ಸಾಂವಿಧಾನಿಕ ಆಶಯದ ಮೀಸಲಾತಿಯ ನಿರ್ನಾಮ

Update: 2022-10-22 08:43 GMT

ದೇಶದಲ್ಲಿ ರಜಪೂತರು, ಮರಾಠರು, ಜಾಠರು, ಪಟೇಲರು ಮತ್ತು ಬ್ರಾಹ್ಮಣರು ಮುಂತಾದ ಮೇಲ್ಜಾತಿ ಸಮುದಾಯಗಳು ತಮಗೂ ಮೀಸಲಾತಿ ನೀಡುವಂತೆ 2019ರ ವರೆಗೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಾ ಬಂದರು. 2018ರಲ್ಲಿ ಮಧ್ಯಪ್ರದೇಶದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿತು, ಇದೇ ರೀತಿಯಲ್ಲಿ ಬಿಜೆಪಿ ಇನ್ನೂ ಕೆಲವು ರಾಜ್ಯಗಳಲ್ಲಿ ಸೋಲಿನ ರುಚಿ ಕಂಡಿತು. 2019ರ ಲೋಕಸಭೆಯ ಚುನಾವಣೆ ಸಹ ಸನಿಹದಲ್ಲಿತ್ತು, ಆಗ ಜನರನ್ನು ಓಲೈಸುವ ಹಲವು ಕಾರ್ಯಕ್ರಮಗಳನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಬಿಜೆಪಿಯಲ್ಲಿ ಚರ್ಚೆ ನಡೆಯಿತು. ಅದರ ಭಾಗವಾಗಿ ಮೇಲ್ಜಾತಿಗಳನ್ನು ತೃಪ್ತಿ ಪಡಿಸಿ ಮಗದೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ನೀಡಲು ಸಂವಿಧಾನಕ್ಕೆ 124 ನೇ ತಿದ್ದುಪಡಿಯ ಮಸೂದೆಯನ್ನು ತರಲಾಯಿತು.

 ಕೇವಲ ಪ್ರಧಾನಿಯ ಕಚೇರಿಯಲ್ಲಿ ಒಂದು ಗೌಪ್ಯ ಸಭೆಯ ಮೂಲಕ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕೇಂದ್ರ ಮಂತ್ರಿಯವರ ಪೋನ್ ಕರೆಯ ಅನುಮೋದನೆಯೊಂದಿಗೆ ಮಸೂದೆಯನ್ನು ಪಾರ್ಲಿಮೆಂಟಿಗೆ ತರಲಾಯಿತು. ಆಗಿನ ಲೋಕಸಭೆಯ ಸ್ಪೀಕರ್ ಮಸೂದೆಗೆ 7 ದಿನಗಳ ಷರತ್ತುಬದ್ಧ ವಿನಾಯಿತಿಯನ್ನು ಸಹ ನೀಡಿದ್ದರು (ಅರ್‌ಟಿಐ ವರದಿ, ದಿ ವೈರ್). ಮಸೂದೆ ತರುವ ಮುನ್ನ ಕಾನೂನು ಮತ್ತು ನ್ಯಾಯ ವಿಭಾಗದೊಂದಿಗೆ ಒಂದು ಚರ್ಚೆ ಆಗಿದ್ದು ಬಿಟ್ಟರೆ ಯಾವುದೇ ಇತರ ಇಲಾಖೆಯೊಂದಿಗೆ ಚರ್ಚೆ ಮಾಡಲಾಗಿಲ್ಲ ಎಂಬುದು ತಜ್ಞರ ಅಭಿಪ್ರಾಯ. 2019ರ ಜನವರಿ 7ರಂದು ರಾತ್ರಿ ಕ್ಯಾಬಿನೆಟ್‌ನ ಅನುಮತಿಯೊಂದಿಗೆ, ಜನವರಿ 8ರಂದು ಅಂದರೆ ಚಳಿಗಾಲದ ಅಧಿವೇಶನದ ಕೊನೆಯ ದಿನ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಪ್ರವೇಶಪಡಿಸಿದರು. ಕೇವಲ ಮಸೂದೆಯ ಸಲುವಾಗಿಯೇ ಮೇಲ್ಮನೆಯ ಅಧಿವೇಶನವನ್ನು ಒಂದು ದಿನದ ಮಟ್ಟಿಗೆ ಮುಂದೂಡಿ ಜನವರಿ 9ರಂದು ಅಲ್ಲಿಯೂ ಬಹುಮತ ಗಳಿಸಿ, ಜನವರಿ 12ರಂದು ರಾಷ್ಟ್ರಪತಿ ಅಂಕಿತದೊಂದಿಗೆ ಕಾರ್ಯರೂಪಕ್ಕೆ ತರಲಾಯಿತು. ಆಘಾತಕಾರಿ ವಿಷಯ ಏನೆಂದರೆ ಜನವರಿ 8ರಂದು ಪಾರ್ಲಿಮೆಂಟಿನಲ್ಲಿ ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನಕ್ಕೆ ಯಾವುದಾದರೂ ಮೀಸಲಾತಿ ಮಸೂದೆ ತರಲಾಗುತ್ತಿದೆಯೇ ಎಂದು ಕೇಳಿರುವ ಪ್ರಶ್ನೆಗೆ ಸರಕಾರ ಇಲ್ಲ ಎಂದು ಉತ್ತರಿಸಿದೆ. ಆದರೆ ಅದೇ ದಿನವೇ ಮಸೂದೆಯನ್ನು ಪಾರ್ಲಿಮೆಂಟ್‌ನಲ್ಲಿ ಪ್ರವೇಶಪಡಿಸಿದರು. ಯಾವುದೇ ಸಮಿತಿಯ ವರದಿಯಿಲ್ಲದೆ, ಪಾರ್ಲಿಮೆಂಟಿನಲ್ಲಿಯು ಚರ್ಚೆಗೂ ಅವಕಾಶವಿಲ್ಲದೆ ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಗ್ರಹಿಸದೆ ಕೇಂದ್ರ ಸರಕಾರ ಕೇವಲ 20 ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗಳಿಗೆ ಮೀಸಲಾತಿ ಜಾರಿ ಮಾಡಲಾಯಿತು.

