಕ್ಯಾನಿಂಗ್ ಮಾಡಿದ್ದ ಖಾಸಗಿ ಕಂಪೆನಿಯ ಉದ್ಯೋಗಿಯೊಬ್ಬ ತನ್ನ ಸಹೋದ್ಯೋಗಿಗೆ ಅಂಕಗಳ ಮಾಹಿತಿಯನ್ನು ಮೇಲ್ ಮೂಲಕ ರವಾನಿಸಿದ್ದ ಎಂಬ ಅಂಶವನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಡಿವೈಎಸ್ಪಿ ಶಾಂತಕುಮಾರ್ ಮತ್ತಿತರರ ಆರೋಪಿಗಳ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ನೀಡುವ ಸಂಬಂಧ ಕಾನೂನು ಇಲಾಖೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ಹಲವು ಅಂಶಗಳು ಮುನ್ನೆಲೆಗೆ ಬಂದಿವೆ.

 ಒಎಂಆರ್ ಶೀಟ್‌ಗಳಲ್ಲಿನ ಕಾಲಂ ೪ನ್ನು  ತಿದ್ದಿ ಆಯ್ಕೆಯಾದ ಅನರ್ಹ ಅಭ್ಯರ್ಥಿಗಳು ನೀಡಿದ್ದ ಪೆನ್, ಒನ್‌ಟೈಂ ಲಾಕ್, ಡಬಲ್ ಸೈಡ್ ಗಮ್ಮಿಂಗ್ ಟೇಪನ್ನು ನಾಶಪಡಿಸಿ ತಿದ್ದಿರುವ ಒಎಂಆರ್ ಶೀಟ್‌ಗಳನ್ನೇ ಅಭ್ಯರ್ಥಿಯ ನೈಜ ಪ್ರತಿ ಎಂದು ಬಿಂಬಿಸಿದ್ದರು ಎಂಬುದು ಸೇರಿದಂತೆ ಅಕ್ರಮದ ಹಲವು ಮುಖಗಳನ್ನು ಮಾಹಿತಿಯಲ್ಲಿ ಅನಾವರಣಗೊಳಿಸಿದೆ. ಪೊಲೀಸ್ ಇಲಾಖೆಯು ಸಲ್ಲಿಸಿರುವ ಈ ಮಾಹಿತಿಯ ಪುಟಗಳು ''the-file.in''ಗೆ ಲಭ್ಯವಾಗಿವೆ.
 ‘೨೯ನೇ ಆರೋಪಿ ಹರ್ಷ ಡಿ., ಎಂಬಾತ ಡಿವೈಎಸ್ಪಿಶಾಂತಕುಮಾರ್‌ಗೆ ಬೆಂಗಳೂರ ನಗರದ ಹಡ್ಸನ್ ಸರ್ಕಲ್ ಬಳಿ ಇರುವ ಕೃಷಿ ಭವನದ ಮುಂದಿನ ಫುಟ್‌ಪಾತ್  ರಸ್ತೆಯಲ್ಲಿ 1,35,00,000 ರೂ. ನೀಡಿದ್ದ,’ ಎಂದು ಮಾಹಿತಿ ಒದಗಿಸಿದ್ದಾರೆ.

