ಕರೆನ್ಸಿ ನೋಟಿನಲ್ಲಿ ಶಿವಾಜಿ ಫೋಟೊ ಎಡಿಟ್‌ ಮಾಡಿ, ʼಯೇ ಪರ್ಫೆಕ್ಟ್ ಹೈʼ ಎಂದು ಹೇಳಿದ ಮಹಾರಾಷ್ಟ್ರ ಬಿಜೆಪಿ ಶಾಸಕ

Update: 2022-10-27 11:47 GMT

 ಹೊಸದಿಲ್ಲಿ: ಕರೆನ್ಸಿ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮಿ ದೇವಿಯ ಚಿತ್ರಗಳನ್ನು ಮುದ್ರಿಸಬೇಕು ಎಂದು  ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿರುವುದು ಸ್ವಾರಸ್ಯಕರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.

ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೀಶ್ ರಾಣೆ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ನೋಟುಗಳಲ್ಲಿ ಶಿವಾಜಿ ಚಿತ್ರ ಮುದ್ರಿಸಬೇಕೆಂಬ ಸಲಹೆ ನೀಡಿದ್ದಾರೆ. ಇನ್ನೂರು ರೂಪಾಯಿ ಮುಖಬೆಲೆಯ ನೋಟಿನಲ್ಲಿ ಶಿವಾಜಿ ಚಿತ್ರವನ್ನು  ಬಿಂಬಿಸಿ ಟ್ವೀಟ್ ಮಾಡಿದ ಅವರು ʼಯೇ ಪರ್ಫೆಕ್ಟ್ ಹೈʼ ಎಂದೂ ಬರೆದಿದ್ದಾರೆ.

ಇನ್ನೊಂದೆಡೆ ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ಕೇಜ್ರಿವಾಲ್ ಬೇಡಿಕೆಯನ್ನು ಟೀಕಿಸಿದ್ದಾರೆ. "ಹಿಂದಿಯಲ್ಲಿ ಹಾಡೊಂದಿದೆ... ಕ್ಯಾ ಹೋ ಗಯಾ ದೇಖ್ತೇ ದೇಖ್ತೇ," ಎಂದು ಅವರು ಹೇಳಿದ್ದಾರೆ. ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು "ಕಾಶ್ಮೀರಿ ಪಂಡಿತರಿಗೆ ದಿಲ್ಲಿಯಲ್ಲಿ ಉದ್ಯೋಗ ನಿರಾಕರಿಸುವ ಹಾಗೂ ಅವರನ್ನು ತಮಾಷೆ ಮಾಡುವ ಕೇಜ್ರಿವಾಲ್, ಈಗ ದಿಢೀರ್  ಎಂದು ಹಿಂದುಗಳ ಓಲೈಕೆಗೆ ನಿಂತಿದ್ದಾರೆ, ಇದು ಯು-ಟರ್ನ್‍ನ ಪರಾಕಾಷ್ಠೆ" ಎಂದು ಹೇಳಿದ್ದಾರೆ.

ಕೇಜ್ರಿವಾಲ್ ಅವರನ್ನು `ಚುನಾವಿ ಹಿಂದು' ಎಂದೂ ಬಿಜೆಪಿ ಟೀಕಿಸಿದೆ. ಇನ್ನೊಂದೆಡೆ ಆಪ್ ಸಂಸದ ಸಂಜಯ್ ಸಿಂಗ್ ಅವರು ಕೇಜ್ರಿವಾಲ್ ಆಗ್ರಹವನ್ನು ಸಮರ್ಥಿಸಿದ್ದಾರೆ- "ಈ ಜನರು  ಗಣೇಶ, ಲಕ್ಷ್ಮಿ ಚಿತ್ರಗಳಿಗೆ ವಿರೋಧಿಸುತ್ತಿದ್ದಾರೆ, ಏಕೆಂದರೆ ನಮಗೆ ಗೊತ್ತು ಮೋದಿ ಸರ್ಕಾರ ಮುಂದೊಂದು ದಿನ ಸಾವರ್ಕರ್ ಫೋಟೋ ಹಾಕಲಿದೆ" ಎಂದು ಅವರು ಹೇಳಿದ್ದಾರೆ.

Similar News