ಕೇವಲ ಆದಾಯ ಮಿತಿಯ ಮೇಲೆ ದೇಶದಲ್ಲಿ ಇದುವರೆಗೂ ಯಾವುದೇ ಮೀಸಲಾತಿಯನ್ನು ಜಾರಿ ಮಾಡಲಾಗಿಲ್ಲ ಮತ್ತು ಅದಕ್ಕೆ ಸಂವಿಧಾನದಲ್ಲಿ ಅವಕಾಶವೂ ಇಲ್ಲ. ಇಂದ್ರಾ ಸಾಹ್ನಿ ಕೇಸಿನಲ್ಲಿಯೂ ನ್ಯಾಯಾಲಯವು (1992) ಮೀಸಲಾತಿಗೆ ಸಾಮಾಜಿಕವಾಗಿ ಹಿಂದುಳಿದಿರುವಿಕೆಯೇ ಮುಖ್ಯಮಾನದಂಡ ವಾಗಬೇಕೇ ಹೊರತು ಆರ್ಥಿಕತೆಯ ಏಕ ಮಾನದಂಡವಾಗಬಾರದು ಎಂದು ಅಭಿಪ್ರಾಯ ಪಟ್ಟಿದೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ರವರು ಮೀಸಲಾತಿಯು ಸಾಮಾಜಿಕ ಉನ್ನತೀಕರಣ ಅಥವಾ ಸಬಲೀಕರಣಕ್ಕಾಗಿ ಇರುವುದೇ ಹೊರತು ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ ಎಂಬ ವಾಸ್ತವವನ್ನು ಒತ್ತಿ ಹೇಳಿರುತ್ತಾರೆ. ಇಂದ್ರಾ ಸಾಹ್ನಿ ಕೇಸಿನಲ್ಲಿ 9 ನ್ಯಾಯಾಧೀಶರ ಬೆಂಚ್ ಮೀಸಲಾತಿಗೆ ಶೇ. 50ರ ಮಿತಿಯನ್ನು ಹೇರಿದೆ. ಆದರೆ ಈ ತೀರ್ಪು ಆರ್ಥಿಕ ಮೀಸಲಾತಿಗೆ ಅನ್ವಯವಾಗುವುದಿಲ್ಲವೆಂಬುದು ಅಂದಿನ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರ ವಿತಂಡವಾದವಾಗಿತ್ತು. ಆಂಧ್ರಪ್ರದೇಶದಲ್ಲಿ ಒಂದು ವರದಿಯ ಆಧಾರದ ಮೇಲೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮುಸ್ಲಿಮ್ ಸಮುದಾಯಕ್ಕೆ ಶೇ. 5ರಷ್ಟು ಮೀಸಲಾತಿ ಕಲ್ಪಿಸಿದ್ದನ್ನು ಪ್ರಶ್ನಿಸಿ ಅಲ್ಲಿನ ಬಿಜೆಪಿ ನ್ಯಾಯಾಲಯದ ಮೆಟ್ಟಿಲೇರಿತ್ತು. ನಂತರ ಅಲ್ಲಿನ ಉಚ್ಚ ನ್ಯಾಯಾಲಯವು ಸಂವಿಧಾನದ ಉಲ್ಲಂಘನೆ ಎಂದು ಮುಸ್ಲಿಮ್‌ಮೀಸಲಾತಿಯನ್ನು ರದ್ದುಗೊಳಿಸಿತ್ತು, ಆ ವಿಷಯ ಇಂದಿಗೂ ಸುಪ್ರೀಂ ಅಂಗಳದಲ್ಲಿಯೇ ಇದೆ. ಬಿಜೆಪಿ ಪ್ರಕಾರ ಸಾಮಾಜಿಕವಾಗಿ ವತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಕ್ಕೆ ಮೀಸಲಾತಿ ತಪ್ಪು, ಕೇವಲ ಆರ್ಥಿಕವಾಗಿ ಬಡವರಾಗಿದ್ದರೆ ಮೀಸಲಾತಿ ಕಲ್ಪಿಸುವುದು ಸರಿ. ಕೇಂದ್ರ ಸರಕಾರವು 103ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಅನುಚ್ಛೇದ 15 ಮತ್ತು 16ಕ್ಕೆ ಬದಲಾವಣೆ ತಂದು ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿ ಸಮುದಾಯಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಿರುವುದು ಸಂವಿಧಾನ ವಿರೋಧಿ ಎಂದು ಪ್ರಶ್ನಿಸಿ ಹಲವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. 2022ರ ಸೆಪ್ಟಂಬರ್‌ನಲ್ಲಿ ನಡೆದ ನ್ಯಾಯಾಲಯದ ವಿಚಾರಣೆಯಲ್ಲಿ ಶೇ. 