ಮೊಬೈಲ್ ರಿಪೇರಿಗೆ ಕೊಡುವಾಗ ಎಚ್ಚರವಿರಲಿ

Update: 2022-10-28 10:02 GMT

ಕೇಂದ್ರ ಸರಕಾರದ 'ಮಾಹಿತಿ ತಂತ್ರಜ್ಞಾನ' ನಿಯಮಾವಳಿಗಳ ಪ್ರಕಾರ ಪ್ರಜೆಗಳು ರಿಪೇರಿಗೋಸ್ಕರ ಮೊಬೈಲನ್ನು ಅಂಗಡಿಗೆ ಕೊಡುವಾಗ ತಮ್ಮ ಸಿಮ್ ಹಾಗೂ ಬ್ಯಾಟರಿಯನ್ನು ತಮ್ಮಲ್ಲಿ ಇಟ್ಟುಕೊಂಡು ಕೇವಲ ಮೊಬೈಲ್ ಅನ್ನು ಮಾತ್ರ ಅವರಿಗೆ ನೀಡಬೇಕು. ಸಿಮ್ ಹಾಗೂ ಬ್ಯಾಟರಿಯನ್ನು ರಿಪೇರಿ ಮಾಡುವವರಿಗೆ ನೀಡಿದ್ದಲ್ಲಿ, ಅವರು ನಿಮ್ಮ ತೀರಾ ಖಾಸಗಿ ವಿಷಯಗಳನ್ನು ಕೂಡ ತಿಳಿದುಕೊಳ್ಳಬಹುದು; ಬ್ಲ್ಲಾಕ್‌ಮೇಲ್ ಮಾಡಬಹುದು ಅಥವಾ ಅದೇ ಮೊಬೈಲ್‌ನಿಂದ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಅಥವಾ ಶ್ರೀಮಂತರಿಗೆ ಬೆದರಿಕೆಯ ಫೋನ್ ಕರೆ ಅಥವಾ ಮೆಸೇಜುಗಳನ್ನು ಕಳುಹಿಸಬಹುದು.

