ಪಂಚಾಯತ್‌ಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಹಣ ದುರ್ಬಳಕೆ

Update: 2022-10-21 03:27 GMT

ಬೆಂಗಳೂರು, ಅ.20: ಗ್ರಾಮ ಪಂಚಾಯತ್‌ಗಳಲ್ಲಿ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನವನ್ನು ರಾಜ್ಯದಲ್ಲಿರುವ ಬಹುತೇಕ ಗ್ರಾಮ ಪಂಚಾಯತ್‌ಗಳು ಬಳಕೆ ಮಾಡದಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಅಲ್ಲದೆ ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಅನ್ಯಉದ್ದೇಶಕ್ಕೆ ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಬಿಜೆಪಿ ಸರಕಾರವು ಗ್ರಾಮ ಪಂಚಾಯತ್ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ‘ನವನ್ನು ನಿಲ್ಲಿಸಿದೆ ಎಂಬ ಅನುಮಾನಗಳು ವಿದ್ಯಾರ್ಥಿಗಳನ್ನು ಕಾಡುತ್ತಿದೆ. 2017ರಲ್ಲಿ ಸರಕಾರವು ಈ ಯೋಜನೆಯನ್ನು ಜಾರಿಗೊಳಿಸಿತ್ತು. ಆದರೆ, ರಾಜ್ಯದ ಬಹುತೇಕ ಗ್ರಾಮ ಪಂಚಾಯತ್‌ಗಳು ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ‘ನವನ್ನು ಮಂಜೂರು ಮಾಡಿಲ್ಲ. ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯು ನಿಗಾ ವಹಿಸದೆ ಇರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.

ರಾಜ್ಯದಲ್ಲಿ 5,983 ಗ್ರಾಮ ಪಂಚಾಯತ್‌ಗಳು ಕಾರ್ಯನಿರ್ವಹಿ ಸುತ್ತಿದ್ದು, ಎಲ್ಲ ಗ್ರಾಮ ಪಂಚಾಯತ್‌ಗಳು ತಮ್ಮ ಅನುದಾನದಲ್ಲಿ ಶೇ.25ರಷ್ಟು ಅನುದಾನವನ್ನು ಪರಿಶಿಷ್ಟ ಸಮುದಾಯಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಗೆ ಮೀಸಲಿಡಬೇಕು. ಅಲ್ಲದೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸೆಸ್ ಅನ್ನು ವಸೂಲಿ ಮಾಡಲು ಗ್ರಾಪಂಗಳಿಗೆ ಅಧಿಕಾರವನ್ನು ನೀಡಲಾಗಿದೆ. ಆದರೆ, ಈ ಕುರಿತು ಪಿಡಿಒ ‘ನಮ್ಮ ಗ್ರಾಪಂನಿಂದ ಯಾವುದೇ ಹಣವನ್ನು ವಿದ್ಯಾರ್ಥಿಗಳ ಪ್ರೋತ್ಸಾಹ‘ನವಾಗಿ ಇದುವರೆಗೂ ಬಿಡುಗಡೆ ಮಾಡಿಲ್ಲ’ ಎಂದು ಹೇಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.  

ಪರಿಶಿಷ್ಟ ವಿದ್ಯಾರ್ಥಿಗಳಿಗೆ ಕೆಲ ಗ್ರಾಪಂಗಳು ವಾರ್ಷಿಕವಾಗಿ 5 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳವರೆಗೂ ಅನುದಾನವನ್ನು ಬಿಡುಗಡೆ ಮಾಡಿವೆ. ಇನ್ನೂ ಕೆಲ ಪಂಚಾಯತ್‌ಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಈ ಕುರಿತು ಫಲನುಭವಿಗಳಿಗೆ ಮಾಹಿತಿಯ ಕೊರತೆಯೂ ಇದೆ. ಒಂದು ವೇಳೆ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಆ‘ರಿಸಿ ತಮ್ಮ ವ್ಯಾಪ್ತಿಯ ಗ್ರಾಪಂನಲ್ಲಿ ವಿಚಾರಿಸಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ಕೊರತೆ: ರಾಜ್ಯದ ಗ್ರಾಪಂನಿಂದ ಜಾರಿಯಾಗುವ ಯೋಜನೆಗಳ ಕುರಿತು ಪರಿಶಿಷ್ಟ ಸಮುದಾಯದ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿಯ ಕೊರತೆ ಇದೆ. ಅವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿಯನ್ನು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