10ರ ಮೀಸಲಾತಿಗೆ ಸಮುಜಾಯಿಷಿ ನೀಡುವ ಬರದಲ್ಲಿ ದೇಶದ ಅಟಾರ್ನಿ ಜನರಲ್ ವೇಣುಗೋಪಾಲ್ ರವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಸರಕಾರದ ಪ್ರಾಯೋಜನೆಗಳಿಂದ ತುಂಬಿಹೋಗಿದ್ದಾರೆ ಎಂದು ತಿಳಿಸಿರುತ್ತಾರೆ. ಯಾವ ಅಂಕಿಅಂಶಗಳ ಆಧಾರದ ಮೇಲೆ ಈ ಅಸೂಯೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದು ಪ್ರಶ್ನಾರ್ಹ. ಪ.ಜಾತಿ/ಪ.ಪಂಗಡದ ಜಾತಿಯವರಿಗೆ ನೀಡಿರುವ ಸಾಂವಿಧಾನಿಕ ಸೌಲಭ್ಯಗಳ ಕುರಿತು ನ್ಯಾಯಾಲಯದಲ್ಲಿ ಪ್ರಸ್ತಾಪ ಸಲ್ಲಿಸುತ್ತಾ ಮೀಸಲಾತಿಗೆ ಸಂಬಂಧಿಸಿದಂತೆ ಅವರು ಹೆಚ್ಚು ಅಸಮಾನರಾಗಿದ್ದು, ಮಹತ್ತರ ಸ್ಥಿತಿಯಲ್ಲಿದ್ದಾರೆ ಎಂದು ಆರ್ಥಿಕ ಮೀಸಲಾತಿಯು ಪ.ಜಾ./ಪ.ಪಂ./ಒಬಿಸಿಗಳ ಮೀಸಲಾತಿಗೆ ತೊಂದರೆ ಮಾಡುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಮುಂದುವರಿದು 2011ನೇ ಜನಗಣತಿಯ ಪ್ರಕಾರ ದೇಶದ 121 ಕೋಟಿ ಜನರಲ್ಲಿ ಶೇ. 25ರಷ್ಟು ಜನರು ಆರ್ಥಿಕವಾಗಿ ದುರ್ಬಲರಾಗಿದ್ದು, ಈ ಪೈಕಿ ಶೇ. 18.2 ಅಂದರೆ 35 ಕೋಟಿ ಜನ ಮೇಲ್ಜಾತಿಗಳಲ್ಲಿ ಇದ್ದಾರೆ ಎಂಬ ಆಧಾರ ರಹಿತ ಅಂಶಗಳನ್ನು ವಾದಿಸಿದ್ದಾರೆ. ಮೇಲ್ಜಾತಿಗಳ ಮೀಸಲಾತಿಯು ಸ್ವತಂತ್ರ ಮೀಸಲಾತಿಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ದುರ್ಬಲರ ಮೀಸಲಾತಿಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ/ಹಿಂದುಳಿದ ವರ್ಗಗಳ ಮೀಸಲಾತಿಗೂ ಸಂಬಂಧವಿಲ್ಲ ಎಂಬ ತರ್ಕರಹಿತ ವಾದವನ್ನು ಮಂಡಿಸಿದ್ದಾರೆ. ಆದರೆ ಪ್ರಶ್ನೆ ಆರ್ಥಿಕ ಮೀಸಲಾತಿ ಸಂವಿಧಾನಬದ್ದವಲ್ಲ ಎಂಬ ಕನಿಷ್ಠ ಪರಿಜ್ಞಾನ ಮರೆತು ಮಿಕ್ಕೆಲ್ಲಾ ವಾದಗಳನ್ನು ಮಂಡಿಸಿದ್ದಾರೆ. ಶೇ. 10ರ ಮೀಸಲಾತಿ ಪಡೆಯಲು ಸರಕಾರ ವಿಧಿಸಿರುವ ಷರತ್ತುಗಳಲ್ಲಿ ಪ್ರಮುಖವಾದದ್ದು ರೂ. 8 ಲಕ್ಷದವರೆಗೂ ವಾರ್ಷಿಕ ಆದಾಯ ಮತ್ತು 5 ಎಕರೆ ಕೃಷಿ ಭೂಮಿ. ಮನವಿದಾರರ ಪರ ವಕೀಲ ಗೋಪಾಲ್‌ರವರು ‘‘4 ಜನ ಇರುವ ಒಂದು ಸಂಸಾರ ರೂ. 25 ಸಾವಿರಕ್ಕಿಂತ ಕಡಿಮೆ ಆದಾಯವನ್ನು ಗಳಿಸುತ್ತಿದೆ ಮತ್ತು ದೇಶದಲ್ಲಿ ಈ ಸಂಖ್ಯೆ ಶೇ. 96ಕ್ಕೂ ಅಧಿಕವಿರುವಾಗ, ಕೇಂದ್ರವು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳ ಮೀಸಲಾತಿಗೆ ರೂ. 8 ಲಕ್ಷ ನಿಗದಿಪಡಿಸಿದ್ದು ಹೇಗೆ?’’ ಎಂದು ಪ್ರಶ್ನಿಸಿದ್ದಾರೆ.

