ಎಲ್‌ಕೆಜಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಹೈದರಾಬಾದ್‌ನ ಶಾಲೆಯನ್ನು ಶಾಶ್ವತ ಮುಚ್ಚಲು ಆದೇಶ

Update: 2022-10-21 17:32 GMT

ಹೈದರಾಬಾದ್, ಅ. 21: ಶಾಲಾ ಪ್ರಾಂಶುಪಾಲರ ಕಾರು ಚಾಲಕ ನಾಲ್ಕು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ  ಎಸಗಿದ್ದಾನೆ ಎಂದು ಹೇಳಲಾದ ಬಂಜಾರಾ ಹಿಲ್‌ನ ಖಾಸಗಿ ಶಾಲೆಯ ಮಾನ್ಯತೆಯನ್ನು ಕೂಡಲೇ ರದ್ದುಗೊಳಿಸುವಂತೆ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರಕಾರ ಆದೇಶಿದೆ. 

ಎಲ್‌ಕೆಜಿಯ ವಿದ್ಯಾರ್ಥಿನಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಹೇಳಲಾದ ಬಂಜಾರ ಹಿಲ್‌ನ ಬಿಎಸ್‌ಡಿ ಡಿಎವಿ ಶಾಲೆಯ ಮಾನ್ಯತೆಯನ್ನು ಕೂಡಲೇ ರದ್ದುಗೊಳಿಸುವಂತೆ ಹೈದರಾಬಾದ್ ಜಿಲ್ಲಾ ಶಿಕ್ಷಣ ಅಧಿಕಾರಿಗೆ ನಿರ್ದೇಶಿಸಲಾಗಿದೆ ಎಂದು ತೆಲಂಗಾಣದ ಶಿಕ್ಷಣ ಸಚಿವೆ ಸಬಿತಾ ಇಂದಿರಾ ರೆಡ್ಡಿ ಅವರು ಟ್ವಿಟರ್‌ನ ಪೋಸ್ಟ್‌ನಲ್ಲಿ ಹೇಳಿದ್ದಾರೆ. 

ಶಾಲೆಯ ವಿದ್ಯಾರ್ಥಿಗಳನ್ನು ಬೇರೊಂದು ಶಾಲೆಗೆ ವರ್ಗಾಯಿಸುವ ಸಾಧ್ಯತೆ ಇದೆ ಮೂಲಗಳು ತಿಳಿಸಿವೆ.

ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ತೆಗೆದುಕೊಂಡ ಭದ್ರತಾ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಕೂಡ ತೆಲಂಗಾಣ ಶಿಕ್ಷಣ ಕಾರ್ಯದರ್ಶಿ ನೇತೃತ್ವದ ಸಮಿತಿಗೆ ರಾಜ್ಯ ಶಿಕ್ಷಣ ಸಚಿವೆ ಆದೇಶಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಶಾಲೆಯ ಪ್ರಾಂಶುಪಾಲ ಹಾಗೂ ಚಾಲಕನನ್ನು ಬಂಧಿಸಲಾಗಿದೆ ಹಾಗೂ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ಬಂಧನವಾದ ಕೂಡಲೇ ಶಾಲೆಯ ಆಡಳಿತ ಮಂಡಳಿ ಶಾಲೆಗೆ ಅಕ್ಟೋಬರ್ 26ರ ವರೆಗೆ ರಜೆ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News