‘4ಜಿ’ಯಿಂದ ‘5ಜಿ’ಗೆ ಜಿಗಿದ ಚುನಾವಣಾ ತಂತ್ರಗಾರಿಕೆ?
ನಮ್ಮ ದೇಶದಲ್ಲಿ ಈಗಾಗಲೇ ತಾಂಡವವಾಡುತ್ತಿರುವ ಬಡತನ, ಆಹಾರ ಸಮಸ್ಯೆ, ದುಡಿಯಲು ಉತ್ಸುಕರಾಗಿರುವ ಕೈಗಳಿಗೆ ನಿರುದ್ಯೋಗ ಸಮಸ್ಯೆ, ಮಹಿಳೆಯರ ಮೇಲೆ ಒಂದಲ್ಲಾ ಒಂದು ಕಡೆ ನಡೆಯುತ್ತಿರುವ ಅತ್ಯಾಚಾರ, ದಲಿತರ/ ಶೋಷಿತರ/ವಿದ್ಯಾರ್ಥಿಗಳ ಮೇಲಿನ ನಿರಂತರ ದೌರ್ಜನ್ಯ, ಅರೆಕಾಲಿಕ ನೌಕರರ ಉದ್ಯೋಗ ಖಾತರಿಯ ಗೊಂದಲ, ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರ ಆತ್ಮಹತ್ಯೆ, ಬೆಳೆ ಸಾಲವನ್ನು ಬ್ಯಾಂಕುಗಳಿಂದ ಪಡೆದು ಮರುಪಾವತಿ ಮಾಡಲಾಗದ ಅಸಹಾಯಕತೆ ಕಾಡುತ್ತಿದೆ.
ಅಲ್ಲದೆ ಪ್ರತೀ ವರ್ಷ ಅತಿಯಾದ ಮಳೆಯಿಂದ ಹಲವಾರು ಕುಟುಂಬಗಳು ಸೂರಿಲ್ಲದೆ ಮಳೆಯಲ್ಲಿ ಕೊಚ್ಚಿ ಹೋಗುತ್ತಿವೆ, ದೇಶದ ಆರ್ಥಿಕ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ, ತೈಲಗಳ ಬೆಲೆಯೇರಿಕೆ ಹೀಗೆ ಹೇಳುತ್ತಾ ಹೋದರೆ ದೇಶದಲ್ಲಿ ಬಗೆಹರಿಯಲಾರದ ಎಷ್ಟೋ ಸಮಸ್ಯೆಗಳು ದೇಶದ ಜನರನ್ನು ಕಾಡುತ್ತಿವೆ. ಇಡೀ ದೇಶವೇ ರೋಗಗ್ರಸ್ಥ ದೇಶವಾಗುತ್ತಿದೆಯೇನೋ ಎನ್ನುವಷ್ಟು ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ದೇಶಕ್ಕೆ ವೈಜ್ಞಾನಿಕತೆಯ, ತಾಂತ್ರಿಕತೆಯ ತರಾತುರಿಯಿದೆ ಎನ್ನುವುದು ಎಷ್ಟು ಸತ್ಯವೋ ಹಾಗೆಯೇ ಈ ದೇಶದಲ್ಲಿ ಕೊಳೆತು ನಾರುತ್ತಿರುವ ಅನಿಷ್ಟ ಸಮಸ್ಯೆಗಳನ್ನು ಬಗೆಹರಿಸುವುದು ಅಷ್ಟೇ ಬಹುಮುಖ್ಯವಾದ ಸತ್ಯ, ಮುಖ್ಯ ಆಯಾಮವಾಗಿದೆ. ಆದರೆ ಇಂತಹ ಕಠಿಣ ಸಂದರ್ಭದಲ್ಲಿ ದೇಶದ ಅತಿ ಶ್ರೀಮಂತರ ಕಂಪೆನಿಯೊಂದು ತನ್ನ 4 ಜಿ ಸೇವೆಯನ್ನು 5ಜಿಗೆ ಬದಲಾಯಿಸುವ ಅನಿವಾರ್ಯತೆ, ತರಾತುರಿ ಏನಿತ್ತು? ಎಂಬುದನ್ನು ನಾವೆೆಲ್ಲರೂ ಅರಿಯಬೇಕಾದ ಅನಿವಾರ್ಯತೆ ಇದೆ. ಇದು 2024ರ ಚುನಾವಣೆಯಲ್ಲಿ ಮತ್ತೆ ಜಯಭೇರಿಯನ್ನು ಸಾಧಿಸಲು ಹೊರಟಿರುವ ಪಕ್ಷವೊಂದರ ಬಹು ದೊಡ್ಡ ಅಜೆಂಡಾದ ಭಾಗವಾಗಿ ಭಾರತೀಯ ಪ್ರಜೆಗಳಿಂದಲೇ ಪರೋಕ್ಷವಾಗಿ ಚುನಾವಣೆಯ ಖರ್ಚನ್ನು ವಸೂಲಿ ಮಾಡುವ ಹುನ್ನಾರದಂತೆ ಕಾಣುತ್ತಿದೆ.