ಮತ್ತೊಂದು ವರದಿಯ ಪ್ರಕಾರ ಭಾರತದ ವಿವಿಧ ರಾಜ್ಯಗಳಲ್ಲಿ ತಲಾ ಆದಾಯವು ವಿವಿಧ ರೀತಿಯಲ್ಲಿ ಇದ್ದು, ಈ ಪ್ರಮಾಣವು ಗೋವಾ ರಾಜ್ಯದಲ್ಲಿ ರೂ. 4 ಲಕ್ಷ ಇದ್ದರೆ ಬಿಹಾರಕ್ಕೆ ರೂ. 40 ಸಾವಿರ ಇದೆ ಎನ್ನಲಾಗುತ್ತದೆ. ಹಾಗಾದರೆ ರೂ. 8 ಲಕ್ಷ ಆದಾಯ ಮಿತಿ ಏಕೆ ಎಂಬುದು ಪ್ರಶ್ನೆ.

ದೇಶದ 650 ಜಿಲ್ಲೆಗಳ 10 (2005-06ರಿಂದ 2015-16) ವರ್ಷಗಳ ಅಂಕಿ ಅಂಶಗಳ ಅಧ್ಯಯನ ನಡೆಸಿ 2019ರಲ್ಲಿ ವರದಿಯನ್ನು ಸಲ್ಲಿಸಿರುವ ವಿಶ್ವಸಂಸ್ಥೆಯ ಗ್ಲೋಬಲ್ ಮಲ್ಟಿ ಡೈಮನ್ಷನಲ್ ಪೋವರ್ಟಿ ಇಂಡೆಕ್ಸ್‌ನ ಪ್ರಕಾರ ದೇಶದ ಪ್ರತೀ 6 ಬಡಜನರ ಪೈಕಿ ಇಬ್ಬರು ಪ.ಜಾ./ಪ.ಪಂ. ಆಗಿರುತ್ತಾರೆ. ವರದಿಯ ಪ್ರಕಾರ ಬಡತನವು ಪ.ಪಂಗಡದಲ್ಲಿ ಶೇ. 50.6, ಪ.ಜಾತಿಯಲ್ಲಿ ಶೇ. 33.3 ಮತ್ತು ಒಬಿಸಿ ಸಮುದಾಯದಲ್ಲಿ ಶೇ. 27.2 ರಷ್ಟಿದೆ. 2019ರ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯ, ಜೆಎನ್‌ಯು ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್ ವರದಿಯ ಪ್ರಕಾರ ಶೇ. 22.3ರಷ್ಟು ಮೇಲ್ಜಾತಿಗಳು ಶೇ. 41ರಷ್ಟು ಸಂಪತ್ತನ್ನು ಹೊಂದಿರುವುದು ಕಂಡುಬಂದಿದೆ. 2019ರ ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ ಶೇ. 10ರಷ್ಟು ಮೇಲ್ಜಾತಿಗಳು ಶೇ. 60ರಷ್ಟು ಆರ್ಥಿಕತೆಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ. 2022ರ ವರ್ಲ್ಡ್ ಇನಿಕ್ವಾಲಿಟಿ ವರದಿಯ ಪ್ರಕಾರ ಪ್ರಪಂಚದಲ್ಲಿ ಅತಿ ಹೆಚ್ಚು ಅಸಮಾನತೆಯನ್ನು ಹೊಂದಿರುವ ದೇಶಗಳ ಪೈಕಿ ಭಾರತವು ಒಂದಾಗಿದೆ. ದೇಶದ ಪ್ರತೀ ನಾಗರಿಕನ ಸರಾಸರಿ ರಾಷ್ಟ್ರೀಯ ಆದಾಯವು ರೂ. 2,04,200ರಷ್ಟಿದ್ದರೆ, ಶೇ. 50ರಷ್ಟು ಕೆಳವರ್ಗಗಳ ಆದಾಯವು ರೂ. 53,610ರಷ್ಟಿದೆ ಮತ್ತು ಶೇ. 10ರಷ್ಟು ಮೇಲ್ವರ್ಗಗಳ ಆದಾಯವು ರೂ. 11,66,520 ರಷ್ಟಿರುವುದು ಕಂಡುಬಂದಿದೆ. ವಾಸ್ತವ ಅಂಕಿ ಅಂಶಗಳು ಹೀಗಿರುವಾಗ ಆರ್ಥಿಕ ಮೀಸಲಾತಿಗೆ 8 ಲಕ್ಷ ಆದಾಯದ ಮಿತಿ ಕುತಂತ್ರವೇ ಆಗಿದೆ ಎಂಬುದು ಖಚಿತ.

