ಉತ್ತರಪ್ರದೇಶ: ನಕಲಿ ಪ್ಲೇಟ್‌ಲೆಟ್‌ ಮಾರಾಟ ಆರೋಪ,10 ಮಂದಿ ಬಂಧನ

Update: 2022-10-22 05:19 GMT
Photo:PTI

ಲಕ್ನೋ: ಡೆಂಗಿ ರೋಗಿಗಳ ಕುಟುಂಬಗಳಿಗೆ ರಕ್ತದ ಪ್ಲಾಸ್ಮಾವನ್ನು ನಕಲಿ ಪ್ಲೇಟ್‌ಲೆಟ್‌ಗಳಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 10 ಮಂದಿಯನ್ನು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಆಸ್ಪತ್ರೆಯೊಂದು ಡೆಂಗಿ ರೋಗಿಯೊಬ್ಬರಿಗೆ ಸಿಹಿ ರಸವನ್ನು(ಮೋಸಂಬಿ) ಪ್ಲೇಟ್‌ಲೆಟ್‌  ಆಗಿ ಪೂರೈಸಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಬಂಧನಗಳು ನಡೆದಿವೆ.

ಬಂಧಿತ 10 ಆರೋಪಿಗಳು ಬ್ಲಡ್ ಬ್ಯಾಂಕ್‌ಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಅವುಗಳನ್ನು ಪ್ಲೇಟ್‌ಲೆಟ್‌ಗಳಾಗಿ ಮರು ಪ್ಯಾಕೇಜಿಂಗ್ ಮಾಡುತ್ತಿದ್ದರು. ಎರಡೂ ರಕ್ತದ ಅಂಶಗಳಾಗಿವೆ. ಆದರೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಡೆಂಗಿ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.

"ಪ್ರಯಾಗ್‌ರಾಜ್‌ನಲ್ಲಿ ಜ್ಯೂಸ್ ಅನ್ನು ಪ್ಲೇಟ್‌ಲೆಟ್‌ಗಳಾಗಿ ಪೂರೈಸಿರುವ ಬಗ್ಗೆ ನಾವು ಈ 10 ಮಂದಿ ಆರೋಪಿಗಳನ್ನು ಪ್ರಶ್ನಿಸಿದ್ದೇವೆ.   ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ಪೂರೈಸಲಾಗುತ್ತಿದೆ ಎಂದು ಆರೋಪಿಗಳು ಹೇಳಿದ್ದಾರೆ" ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ಹೇಳಿದರು.

"ಇತ್ತೀಚಿನ ದಿನಗಳಲ್ಲಿ ಡೆಂಗಿ ಸಾಕಷ್ಟು ಹರಡಿದೆ. ಇದು  ಪ್ಲೇಟ್‌ಲೆಟ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಆರೋಪಿಗಳು ಇದರ ಲಾಭವನ್ನು ಪಡೆದುಕೊಂಡು ಬ್ಲಡ್ ಬ್ಯಾಂಕ್ ನಿಂದ ತರಲಾದ ಪ್ಲಾಸ್ಮಾವನ್ನು ನಕಲಿ ಮಾಡಿ ಮರು ಪ್ಯಾಕ್ ಮಾಡುತ್ತಿದ್ದರು. ನಕಲಿ ಮಾಡಿದ ಪ್ಯಾಕೆಟ್ ಗಳಲ್ಲಿ ಪ್ಲೇಟ್ ಲೆಟ್ ಬದಲಿಗೆ ಮೂಸುಂಬಿ ಜ್ಯೂಸ್ ತುಂಬಿ ಮಾರಾಟ ಮಾಡುವ ಮೂಲಕ  ಹೆಚ್ಚಾಗಿ ಬಡವರನ್ನು ವಂಚಿಸುತ್ತಿದ್ದರು" ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News