ಚೀತಾ ಬಳಿಕ ಇದೀಗ ಕುನೊದಲ್ಲಿ ಸಂಚಲನ ಮೂಡಿಸಿದ ಬೆಳ್ಳಿನಾಣ್ಯಗಳ ಕುಡಿಕೆ

Update: 2022-10-21 02:25 GMT
ಸಾಂದರ್ಭಿಕ ಚಿತ್ರ

ಭೋಪಾಲ್: ವಿದೇಶದಿಂದ ತಂದ ಚೀತಾಗಳನ್ನು ಕುನೊ (Kuno) ಅಭಯಾರಣ್ಯದಲ್ಲಿ ಬಿಟ್ಟ ಬಳಿಕ ಇದೀಗ ಭೂಗರ್ಭದಲ್ಲಿ ಹುದುಗಿರುವ ಬೆಳ್ಳಿ ನಾಣ್ಯಗಳ (silver coins) ಮಡಿಕೆ ಮಧ್ಯಪ್ರದೇಶದ ಶಿವಪುರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ರಾಷ್ಟ್ರೀಯ ಉದ್ಯಾನವನದ ಆವರಣದಲ್ಲಿ ಸಿಬ್ಬಂದಿ ವಸತಿಗೃಹಗಳಿಗಾಗಿ ಅಗೆಯುತ್ತಿದ್ದ ವೇಳೆ ಸುಮಾರು ಎರಡು ಶತಮಾನಗಳಷ್ಟು ಪ್ರಾಚೀನವಾದ ತಾಮ್ರ ಹಾಗೂ ಬೆಳ್ಳಿಯ ನಾಣ್ಯಗಳ ಮಡಕೆ ದೊರಕಿದೆ ಎಂದು ವರದಿಯಾಗಿದೆ.

ಪಾಲಪುರ ಕೋಟೆ ಪ್ರದೇಶದಲ್ಲಿ ಭೂಮಿಯಲ್ಲಿ ಕೆಲವೇ ಅಡಿ ಆಳದಲ್ಲಿ ಈ ನಿಧಿ ಹುಗಿದಿಡಲಾಗಿತ್ತು ಎಂದು ವರದಿಗಳು ಹೇಳಿವೆ. ಆದರೆ ನಮೀಬಿಯಾ ಚೀತಾಗಳನ್ನು ಬಿಟ್ಟ ಆವರಣದಿಂದ ಅನತಿ ದೂರಗಳಲ್ಲಿ ಇವು ಪತ್ತೆಯಾಗಿವೆ ಎನ್ನಲಾಗಿದೆ. "ಇದು ನಮಗೆ ಸೇರಿದ ನಿಧಿ. ನಮಗೆ ಹಸ್ತಾಂತರಿಸಬೇಕು" ಎಂದು ರಾಜವಂಶಸ್ಥರೊಬ್ಬರು ಆಗ್ರಹಿಸಿದ್ದಾರೆ.

ಈ ಬಗ್ಗೆ ಯಾವುದೇ ಸುದ್ದಿ ತಿಳಿದಿಲ್ಲ ಎಂದು ಕ್ಷೇತ್ರ ನಿರ್ದೇಶಕ ಕೆಎನ್‍ಪಿ ಉತ್ತಮ್ ಶರ್ಮಾ ಹೇಳಿದ್ದಾರೆ. ಈ ಬಗ್ಗೆ ಅಗತ್ಯ ಮಾಹಿತಿ ಪಡೆದು ದೃಢೀಕರಿಸುವುದಾಗಿ ಡಿಎಫ್‍ಓ ಪಿ.ಕೆ.ವರ್ಮಾ ಸ್ಪಷ್ಟಪಡಿಸಿದ್ದಾರೆ.

ಆದರೆ ಉನ್ನತ ಮೂಲಗಳ ಪ್ರಕಾರ ಈ ನಿಧಿ ಕುಡಿಕೆ ಬುಧವಾರ ಪತ್ತೆಯಾಗಿದೆ ಎನ್ನಲಾಗಿದ್ದು, ಕಾರ್ಮಿಕರು ತಮ್ಮೊಳಗೆ ಹಂಚಿಕೊಂಡಿದ್ದಾರೆ. ಈ ಪೈಕಿ ಬಹಳಷ್ಟು ಮಂದಿ ಗುರುವಾರ ಕೆಲಸಕ್ಕೆ ಬಂದಿಲ್ಲ. ಕೆಲವರು ಇದರ ಫೋಟೊ ತೆಗೆದು ವಾಟ್ಸಪ್‍ನಲ್ಲಿ ಹಂಚಿಕೊಂಡಿದ್ದು, ಇದು ಕಾಳ್ಗಿಚ್ಚಿನಂತೆ ಹರಡುತ್ತಿದೆ. ಇದು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೋಮಾಂಚನಕ್ಕೆ ಕಾರಣವಾಗಿದೆ.

ಕುನೊ ಪ್ರದೇಶವನ್ನು ರಾಷ್ಟ್ರೀಯ ಉದ್ಯಾನವನವನ್ನಾಗಿ ಘೋಷಿಸಿ ಗೀರ್ ಸಿಂಹಗಳನ್ನು ಸ್ಥಳಾಂತರಿಸುವ ವೇಳೆ 260 ಬಿಗಾ ಜಾಗವನ್ನು ಪಾಲಪುರ ರಾಜವಂಶಸ್ಥರು ತೆರೆವುಗೊಳಿಸಿದ್ದರು. ನಿಧಿ ದೊರಕಿರುವ ಬಗ್ಗೆ ಸ್ಥಳೀಯರು ಅವರಿಗೂ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ನಾಲ್ಕು ರಾಶಿ ನಾಣ್ಯಗಳು ಸಿಕ್ಕಿವೆ ಎಂದು ಮಾಹಿತಿ ದೊರಕಿದ್ದಾಗಿ ರಾಜವಂಶಸ್ಥ ಆರ್.ಕೆ.ಶ್ರೀಗೋಪಾಲ್‍ದೇವ್ ಸಿಂಗ್ ಪಾಲಪುರ ಹೇಳಿದ್ದಾರೆ.

ಇದನ್ನೂ ಓದಿ: ಬೌದ್ಧ ಭಿಕ್ಷುಗಳ ವೇಷ ಧರಿಸಿ ವಾಸಿಸುತ್ತಿದ್ದ ಶಂಕಿತ ಚೀನಿ ಬೇಹುಗಾರ್ತಿಯ ಬಂಧನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News