ಮಗದೊಂದು ಪ್ರಶ್ನೆ ಮೇಲ್ಜಾತಿಗಳು ಮೀಸಲಾತಿಯನ್ನು ಪಡೆಯಲು 5 ಎಕರೆವರೆಗೂ ಕೃಷಿ ಭೂಮಿ ಹೊಂದಿರಬಹುದು ಎಂಬ ನಿಬಂಧನೆಯನ್ನು ಯಾವ ಸಮೀಕ್ಷೆಯ ವರದಿಯ ಆಧಾರದ ಮೇಲೆ ಜಾರಿ ಮಾಡಿದರು ಎಂಬುದಕ್ಕೆ ಇದುವರೆಗೂ ಸೂಕ್ತ ಉತ್ತರ ಲಭ್ಯವಿಲ್ಲ.

ಭಾರತದ 2015-16ರ ಕೃಷಿ ಸಮೀಕ್ಷೆಯ ಪ್ರಕಾರ ಗ್ರಾಮೀಣ ಭಾಗದಲ್ಲಿ ಶೇ. 18.5ರಷ್ಟಿರುವ ಪ.ಜಾತಿಯು ಶೇ. 9 ಮತ್ತು ಶೇ. 11ರಷ್ಟಿರುವ ಪ.ಪಂಗಡಗಳು ಶೇ. 11ರಷ್ಟು ಕೃಷಿ ಭೂಮಿಯನ್ನು ಹೊಂದಿದ್ದು ಇತರ ಸಮುದಾಯಗಳು ಶೇ. 80ರಷ್ಟು ಕೃಷಿ ಭೂಮಿಯನ್ನು ಹೊಂದಿದ್ದಾರೆ. ಬಹುತೇಕ ದಲಿತರಲ್ಲಿ ಭೂಮಿ ಕೇವಲ 1ರಿಂದ 2ಎಕರೆ ಅಷ್ಟೆ ಇದೆ, ಭೂಮಿ ಇದ್ದರೂ ಕೃಷಿಗೆ ಯೋಗ್ಯವಲ್ಲ ಮತ್ತು ಬಹುತೇಕ ವರದಿಗಳ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ ಭೂಮಿಯೇ ಇಲ್ಲ ಎಂಬುದು ಆಘಾತಕಾರಿ ಸಂಗತಿ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ 2019ರ ಭೂ ಸರ್ವೇಯ ಪ್ರಕಾರ ಶೇ. 54ರಷ್ಟು ಗ್ರಾಮೀಣ ಕೃಷಿಕರಲ್ಲಿ ಶೇ. 70ರಷ್ಟು ಜನ 1 ಹೆಕ್ಟೇರ್‌ಗಿಂತ ಕಡಿಮೆ ಭೂಮಿಯನ್ನು ಹೊಂದಿದ್ದರೆ, ಶೇ. 46ರಷ್ಟು ಕೃಷಿಕರಲ್ಲದ ಗ್ರಾಮೀಣ ಜನಾಂಗ ಕೇವಲ 1 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಆದರೆ ಸರಕಾರ ಮೇಲ್ಜಾತಿಗಳ ಮೀಸಲಾತಿಗೆ ವಿಧಿಸಿರುವ 5 ಎಕರೆ ಅಥವಾ 2 ಹೆಕ್ಟೇರ್ ಭೂಮಿಯ ಮಾನದಂಡವು ತಾರತಮ್ಯವಾಗಿದ್ದು ಶೋಷಿತ ಸಮುದಾಯಗಳ ವಂಚನೆಯಷ್ಟೆ. ಶೇ. 10 ಆರ್ಥಿಕ ಮೀಸಲಾತಿ ಸಾಂವಿಧಾನಿಕವೋ ಅಲ್ಲವೊ ಎಂಬ ವಿಷಯ ಇನ್ನು ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿಯೇ ಇರುವಾಗಲೇ ಸರಕಾರ ಅದನ್ನು ಕಾರ್ಯ ರೂಪಕ್ಕೆ ತಂದಾಗಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವ ಈ ಪರಿಸ್ಥಿತಿಯಲ್ಲಿ ಶೇ. 10ರಷ್ಟು ಉದ್ಯೋಗ ಎಲ್ಲಿಂದ ನೀಡುತ್ತಾರೆ ಅದು ಗೊತ್ತಿಲ್ಲ. ಮೇಲ್ಜಾತಿಯ ಬಡವರೆಲ್ಲ ಶ್ರೀಮಂತರಾದರೆ ಮೀಸಲಾತಿ ಕೊನೆಗೊಳ್ಳುತ್ತದೆಯೇ, ಕಾಲದ ಮಿತಿಯಿದೆಯೇ ಎಂಬುದು ಮಗದೊಂದು ಪ್ರಶ್ನೆ.

