ಪುಲಿಟ್ಝರ್ ಪ್ರಶಸ್ತಿ ವಿಜೇತೆ ಕಾಶ್ಮೀರಿ ಪತ್ರಕರ್ತೆಯ ವಿದೇಶ ಪ್ರಯಾಣಕ್ಕೆ ಅನುಮತಿ ನಿರಾಕರಣೆ: ಸಿಪಿಜೆ ಖಂಡನೆ

Update: 2022-10-19 10:21 GMT

ಹೊಸದಿಲ್ಲಿ: ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಕಾಶ್ಮೀರಿ ಪತ್ರಿಕಾಛಾಯಾಗ್ರಾಹಕಿ ಸನಾ ಇರ್ಷಾದ್ ಮಟ್ಟೂ(Sanna Irshad Mattoo) ಅವರನ್ನು ವಿದೇಶಕ್ಕೆ ಪ್ರಯಾಣಿಸುವುದರಿಂದ ತಡೆದಿರುವ ಭಾರತೀಯ ಅಧಿಕಾರಿಗಳನ್ನು ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (ಸಿಪಿಜೆ) ಟೀಕಿಸಿದೆ.

ಮಂಗಳವಾರ ಅಮೆರಿಕಾಗೆ ಪ್ರಯಾಣಿಸಲಿದ್ದ ಮಟ್ಟೂ ಅವರನ್ನು  ದಿಲ್ಲಿ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಶನ್ ಅಧಿಕಾರಿಗಳು ತಡೆದಿದ್ದರು. ಮೇ ತಿಂಗಳಿನಲ್ಲಿ ತಾವು ಗೆದ್ದಿದ್ದ ಪುಲಿಟ್ಝರ್ ಪ್ರಶಸ್ತಿಯನ್ನು ಪಡೆಯಲೆಂದು ಅವರು ನ್ಯೂಯಾರ್ಕ್‍ಗೆ ಪ್ರಯಾಣಿಸಲುದ್ದೇಶಿಸಿದ್ದರು. ಕೋವಿಡ್ ಸಾಂಕ್ರಾಮಿಕದ ಕುರಿತಂತೆ ರೂಟರ್ಸ್ ಸುದ್ದಿ ಸಂಸ್ಥೆಗಾಗಿ ಆಕೆ ಪ್ರಸ್ತುತಪಡಿಸಿದ ವರದಿಗಳಿಗೆ  ಈ ಪ್ರಶಸ್ತಿ ಆಕೆಗೆ ದೊರಕಿತ್ತು.

ಮಾನ್ಯವಾದ ವೀಸಾ ಹೊಂದಿದ್ದರೂ ಪ್ರಯಾಣಿಸಲು ಅನುಮತಿಸಲಾಗಿಲ್ಲ ಎಂದು ಟ್ವೀಟ್ ಮೂಲಕ ಮಟ್ಟೂ ತಿಳಿಸಿದ್ದರು. ಆಕೆಯನ್ನು ತಡೆದ ಕಾರಣವನ್ನು ಅಧಿಕಾರಿಗಳು ನೀಡಿಲ್ಲ ಎಂದು ಸಿಪಿಜೆ ಹೇಳಿದೆ.

"ನನ್ನನ್ನು ಯಾವುದೇ ಕಾರಣ ನೀಡದೇ ತಡೆದಿದ್ದು ಇದು ಎರಡನೇ ಬಾರಿ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದು ಜೀವಮಾನದಲ್ಲಿ ಒಂದೇ ಬಾರಿ ದೊರೆಯುವ ಅವಕಾಶವಾಗಿದೆ" ಎಂದು ಮಟ್ಟೂ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಜರ್ಮನಿಯಲ್ಲಿನ ಸಿಪಿಜೆ ಏಷ್ಯಾ ಪ್ರೋಗ್ರಾಂ ಸಮನ್ವಯಕಾರ  ಬೆಹ್ ಲಿಹ್ ಯಿ, "ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದವರೊಬ್ಬರನ್ನು ಈ ರೀತಿ ತಡೆದಿರುವುದು ನಿರಂಕುಶವಾದಿ ಕ್ರಮ, ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ವರದಿ ಮಾಡುವ ಪತ್ರಕರ್ತರಿಗೆ ಈ ರೀತಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು" ಎಂದಿದ್ದಾರೆ.

ಸೆರೆಂಡಿಪಿಟಿ ಆರ್ಲೆಸ್ ಗ್ರ್ಯಾಂಟ್ ಇದರ 10 ಮಂದಿ ವಿಜೇತರಲ್ಲಿ ಒಬ್ಬರಾಗಿದ್ದ ಮಟ್ಟೂ ಅವರನ್ನು ಜುಲೈ ತಿಂಗಳಿನಲ್ಲಿ ಫ್ರಾನ್ಸ್ ಗೆ ಪ್ರಯಾಣಿಸುವುದನ್ನು ತಡೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News