ಅಕ್ಟೋಬರ್ 7ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‌ನ ಮೈಕ್ ಸರಿಯಾಗಿ ಕೆಲಸ ಮಾಡದಿದ್ದುದರಿಂದ ರಿಪೇರಿಗೆ ಕೊಟ್ಟರು.
ಆಗ ರಿಪೇರಿ ಅಂಗಡಿಯವನು ನಿಮ್ಮ ಸಿಮ್ ಕಾರ್ಡ್ ಅನ್ನು ಅದರಲ್ಲಿ ಇಟ್ಟುಕೊಡಿ ಎಂದ. ಇದು ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳ ವಿರುದ್ಧವಾಗಿದೆ. ಇದನ್ನು ತಿಳಿಯದ ಆ ಗ್ರಾಹಕ ಸಿಮ್‌ಅನ್ನು ಮೊಬೈಲ್‌ನಲ್ಲಿಯೇ ಇಟ್ಟು ಮೊಬೈಲ್ ಮೈಕ್ ರಿಪೇರಿ ಮಾಡಲು ಕೊಟ್ಟನು.
ರಿಪೇರಿ ಮಾಡಿದ ಮೊಬೈಲ್ ಅನ್ನು ತರಲು ಮರುದಿನ ಸಂಜೆ ಅವನು ಅಂಗಡಿಗೆ ಹೋದಾಗ ಅಂಗಡಿಗೆ ಬೀಗ ಹಾಕಿತ್ತು. ಅಲ್ಲದೆ ಅಕ್ಟೋಬರ್ 9 ಹಾಗೂ 10ರಂದು ಕೂಡ ಅಂಗಡಿ ತೆರೆದಿರಲಿಲ್ಲ. ಗ್ರಾಹಕ ತಾನು ರಿಪೇರಿಗೆಂದು ನೀಡಿದ ಅಂಗಡಿಯವನ ಮೊಬೈಲ್ ಸಂಖ್ಯೆ ಹಾಗೂ ಹೆಸರನ್ನೂ ಪಡೆದಿರಲಿಲ್ಲ. ಆದುದರಿಂದ ತನಗೆ, ತನ್ನ ವ್ಯವಹಾರಗಳಿಗೆ ತೀರ ಅಗತ್ಯವಾದ ಮೊಬೈಲನ್ನು ಉಪಯೋಗಿಸಲು ಅವನಿಗೆ ಸಾಧ್ಯವಾಗಲೇ ಇಲ್ಲ.
ಜುಜುಬಿ ಮೊಬೈಲ್ ರಿಪೇರಿಯ ಸಣ್ಣ ಅಂಗಡಿ ಅಕ್ಟೋಬರ್ 8, 9 ಹಾಗೂ 10 ಹೀಗೆ ಮೂರು ದಿನ ನಿರಂತರವಾಗಿ ಬಂದ್ ಇದ್ದರೂ ಗ್ರಾಹಕನಿಗೆ ಸಂಶಯ ಬರಲಿಲ್ಲ.
ಅಕ್ಟೋಬರ್ 11ನೇ ತಾರೀಕು ಮೊಬೈಲ್ ರಿಪೇರಿ ಅಂಗಡಿಗೆ ಹೋದಾಗ ಅಲ್ಲಿ ತಾನು ಮೊಬೈಲ್ ರಿಪೇರಿಗೆ ನೀಡಿದ ವ್ಯಕ್ತಿಯು ಇರಲಿಲ್ಲ. ಅದರ ಬದಲಿಗೆ ಬೇರೆಯೇ ವ್ಯಕ್ತಿಯೊಬ್ಬ ಅಂಗಡಿಯನ್ನು ನಡೆಸುತ್ತಿದ್ದ. ಅವನಲ್ಲಿ ತಾನು ರಿಪೇರಿಗೆಂದು ಕೊಟ್ಟ ಮೊಬೈಲ್ ಹಾಗೂ ಸಿಮ್ ಬಗ್ಗೆ ಕೇಳಿದಾಗ ಅಂಗಡಿಯವನು ಆತನ ಪ್ರಶ್ನೆಯನ್ನು ನಿರ್ಲಕ್ಷಿಸುತ್ತಲೇ ಹೋದ.
ಸಂಶಯಗೊಂಡ ಗ್ರಾಹಕ ಕೂಡಲೇ ತನ್ನ ಮಿತ್ರನ ಇಂಟರ್‌ನೆಟ್ ಅನ್ನು ಉಪಯೋಗಿಸಿ ತನ್ನ ಬ್ಯಾಂಕ್ ವ್ಯವಹಾರಗಳನ್ನು ಪರೀಕ್ಷಿಸಿದಾಗ ಅದರಿಂದ 2.20 ಲಕ್ಷದ ನಿರಖು ಠೇವಣಿಯನ್ನು ಕತ್ತರಿಸಿ ಅದನ್ನು ಬೇರೆ ಬೇರೆ ಉಳಿತಾಯ ಅಕೌಂಟ್‌ಗಳಿಗೆ ವರ್ಗಾಯಿಸಿದ್ದು ಕಂಡು ಹೌಹಾರಿದ.
ಆದುದರಿಂದ ಯಾವಾಗಲೂ ಮೊಬೈಲನ್ನು ರಿಪೇರಿಗೆಂದು ಅಂಗಡಿಯವರಿಗೆ ನೀಡಿದಾಗ ಅದರ ಒಳಗೆ ಇರುವ ಸಿಮ್ ಹಾಗೂ ಬ್ಯಾಟರಿಯನ್ನು ತಮ್ಮಲ್ಲಿಯೇ ಇಟ್ಟುಕೊಂಡು, ಖಾಲಿ ಮೊಬೈಲ್ ಅನ್ನು ರಿಪೇರಿ ಮಾಡುವ ವ್ಯಕ್ತಿಗೆ ಕೊಡಿ. ಹೀಗೆ ಮಾಡುವುದರಿಂದ ನೀವು ಮೋಸ ಹೋಗುವುದರಿಂದ ತಪ್ಪಿಸಬಹುದು.

Similar News