ಹಾಗೆಯೇ ಒಎಂಆರ್ ಉತ್ತರ ಪತ್ರಿಕೆಗಳ ಅಂಕವನ್ನು ಸ್ಕ್ಯಾನಿಂಗ್ ಮಾಡಿದ್ದ ಟಿಆರ್‌ಎಸ್ ಕಂಪೆನಿಯ ಶಶಿಧರ್ ಎಂಬವರು ಒಎಂಆರ್ ಉತ್ತರ ಪತ್ರಿಕೆಗಳ ಅಂಕಗಳ ಮಾಹಿತಿಯನ್ನು ತಮ್ಮ ಮೇಲ್ ಮೂಲಕ ತಮ್ಮದೇ ಕಂಪೆನಿಯ ಉದ್ಯೋಗಿಯಾದ ಶ್ಯಾಮ್ ಎಂಬಾತನಿಗೆ ಕಳಿಸಿದ್ದ ಎಂದು ತಿಳಿದು ಬಂದಿದೆ. ೩೧ನೇ ಆರೋಪಿ ಡಿವೈಎಸ್ಪಿ ಶಾಂತಕುಮಾರ್, ಶ್ರೀಧರ್ ಎಚ್., ಹರ್ಷ ಡಿ., ಇವರ ಸೇವಾ ವಿವರ ಪಟ್ಟಿಯಲ್ಲಿ ಲಗತ್ತಿಸಿರುವ ಸಿಐಡಿ ತನಿಖಾಧಿಕಾರಿಗಳು
ಸರಕಾರಿ ನೌಕರರಾದ ಆರೋಪಿ ಟಿ ಸಿ ಶ್ರೀನಿವಾಸ, ಲೋಕೇಶಪ್ಪ, ಆರ್.ಮಂಜುನಾಥ್, ಗುರುವ ಬಸವರಾಜು, ಮಧು
ಎಸ್.ವಿ., ಹರೀಶ್ ಕೆ. ಅವರ ಸೇವಾ ವಿವರಗಳನ್ನು ದೋಷಾರೋಪ ಪಟ್ಟಿಯಲ್ಲಿ ಲಗತ್ತಿಸಿಲ್ಲ ಎಂಬುದು
ಕಾನೂನು ಇಲಾಖೆಗೆ ಸಲ್ಲಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

 ಬೆಳ್ಳಂದೂರಿನ ನ್ಯೂ ಹಾರಿಝನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಕಾಲೇಜಿನ ಕಿಟ್‌ಬಾಕ್ಸ್  ೩೫ನೇ ಆರೋಪಿ ಎಡಿಜಿಪಿ ಅಮೃತ್‌ಪೌಲ್ ೩೧ನೇ ಆರೋಪಿ ಡಿವೈಎಸ್ಪಿಶಾಂತಕುಮಾರ್‌ಗೆ ನೀಡಿದ್ದರು. ಕೀ ಬಳಸಿ ಬಾಕ್ಸ್ ಓಪನ್ ಮಾಡಿದ್ದ ಆರೋಪಿಗಳು ಮಧ್ಯವರ್ತಿಗಳ ಮೂಲಕ ೨೯ನೇ ಆರೋಪಿ ಪ್ರಥಮದರ್ಜೆ ಸಹಾಯಕ ಹರ್ಷ ಡಿ., ಎಂಬಾತನಿಗೆ ನೀಡಿದ್ದರು. ಒಎಂಆರ್ ಕಾರ್ಬನ್ ಕಾಪಿ ಹಾಗೂ ಪೆನ್ ಬಳಸಿಕೊಂಡು ಆರೋಪಿಗಳು ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ತುಂಬಿದ್ದರು. ಅಲ್ಲದೇ ಆರೋಪಿಗಳು ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ತುಂಬಿದ್ದರಲ್ಲದೇ ಒಎಂಆರ್ ಶೀಟ್‌ನ ನಂ.೪ರಲ್ಲಿ (ಪ್ರಯತ್ನಿಸಿದ್ದ ಪ್ರಶ್ನೆಗಳ ಸಂಖ್ಯೆ) ಸಂಖ್ಯೆಗಳನ್ನು ತಿದ್ದಿದ್ದರು ಎಂಬುದನ್ನು ಕಾನೂನು ಇಲಾಖೆಗೆ ಮಾಹಿತಿ ಒದಗಿಸಿದ್ದಾರೆ.

