ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವ್ಲಾಖಾರ ಆರೋಗ್ಯ ವರದಿಗಳ ಪರಿಶೀಲನೆಗೆ NIA ಗೆ ಸುಪ್ರೀಂ ಅನುಮತಿ

Update: 2022-10-21 16:21 GMT

ಹೊಸದಿಲ್ಲಿ,ಅ.21: ಸಾಮಾಜಿಕ ಕಾರ್ಯಕರ್ತ ಗೌತಮ ನವ್ಲಾಖಾ(Gautama Navlakha) ರ ಆರೋಗ್ಯ ವರದಿಗಳ ಪರಿಶೀಲನೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಭೀಮಾ ಕೋರೆಗಾಂವ್(Bhima Koregaon) ಪ್ರಕರಣದ ಇತರ ಕಕ್ಷಿಗಳಿಗೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅನುಮತಿ ನೀಡಿದೆ.

 ‌2018ರಲ್ಲಿ ಪುಣೆ ಸಮೀಪದ ಗ್ರಾಮದಲ್ಲಿ ನಡೆದಿದ್ದ ಜಾತಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನವ್ಲಾಖಾ (70) ಆರೋಪಿಯಾಗಿದ್ದಾರೆ. ಹಿಂಸಾಚಾರದ ಸಂಚು ಹೆಣೆದಿದ್ದ ಆರೋಪದಲ್ಲಿ ನವ್ಲಾಖಾ ಸೇರಿದಂತೆ 16 ಜನರನ್ನು ಬಂಧಿಸಲಾಗಿದೆ.

ತನ್ನನ್ನು ಗೃಹಬಂಧನದಲ್ಲಿರಿಸುವಂತೆ ಕೋರಿ ನವ್ಲಾಖಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ. ಅನಾರೋಗ್ಯ ಮತ್ತು ತಲೋಜಾ ಜೈಲಿನಲ್ಲಿಯ ಕಳಪೆ ಸೌಲಭ್ಯಗಳನ್ನು ನವ್ಲಾಖಾ ತನ್ನ ಬೇಡಿಕೆಗೆ ಕಾರಣಗಳನ್ನಾಗಿ ಉಲ್ಲೇಖಿಸಿದ್ದಾರೆ.

ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ನವ್ಲಾಖಾರನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೆ.29ರಂದು ಸರ್ವೋಚ್ಚ ನ್ಯಾಯಾಲಯವು ತಲೋಜಾ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ವೈದ್ಯಕೀಯ ತಪಾಸಣೆಯ ವರದಿಯನ್ನು ಸಲ್ಲಿಸುವಂತೆ ಆಸ್ಪತ್ರೆಗೆ ಸೂಚಿಸಲಾಗಿತ್ತು.

ನವ್ಲಾಖಾರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಮಾಮೂಲು ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರ ಕೋರಿಕೆಯಂತೆ ನ್ಯಾಯಾಲಯವು ವಿಚಾರಣೆಯನ್ನು ನ.9ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News