ಈ ದೇಶದಲ್ಲಿ ಮೊಬೈಲ್ ಬಳಸದೆ ಇರುವ ನಾಗರಿಕರೇ ಇಲ್ಲ. ಭಾರತದಲ್ಲಿ ಉಪಯೋಗಿಸುತ್ತಿರುವ ಟಾಯ್ಲೆಟ್‌ಗಳಿಗಿಂತ ಎರಡುಪಟ್ಟು ಮೊಬೈಲ್‌ಗಳು ಉಪಯೋಗವಾಗುತ್ತಿರುವುದು ಅಧ್ಯಯನದಿಂದ ತಿಳಿದ ವಿಚಾರವಾಗಿದೆ. ಈ ಉದ್ದೇಶವನ್ನಿಟ್ಟುಕೊಂಡೇ ಕೆಲವು ವರ್ಷಗಳ ಹಿಂದೆ ಅತಿ ಶ್ರೀಮಂತರ ಈ ಕಂಪೆನಿಯು ಸಿಮ್ ಕಾರ್ಡ್ ಅನ್ನು ಬಿಡುಗಡೆ ಮಾಡಿ ಉಚಿತವಾಗಿ ಹಂಚುವ ವ್ಯವಸ್ಥೆ ಮಾಡಿತು. ಆ ಸಿಮ್ ಕಾರ್ಡ್ ಕಾರ್ಯನಿರ್ವಹಿಸಬೇಕೆಂದರೆ ಸುಮಾರು 10 ಸಾವಿರ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ ಮೊಬೈಲ್ ತೆಗೆದುಕೊಳ್ಳುವ ಅನಿವಾರ್ಯತೆಯನ್ನು, ಸಂದಿಗ್ಧತೆಯನ್ನು ಆ ಸಮಯದಲ್ಲಿ ಸೃಷ್ಟಿಸಲಾಯಿತು. ಅಂತಹ ಅನಿವಾರ್ಯತೆಗೆ ಗಂಟುಬಿದ್ದ ಜನರು ಮನೆಯಲ್ಲಿದ್ದ ದನಕರುಗಳನ್ನು ಮಾರಿ ಮೊಬೈಲ್ ತೆಗೆದುಕೊಳ್ಳುವ ಪರಿಸ್ಥಿತಿ ಬಂದೊದಗಿತು. ಇದರ ಹಿಂದೆ ರಾಜಕೀಯ ಕೈವಾಡವಿದೆ ಎನ್ನುವುದು ನಾಗರಿಕ ಪ್ರಜೆಗಳಿಗೆ ತಿಳಿಯದಾಯಿತು. ಈ ಕಂಪೆನಿಯ ಮಾಲಕರು ಆಳುವ ಸರಕಾರಗಳ ಜೊತೆ ಕೈ ಜೋಡಿಸಿ ಚುನಾವಣೆಗೆ ಬೇಕಾದ ಖರ್ಚು ವೆಚ್ಚಗಳನ್ನು ಭರಿಸುವ ಮೌಖಿಕ ಒಪ್ಪಂದಗಳ ಪ್ರತಿಫಲವೇ, 4ಜಿಯ ಬಿಡುಗಡೆ ಎನ್ನಬಹುದು.
