ಉತ್ತರ ಪ್ರದೇಶ: ರಕ್ತದ ಪ್ಲೇಟ್‌ಲೆಟ್‌ ಬದಲಿಗೆ ಹಣ್ಣಿನ ರಸ ನೀಡಿದ ಆರೋಪ; ಡೆಂಗ್ಯೂ ರೋಗಿ ಮೃತ್ಯು

Update: 2022-10-21 06:23 GMT

ಲಕ್ನೊ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಡೆಂಗ್ಯೂ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದರಿಂದಾಗಿ  ಡೆಂಗ್ಯೂ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಜಿಲ್ಲಾಡಳಿತದ ಪ್ರಾಥಮಿಕ ತನಿಖೆಯ ಬಳಿಕ  ಆಸ್ಪತ್ರೆಯ ಅಧಿಕಾರಿಗಳ ಲೋಪ ಕಂಡುಬಂದಿದೆ.  ನಂತರ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೋಗಿಯ ಕುಟುಂಬ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.

32 ವರ್ಷದ ರೋಗಿಯ ಸಂಬಂಧಿಕರಿಗೆ ಪ್ರಯಾಗ್‌ರಾಜ್‌ನಲ್ಲಿರುವ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್‌ನಲ್ಲಿ 'ಪ್ಲಾಸ್ಮಾ' ಎಂದು ಗುರುತಿಸಲಾದ ಬ್ಯಾಗ್ ನಲ್ಲಿ ಸಿಹಿ ನಿಂಬೆ ರಸವನ್ನು ಸರಬರಾಜು ಮಾಡಲಾಗಿದೆ. ಆಸ್ಪತ್ರೆಯಿಂದ ಸರಬರಾಜು ಮಾಡಿದ ಬ್ಯಾಗ್ ಗಳಲ್ಲಿ ಒಂದನ್ನು ರೋಗಿಗೆ ನೀಡಿದ ನಂತರ ರೋಗಿಯ  ಸ್ಥಿತಿಯು ಹದಗೆಟ್ಟಿದೆ ಎಂದು ರೋಗಿಯ ಕುಟುಂಬವು ಆರೋಪಿಸಿದೆ.

ರೋಗಿಯನ್ನು ಎರಡನೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ನಿಧನರಾದರು. ಈ ಎರಡನೇ ಆಸ್ಪತ್ರೆಯ ವೈದ್ಯರು 'ಪ್ಲೇಟ್‌ಲೆಟ್' ಬ್ಯಾಗ್ ನಕಲಿ ಹಾಗೂ ವಾಸ್ತವವಾಗಿ ರಾಸಾಯನಿಕಗಳು ಮತ್ತು ಸಿಹಿ ಅಥವಾ ಮೋಸಂಬಿ ರಸದ ಮಿಶ್ರಣ ಇದರಲ್ಲಿದೆ ಎಂದು ಹೇಳಿದರು ಎಂದು ಕುಟುಂಬ ತಿಳಿಸಿದೆ.

ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ.

"ನನ್ನ 26 ವರ್ಷದ ಸಹೋದರಿ ವಿಧವೆಯಾಗಿದ್ದಾಳೆ. ಆದಿತ್ಯನಾಥ್ ಸರಕಾರವು ಲೋಪ ಎಸೆಗಿರುವ  ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ" ಎಂದು ರೋಗಿಯ ಸಂಬಂಧಿ ಸೌರಭ್ ತ್ರಿಪಾಠಿ ಹೇಳಿದ್ದಾರೆ.

ಮುಖ್ಯ ವೈದ್ಯಾಧಿಕಾರಿಗಳ ಸೂಚನೆಯ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದ್ದು, ಮಾದರಿಯನ್ನು ಪರೀಕ್ಷಿಸುವವರೆಗೆ ಹಾಗೆಯೇ ಇರುತ್ತದೆ ಎಂದು ಪ್ರಯಾಗರಾಜ್‌ನ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News