ಅರ್ಜಿದಾರರ ಪರ ವಕೀಲರಾದ ಮೋಹನ್ ಗೋಪಾಲ್‌ರವರು, 10 ನೇ ತಿದ್ದುಪಡಿಯು ಸಂವಿಧಾನದ ಮೇಲಿನ ವಂಚನೆಯಾಗಿದ್ದು, ಉಳ್ಳವರನ್ನು ಕಾಪಾಡುವ ಕಾನೂನೇ ಹೊರತು ಅಂಚಿನಲ್ಲಿರುವವರನ್ನು ರಕ್ಷಿಸುವುದಲ್ಲ ಎಂದಿದ್ದಾರೆ. ವಕೀಲರಾದ ರವಿವರ್ಮ ಕುಮಾರ್‌ರವರು ಸಹ ‘‘ಇದು ಜಾತಿ ಮತ್ತು ಧರ್ಮದ ಆಧಾರಿತ ತಾರತಮ್ಯದ ನಡೆ’’ ಎಂದಿದ್ದಾರೆ. ಮುಂದುವರಿದು ‘‘ದೇಶದಲ್ಲಿ ಶೇ. 5ರಷ್ಟಿರುವ ಮೇಲ್ಜಾತಿಗಳಿಗೆ ಶೇ. 10 ರಷ್ಟು ಆರ್ಥಿಕ ಆಧಾರಿತ ಮೀಸಲಾತಿ ನೀಡಿದ್ದೀರ, ಆದರೆ ಶೇ. 85ರಷ್ಟಿರುವ ಪ.ಜ./ಪ.ಪಂ./ಹಿಂದುಳಿದ ವರ್ಗಗಳಿಗೆ ಶೇ. 50ರ ಮೀಸಲಾತಿಯನ್ನು ಕಲ್ಪಿಸಿದ್ದೀರ ಏಕೆ?’’ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಹಿಂದುಳಿದ ವರ್ಗಗಳಿಗೆ ಕ್ರೀಮಿ ಲೇಯರ್ ಮೀಸಲಾತಿಯನ್ನು ನೀಡಲು ಕೇಂದ್ರ ರೂಪಿಸಿದ ಸಿನ್ಹೊ ಸಮಿತಿ ನಿಗದಿ ಪಡಿಸಿದ ಆರ್ಥಿಕ ಆದಾಯದ ಮಿತಿ ರೂ. 8 ಲಕ್ಷ (1993, 2006ರ ಸಮಿತಿಯ ವರದಿ). ಈಗ ಯಾವುದೇ ಸಮಿತಿಯ ಸಮೀಕ್ಷಾ ವರದಿ ಇಲ್ಲದೆ ಕೇವಲ ಆರ್ಥಿಕವಾಗಿ ಬಡತನವನ್ನು ನಿರ್ಮೂಲನೆ ಮಾಡಲು ಮೇಲ್ಜಾತಿಗೆ ನೀಡುತ್ತಿರುವ ಮೀಸಲಾತಿಗೂ ಆದಾಯದ ಮಿತಿ ರೂ. 8 ಲಕ್ಷ. ಸಾಮಾಜಿಕವಾಗಿ ಶೋಷಣೆಗೆ ಒಳಪಟ್ಟ ಸಮುದಾಯ ಮತ್ತು ಶೋಷಿಸುವ ಸಮುದಾಯಕ್ಕೂ ಒಂದೇ ನೀತಿ ಜಾರಿ ಮಾಡಿ ಜಾತೀಯತೆಯ ಯಥಾಸ್ಥಿತಿಯನ್ನು ಎತ್ತಿಹಿಡಿದಿರುವ ಈ ಮನುವ್ಯಾಧಿಗೆ ಏನನ್ನಬೇಕು?.