ಇಂದು ಇದೇ ತಂತ್ರಗಾರಿಕೆಯನ್ನು ಬಳಸುತ್ತಾ 4 ಜಿಗೆ ಬದಲು 5 ಜಿ ನೆಟ್‌ವರ್ಕ್‌ಗೆ ಬದಲಾಯಿಸಿ ಚಲಾವಣೆ ಮಾಡುವಲ್ಲಿ ಕಂಪೆನಿ ಮುಂದಾಗಿದೆ. ಆದರೆ ಅದಕ್ಕೆ ತಕ್ಕಂತೆ ಮೊಬೈಲ್ ಮಾರಾಟ ಮಾಡಲು, ರೀಚಾರ್ಜ್ ದರವನ್ನು ಹೆಚ್ಚಿಸಲು ಕೇಂದ್ರ ಸರಕಾರದ ಕಸರತ್ತುಗಳು ಜೊತೆ ಜೊತೆಯಲ್ಲಿಯೇ ಪ್ರಾರಂಭಗೊಂಡಿರಬಹುದು. ಅದರ ಪರಿಣಾಮವೇ ಇಂದು ಕಾರ್ಯನಿರ್ವಹಿಸುತ್ತಿರುವ 4ಜಿಯನ್ನು ನಿಧಾನವಾಗಿ ಜನರಿಗೆ ಅರಿವಾಗದಂತೆ ವಿಫಲಗೊಳಿಸಲಾಗುತ್ತಿದೆಯೆಂಬ ಆರೋಪವಿದೆ. ಇದು ನಮ್ಮ ಸಾಮಾನ್ಯ ಜನರಿಗೆ ಅರ್ಥವಾಗಬೇಕಿದೆ. ಮುಂದೆ ಲೋಕಸಭಾ ಚುನಾವಣೆ ಎದುರಿಸಲು ಬೇಕಾಗಿರುವ ಖರ್ಚುವೆಚ್ಚಗಳ ಒಪ್ಪಂದವನ್ನು ಈ ಕಂಪೆನಿಯೊಡನೆ ಮಾಡಿಕೊಳ್ಳಲಾಗಿದೆಯೇ ಎನ್ನುವ ಅನುಮಾನಗಳು ಎಲ್ಲರಲ್ಲೂ ಕಾಡತೊಡಗಿವೆ. ಚುನಾವಣೆಯ ಖರ್ಚು ವೆಚ್ಚವನ್ನು ಭರಿಸಬೇಕಾಗಿರುವುದರಿಂದ 4 ಜಿಯನ್ನು ವಿಫಲಗೊಳಿಸಿ 5ಜಿಯನ್ನು ತರುವ ಅನಿವಾರ್ಯತೆ ಈ ಕಂಪೆನಿಯ ಮಾಲಕನಿಗೆ ಬಂದೊದಗಿರಬಹುದು. ಇದಲ್ಲದೆ 5ಜಿ ಮೂಲಕ ತಮ್ಮ ಚುನಾವಣೆಯ ಡಿಜಿಟಲ್ ಪ್ರಚಾರವೂ ಇವರ ಕೂಟದ ಮತ್ತೊಂದು ಅಜೆಂಡವಾಗಿದೆ. ಇಂತಹ ತಂತ್ರಗಾರಿಕೆಗಳು ಎಷ್ಟು ಮುಂದುವರಿಯುತ್ತಿದೆಯೋ ಅಷ್ಟೇ ನಮ್ಮಲ್ಲಿ, ನಮ್ಮ ಸಮಾಜದೊಳಗೆ ಕುತಂತ್ರಗಳು ನಡೆಯುತ್ತಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಸಾಮಾನ್ಯ ಜನರಿಗೆ ಅರ್ಥವಾಗಬೇಕಿದೆ.