ಪೂರ್ವ ನಾಗಾಲ್ಯಾಂಡ್ ಜನರ ಪ್ರತ್ಯೇಕ ರಾಜ್ಯ ಬೇಡಿಕೆಯಲ್ಲಿ ತಪ್ಪೇನಿಲ್ಲ: ಮುಖ್ಯಮಂತ್ರಿ ರಿಯೋ

Update: 2022-10-22 07:02 GMT
ನಾಗಾಲ್ಯಾಂಡ್ ಮುಖ್ಯಮಂತ್ರಿ ನೀಫಿಯು ರಿಯೋ (Twitter/@Neiphiu_Rio)

ಕೊಹಿಮಾ: ನಾಗಾಲ್ಯಾಂಡ್ (Nagaland) ರಾಜ್ಯದ ಪೂರ್ವ ಪ್ರಾಂತ್ಯದ ಜನರು ಪ್ರತ್ಯೇಕ ರಾಜ್ಯಕ್ಕೆ ಮುಂದಿಟ್ಟಿರುವ ಬೇಡಿಕೆಯಲ್ಲಿ ತಪ್ಪೇನಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ನೀಫಿಯು ರಿಯೋ (Neiphiu Rio) ಹೇಳಿದ್ದಾರೆ.

"ನಾವು ನಾಗಾಗಳು, ನಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿ ಬಿಡುತ್ತೇವೆ. ಅವರು (ಪೂರ್ವ ನಾಗಾಲ್ಯಾಂಡ್ ಜನರು) (Eastern Nagaland) ತಮಗೆ ಅನಿಸಿದ್ದನ್ನು ಹೇಳಿದ್ದರೆ ತಪ್ಪಿಲ್ಲ, ಈ ಎಲ್ಲಾ ವಿಚಾರಗಳನ್ನು ಪರಿಹರಿಸಲಾಗುವುದು,'' ಎಂದು ಅವರು ಹೇಳಿದರು.

ಪೂರ್ವ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಝೇಶನ್ (Eastern Nagaland Peoples' Organisation (ENPO)) ಮುಂಬರುವ ಹಾರ್ನ್‍ಬಿಲ್ ಫೆಸ್ಟಿವಲ್‍ನಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿರುವುದು ಹಾಗೂ ಪ್ರತ್ಯೇಕ ರಾಜ್ಯ ಬೇಡಿಕೆಗೆ ಬೆಂಬಲಿಸಿ ಆ ಪ್ರಾಂತ್ಯದ 20 ಶಾಸಕರಿಗೆ ರಾಜೀನಾಮೆ ನೀಡುವಂತೆ ಸೂಚಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, "ನಾವು ಅವರ ಜೊತೆಗೆ ಮಾತುಕತೆ ನಡೆಸುತ್ತಿದ್ದೇವೆ ಹಾಗೂ ಕೇಂದ್ರ ಗೃಹ ಸಚಿವರ ಪ್ರಸ್ತಾವಿತ ರಾಜ್ಯ ಭೇಟಿಯ ಸಂದರ್ಭ ಅವರ ಜೊತೆಗೆ ಚರ್ಚೆಗೆ ಸಮಯ ನಿಗದಿಪಡಿಸುತ್ತೇವೆ. ಪ್ರಧಾನಿ ಕೂಡ ಬಂದರೆ ಅವರೊಂದಿಗೆ ಕೂಡ ಮಾತನಾಡಲು ಮನವಿ ಮಾಡಲಾಗುವುದು,'' ಎಂದರು.

ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ ಪೂರ್ವ ನಾಗಾಲ್ಯಾಂಡ್ ಅನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಆಗ್ರಹ ಮುಗಿಲು ಮುಟ್ಟಿದೆ. ಬೇಡಿಕೆ ಈಡೇರುವ ತನಕ ಯಾವುದೇ ಚುನಾವಣೆಯಲ್ಲಿ ಭಾಗವಹಿಸಬಾರದು ಎಂದು ಆ ಪ್ರಾಂತ್ಯದ 20 ಶಾಸಕರು ಈಗಾಗಲೇ ಕರೆ ನೀಡಿದ್ದಾರೆ.

ಪೂರ್ವ ನಾಗಾಲ್ಯಾಂಡ್‍ನಲ್ಲಿ ಆರು ಜಿಲ್ಲೆಗಳಿವೆ- ಮೊನ್, ತೂಯೆನ್ಸಂಗ್, ಕಿಫೈರ್, ಲೊಂಗ್ಲೆಂಗ್, ನೊಕ್ಲಕ್ ಮತ್ತು ಶಮಟೋರ್. ಈ ಭಾಗಗಳಲ್ಲಿ ಚಂಗ್, ಖಿಯಾಮ್ನಿಯುಂಗನ್, ಕೊನ್ಯಕ್, ಫೊಮ್, ಸಂಗ್ಟಮ್, ಟಿಖಿರ್ ಮತ್ತು ಯಿಂಖಿಯುಂಗ್ ಆದಿವಾಸಿಗಳು ವಾಸಿಸುತ್ತಾರೆ.

ಇದನ್ನೂ ಓದಿ: ನವವಿವಾಹಿತ ವೈದ್ಯ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News