 ಅದೇ ರೀತಿ ಕೆ ಆರ್ ಪುರಂನ ಕೇಂಬ್ರಿಡ್ಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಮತ್ತು ಕೋರಮಂಗಲದ ಕರ್ನಾಟಕ ರೆಡ್ಡಿ ಜನಸಂಘ ಕಾಲೇಜಿನ  ಕಿಟ್‌ಬಾಕ್ಸ್ ಅನ್ನು ಅಮೃತ್‌ಪೌಲ್ ಸೂಚನೆ ಮೇರೆಗೆ ಡಿವೈಎಸ್ಪಿ ಶಾಂತಕುಮಾರ್ ಮೂಲಕ ಕಿಟ್ ಬಾಕ್ಸ್ ಅನ್ನು ಲಾಕ್ ಬಳಸಿ ತೆರೆಯಲಾಗಿತ್ತು. ಮಧ್ಯವರ್ತಿಗಳ ಮೂಲಕ ಆರೋಪಿಗೆ ನೀಡಿದ್ದ ಒಎಂಆರ್ ಕಾರ್ಬನ್ ಕಾಪಿ ಬಳಸಿಕೊಂಡು ಆರೋಪಿ ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ಭರ್ತಿ ಮಾಡಲಾಗಿತ್ತು. ಒಎಂಆರ್ ಶೀಟ್‌ನ ಕಾಲಂ ೪ರಲ್ಲಿ ದಶಕದ ಸ್ಥಾನದಲ್ಲಿ ಇದ್ದ ‘1’ ಸಂಖ್ಯೆಯನ್ನು ‘9’ ಎಂದು ತಿದ್ದಿ ಬಿಡಿ ಸ್ಥಾನದಲ್ಲಿ ಇರುವ ಸಂಖ್ಯೆಯನ್ನು ತಿದ್ದಿ ಅಕ್ರಮ ಮಾರ್ಗದಲ್ಲಿ ಆಯ್ಕೆಯಾಗಲು ಸಹಕರಿಸಿದ್ದರು ಎಂಬುದನ್ನು
ವಿವರಿಸಲಾಗಿದೆ.

ಪೊಲೀಸ್ ಇಲಾಖೆಯ ಲಿಪಿಕ ಸಿಬ್ಬಂದಿ ಆರ್ ಮಂಜುನಾಥ್ (ಆರೋಪಿ ೩೦-ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಚೇರಿಯ ಶಾಖಾಧೀಕ್ಷಕರಗಿ ವರ್ಗಾವಣೆ ಆದೇಶದಲ್ಲಿದ್ದಾರೆ) ತನ್ನ ಪರಿಚಯಸ್ಥ ಹನುಮಂತಪ್ಪ, ಯಶವಂತಗೌಡ ಎಂಬಾತನಿಗೆ ಪಿಎಸ್ಸೈ ಹುದ್ದೆ
ಕೊಡಿಸುವ ಸಂಬಂಧ ಎಫ್‌ಡಿಎ ಹರ್ಷ ಎಂಬಾತನಿಗೆ ಪರಿಚಯಿಸಿ 50 ಲಕ್ಷ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಪೈಕಿ 45 ಲಕ್ಷ ರೂ. ಪಡೆದು ಅಕ್ರಮವಾಗಿ ಲಾಭ ಮಾಡಿಕೊಂಡಿದ್ದರು ಎಂಬುದು ಕಾನೂನು ಇಲಾಖೆಗೆ ಸಲ್ಲಿಸಿರುವ ಮಾಹಿತಿಯಿಂದ ಗೊತ್ತಾಗಿದೆ.

ಆರೋಪಿ ಡಿವೈಎಸ್ಪಿ ಶಾಂತಕುಮಾರ್, ಎಫ್‌ಡಿಎ ಹರ್ಷ, ಟಿ.ಸಿ.ಶ್ರೀನಿವಾಸ, ಶ್ರೀಧರ್, ಲೋಕೇಶಪ್ಪ, ಮಂಜುನಾಥ, ಗುರುವ ಬಸವರಾಜು, ಮಧು ಎಸ್.ವಿ., ಹರೀಶ್ ಕೆ. ಇವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಕಲಂ 7(3)(ಸಿ)ಮತ್ತು ಕಲಂ 13(1)(3) ಅಡಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿಲು ಸರಕಾರವು ಪೂರ್ವಾನುಮತಿ ನೀಡಬಹುದಾಗಿದೆ ಎಂದು ಒಳಾಡಳಿತ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಸಿ.ಕೆ.ಸರೋಜಾ ಅಭಿಪ್ರಾಯ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News