ಶಿಕ್ಷಕರ ನೇಮಕಾತಿ ಹಗರಣ: ಬಂಧನದ ವಿರುದ್ಧ ಟಿಎಂಸಿ ಶಾಸಕ ಮಾಣಿಕ್ ಭಟ್ಟಾಚಾರ್ಯ ಸಲ್ಲಿಸಿದ ಅರ್ಜಿ ತಿರಸ್ಕೃತ

Update: 2022-10-20 16:42 GMT
PTI

ಹೊಸದಿಲ್ಲಿ, 20: ಪಶ್ಚಿಮಬಂಗಾಳದಲ್ಲಿ ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದಿಂದ ತನ್ನ ಬಂಧನದ ವಿರುದ್ಧ ತೃಣಮೂಲ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಗುರುವಾರ ತಿರಸ್ಕರಿಸಿದೆ.

ಭಟ್ಟಾಚಾರ್ಯ ಅವರು ಪಶ್ಚಿಮಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿಯ  ಮಾಜಿ ಅಧ್ಯಕ್ಷ. ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ನಾಡಿಯಾ ಜಿಲ್ಲೆಯ ಪಲಾಶಿಪಾರಾ  ವಿಧಾನ ಸಭಾ ಕ್ಷೇತ್ರದ ಶಾಸಕ  ಭಟ್ಟಚಾರ್ಯ ಅವರನ್ನು ಅಕ್ಟೋಬರ್ 11ರಂದು ಬಂಧಿಸಲಾಗಿತ್ತು.

ಭಟ್ಟಾಚಾರ್ಯ ಅವರನ್ನು ಬಂಧಿಸುವ ಜಾರಿ ನಿರ್ದೇಶನಾಲಯದ ನಿರ್ಧಾರದಲ್ಲಿ ಹಸ್ತಕ್ಷೇಪ ನಡೆಸಲು ನ್ಯಾಯಮೂರ್ತಿಗಳಾದ ಅನಿರುದ್ಧ್ ಬೋಸ್ ಹಾಗೂ ವಿಕ್ರಮ್ ನಾಥ್ ಅವರನ್ನು ಒಳಗೊಂಡ ಪೀಠ ಗುರುವಾರ ನಿರಾಕರಿಸಿದೆ.

ಭಟ್ಟಾಚಾರ್ಯ ಅವರನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ, ತನ್ನ ಕಕ್ಷಿದಾರ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ನ್ಯಾಯಾಲಯ ಸಿಬಿಐ ಬಂಧನದಿಂದ ರಕ್ಷಣೆಯನ್ನು ನೀಡಿತ್ತು ಎಂದು ಅವರು ಗಮನ ಸೆಳೆದಿದ್ದಾರೆ.

ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಪ್ರಕರಣದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದರು. ಅಸಾಧಾರಾಣ ಆಯಾಮದ ಹಗರಣವನ್ನು   ಬಹಿರಂಗಪಡಿಸಲು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ ಎಂದು  ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ತಿಳಿಸಿದ್ದಾರೆ.

ಇದುವರೆಗೆ, ಪಶ್ಚಿಮಬಂಗಾಳದ ಮಾಜಿ ಸಚಿವ ಪಾರ್ಥಾ ಚಟರ್ಜಿ ಸೇರಿದಂತೆ 6 ಮಂದಿಯನ್ನು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಬಂಧಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News