 

ನಮ್ಮ ಪಂಚಾಯತ್ ವತಿಯಿಂದ ಇದುವರೆಗೂ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಯಾವುದೇ ಪ್ರೋತ್ಸಾಹ‘ನವನ್ನು ಮಂಜೂರು ಮಾಡಿಲ್ಲ. ಗ್ರಾಪಂನಿಂದ ಎಜುಕೇಷನ್ ಸೆಸ್‌ಅನ್ನು ವಸೂಲಿ ಮಾಡುತ್ತೇವೆ. ಆದರೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ‘ನವನ್ನು ಮಂಜೂರು ಮಾಡಿಲ್ಲ. ಪ್ರೋತ್ಸಾಹ‘ನ ಕೋರಿ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದರೆ ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡುತ್ತೇವೆ’

-ಹರೀಶ್ ಡಿ. ತುಮ್ಮನಹಳ್ಳಿ ಪಿಡಿಒ, ಚಿಕ್ಕಬಳ್ಳಾಪುರ ಜಿಲ್ಲೆ

ರಾಜ್ಯದಲ್ಲಿ ೫,೯೮೩ ಗ್ರಾಪಂಗಳಿದ್ದು, ದಲಿತ ವಿದ್ಯಾರ್ಥಿಗಳಿಗೆ ಅನುದಾನವನ್ನು ನೀಡುತ್ತಿರುವ, ನೀಡದೆ ಇರುವ ಪಂಚಾಯತ್‌ಗಳ ಪಟ್ಟಿ ಇಲಾಖೆಯಲ್ಲಿ ಸಿಗುವುದಿಲ್ಲ. ಆಯಾ ಪಂಚಾಯತ್‌ಗಳಲ್ಲಿ ಮಾಹಿತಿ ಪಡೆದುಕೊಳ್ಳಬೇಕು. ಎಲ್ಲ ಪಂಚಾಯತ್‌ಗಳ ಕುರಿತು ಕೋಢೀಕೃತ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಬೇಕೆಂಬ ನಿಯಮ ಇಲ್ಲ. ಹಾಗಾಗಿ ಇಲಾಖೆಯಲ್ಲಿ ಮಾಹಿತಿ ನೀಡುವುದಿಲ್ಲ. ಎಲ್ಲ ಗ್ರಾಪಂಗಳಿಗೂ ಆರ್‌ಟಿಐ ಅರ್ಜಿ ಹಾಕಿ ಮಾಹಿತಿ ಪಡೆದುಕೊಳ್ಳಬೇಕು’

-ನವೀನಕುಮಾರ್ ಬಿ.

ಸರಕಾರದ ಅಧೀನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಇಲಾಖೆ

ಪಂಚಾಯತ್‌ಗಳಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ. ಹಾಗಾಗಿ ಶೈಕ್ಷಣಿಕ ಪ್ರೋತ್ಸಾಹ‘ನವನ್ನು ನೀಡುವಂತೆ ಕೋರಿ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪಿಡಿಒ, ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿಯನ್ನು ವರ್ಗಾಹಿಸಿದ್ದೇವೆಂದು ಹೇಳುತ್ತಾರೆ. ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಾಗಿ ಅವಿದ್ಯಾಂತವರೆ ಇರುವ ಕಾರಣ ಪಂಚಾಯತ್‌ನಿಂದ ಯಾವುದೇ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ’

-ವೇಣು, ನಿವಾಸಿ, ತುಮ್ಮನಹಳ್ಳಿ ಶಿಡ್ಲಘಟ್ಟ ತಾಲೂಕು

Writer - -ಅನಿಲ್ ಕುಮಾರ್ ಎಂ.

contributor

Editor - -ಅನಿಲ್ ಕುಮಾರ್ ಎಂ.

contributor

Similar News