ಕೆಲವು ದಿನಗಳ ಹಿಂದೆ ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿಯ ಮಗಳು ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್ ಹೊಂದಿರುವುದು ವಿಧಾನ ಸಭೆಯಲ್ಲಿ ಚರ್ಚೆಗೆ ಬಂತು. ಆದರೆ ಶಿಕ್ಷೆ ವಿಧಿಸಿಲ್ಲ. ದಿನನಿತ್ಯ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಕೆಲಸ ಗಿಟ್ಟಿಸಿಕೊಳ್ಳುತ್ತಿರುವವರಿಗೆಲ್ಲಾ ಶಿಕ್ಷೆ ವಿಧಿಸಲಾಗಿದೆಯೇ? ಖಂಡಿತ ಇಲ್ಲ. 2021ರಲ್ಲಿ ಉತ್ತರಪ್ರದೇಶದ ಶಿಕ್ಷಣ ಮಂತ್ರಿಯ ಸಹೋದರನು ತನ್ನ ಆದಾಯ ಮಿತಿ 8 ಲಕ್ಷ ರೂ. ಎಂದು 2019ರ ಆದಾಯ ಪ್ರಮಾಣ ಪತ್ರವನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಕಪಿಲವಸ್ತುವಿನ ಸಿದ್ಧಾರ್ಥ್ ವಿಶ್ವವಿದ್ಯಾನಿಲಯದ ಸೈಕಾಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಪಡೆದದ್ದು ಆ ರಾಜ್ಯವೆಲ್ಲ ಸುದ್ದಿಯಾಯಿತು, ನಂತರ ಆ ವ್ಯಕ್ತಿ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟದ್ದು ಒಂದು ನಾಟಕವಾದರೆ, ಮೇಲ್ಜಾತಿಗಳೇ ಶೇ. 90ರಷ್ಟು ಸಿಬ್ಬಂದಿಯಾಗಿರುವ ದೇಶದ ಪ್ರತಿಷ್ಠಿತ 20 ಐಐಎಂಗಳಲ್ಲಿ ಯಾವುದೇ ಮೀಸಲಾತಿಯನ್ನು ತರಬಾರದೆಂದು ಅಲ್ಲಿನ ಸಿಬ್ಬಂದಿ ವರ್ಗ ಕೋರಿರುವುದು ಮತ್ತೊಂದು ಆಷಾಢಭೂತಿತನ.

ಸರಕಾರಿ ಶಾಲೆಗಳು ಉಳಿದಿರುವುದೇ ತಳ ಸಮುದಾಯಗಳ ಮಕ್ಕಳ ಮೇಲೆ ಎಂಬುವುದು ವಾಸ್ತವ ಸಂಗತಿ. ಕೆಲವು ದಿನಗಳ ಹಿಂದೆ ಅನುದಾನದ ಕೊರತೆಯೆಂದು ಅಯೋಧ್ಯೆಯ ಸರಕಾರಿ ಶಾಲೆಯು ಮಧ್ಯಾಹ್ನದ ಊಟಕ್ಕೆ ಅನ್ನದ ಜೊತೆ ಸಾರಿನ ಬದಲು ಉಪ್ಪನ್ನು ನೀಡಲಾಗಿತ್ತು. ಈ ಸಮಾಜ ಎಷ್ಟು ಕ್ರೂರಿ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನವಿಲ್ಲ. ಕೋಲಾರ ಜಿಲ್ಲೆಯ ಮಾಲೂರಿನ ಉಳ್ಳೇರಹಳ್ಳಿಯಲ್ಲಿ ಗ್ರಾಮದೇವತೆಯ ಮೆರವಣಿಗೆಯ ವೇಳೆ ಗುಜ್ಜು ಕೋಲು ಮುಟ್ಟಿದ ದಲಿತ ಬಾಲಕನ ಸಂಸಾರವನ್ನೇ ಬಹಿಷ್ಕರಿಸಿ, 60 ಸಾವಿರ ರೂ. ದಂಡ ವಿಧಿಸಲಾಗಿತ್ತು. ದಿನ ನಿತ್ಯ ಇಂತಹ ಸಾವಿರಾರು ತಾರತಮ್ಯಗಳಿಗೆ ಒಳಗಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳ ಸಬಲೀಕರಣಕ್ಕೆ ಮತ್ತು ಸಮಾನತೆಯ ಸ್ಥಾಪನೆಗಾಗಿ ಸಂವಿಧಾನತ್ಮಕವಾಗಿ ಕಲ್ಪಿಸಿರುವ ಪ್ರಾತಿನಿಧ್ಯವೇ ಮೀಸಲಾತಿ ಎಂಬ ಕನಿಷ್ಠ ಪರಿಜ್ಞಾನ ಕೇಂದ್ರ ಸರಕಾರಕ್ಕೆ ಇಲ್ಲವಾಗಿದೆ. ಅಂಬೇಡ್ಕರ್‌ರವರ ಹಿಂದೂ ಕೋಡ್ ಬಿಲ್‌ನ್ನು, ಮಂಡಲ್ ವರದಿಯ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿರೋಧಿಸಿದ ವರು ಶೇ. 10 ಮೀಸಲಾತಿಯನ್ನು ವಿರೋಧಿಸುತ್ತಿಲ್ಲ. 2016ರಲ್ಲಿ ಆರೆಸ್ಸೆಸ್‌ನ ಮೋಹನ್ ಭಾಗವತ್, 2017ರಲ್ಲಿ ಅದರ ಪ್ರಚಾರ ಸಮಿತಿಯ ಮುಖ್ಯಸ್ಥ ಮನಮೋಹನ್ ವೈದ್ಯ ಮೀಸಲಾತಿಯನ್ನು ಪರಿಶೀಲಿಸಬೇಕು, ಮೀಸಲಾತಿಗೆ ಒಂದು ಸಮಯವನ್ನು ನಿಗದಿ ಮಾಡಬೇಕೆಂಬ ಹೇಳಿಕೆಗಳನ್ನು ಬಹಿರಂಗವಾಗಿಯೇ ನೀಡಿದ್ದರು. ಸರಕಾರದಿಂದ ಕೈಗೊಳ್ಳುವ ದಲಿತರ ಸಬಲೀಕರಣದ ಯೋಜನೆಗಳನ್ನು ಹೀಯಾಳಿಸುವ ಈ ಸಂಘಪರಿವಾರಿಗರು ಕರ್ನಾಟಕದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿದಾಗ ಒಬ್ಬರೂ ಧ್ವನಿ ಎತ್ತಲಿಲ್ಲವೇಕೆ?. ಇವರಿಗೆ ಒಂದು ನಾಲಗೆ-ಒಂದು ಸಿದ್ಧಾಂತ ಇರಬೇಕಲ್ಲವೇ? ಮೇಲ್ಜಾತಿಗಳಲ್ಲಿ ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ತರುವುದು ತಪ್ಪಲ್ಲ, ಆದರೆ ಮೀಸಲಾತಿಯ ಆಶಯವನ್ನು ತಪ್ಪುದಾರಿಗೆ ಎಳೆಯುವುದು ತಪ್ಪು.

ಮಡಿ, ಮೈಲಿಗೆ ಮತ್ತು ಜಾತಿಯನ್ನೇ ಉಸಿರಾಡುವ ಶೇ. 5ರಷ್ಟಿರುವ ಜನಾಂಗದ ಆಶಯದಂತೆ ಶ್ರೇಣೀಕೃತ ಸಮಾಜದ ಸ್ಥಾಪನೆಗಾಗಿ ಪ್ರತೀ ಕ್ಷಣ ಮೀಸಲಾತಿ ವಿರೋಧಿ ಹೇಳಿಕೆಗಳನ್ನು ಪಠಿಸುತ್ತಿದ್ದ ಒಂದು ರಾಷ್ಟ್ರೀಯ ಪಕ್ಷ ಮತ್ತು ಅದರ ಅಂಗ ಸಂಸ್ಥೆಗಳು ಸಂವಿಧಾನಕ್ಕೆ ಕೈ ಹಾಕಿವೆ. ಮನುವಾದವನ್ನು ಸ್ಥಾಪಿಸಲು ಸಂವಿಧಾನದ ಆಶಯಗಳನ್ನು ಬಲಿ ಕೊಡಲು ತಾವು ಸಿದ್ಧ ಎಂಬ ಎಚ್ಚರಿಕೆಯನ್ನು ದೇಶದ ಶೇ. 85ರಷ್ಟಿರುವ ಬಹುಜನರಿಗೆ ನೀಡಲಾಗಿದೆ. ಯಾವ ಕುತಂತ್ರ ನೀತಿಯಿಂದಲೂ ಮೀಸಲಾತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲವಾದ್ದರಿಂದ, ಅದೇ ಮೀಸಲಾತಿ ಶಸ್ತ್ರ ಬಳಸಿ ಅದರ ಆಶಯವನ್ನು ವ್ಯವಸ್ಥಿತವಾಗಿ ಕೊಲ್ಲಲಾಯಿತು. ಮನುಷ್ಯರ ಮಧ್ಯೆ ಯಾವ ತಾರತಮ್ಯ ತೊಲಗಬೇಕೆಂದು ಮೀಸಲಾತಿಯನ್ನು ಸೃಷ್ಟಿಸಲಾಯಿತೋ ಅದೇ ಮೀಸಲಾತಿಯನ್ನು ಬಳಸಿ ತಾರತಮ್ಯವನ್ನು ಮರುಸ್ಥಾಪಿಸಲಾಗಿದೆ.

Writer - ಡಾ. ರಮೇಶ ವಿ. ಬೆಂಗಳೂರು

contributor

Editor - ಡಾ. ರಮೇಶ ವಿ. ಬೆಂಗಳೂರು

contributor

Similar News