ಬಿಜೆಪಿ ನಾಯಕಿಯರ ವಿರುದ್ಧ ಡಿಎಂಕೆ ಪದಾಧಿಕಾರಿಯ ಅವಮಾನಕಾರಿ ಹೇಳಿಕೆಗೆ ಕ್ಷಮೆ ಯಾಚಿಸಿದ ಕನಿಮೋಳಿ

Update: 2022-10-28 15:40 GMT

ಚೆನ್ನೈ,ಅ.28: ಬಿಜೆಪಿ ನಾಯಕಿಯರ ವಿರುದ್ಧ ತನ್ನ ಪಕ್ಷದ ಪದಾಧಿಕಾರಿಯ ಅವಮಾನಕಾರಿ ಟೀಕೆಗಳಿಗಾಗಿ ಡಿಎಂಕೆ(DMK) ನಾಯಕಿ ಕನಿಮೋಳಿ (Kanimozhi)ಅವರು ಕ್ಷಮೆ ಯಾಚಿಸಿದ್ದಾರೆ.

ಕನಿಮೋಳಿ ಬಿಜೆಪಿ ನಾಯಕಿ ಖುಷ್ಬು ಸುಂದರ್(Khushbu Sunder) ಅವರ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಿದ್ದರು. ಇದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin)ಅವರ ಆಡಳಿತದಡಿ ‘ನೂತನ ದ್ರಾವಿಡ ಮಾದರಿ’ ('New Dravidian model')ಆಗಿದೆಯೇ ಎಂದು ಖುಷ್ಬು ಪ್ರಶ್ನಿಸಿದ್ದರು.

ಡಿಎಂಕೆ ಪದಾಧಿಕಾರಿ ಸೈದಾಯಿ ಸಾದಿಕ್ (Saidai Sadiq)ಅವರು ಖುಷ್ಬು ಹಾಗೂ ಗಾಯತ್ರಿ ರಘುರಾಮನ್,ನಮಿತಾ ಮತ್ತು ಗೌತಮಿಯವರಂತಹ ನಟ-ಪರಿವರ್ತಿತ-ಬಿಜೆಪಿ ರಾಜಕಾರಣಿಗಳನ್ನು ‘ಐಟಮ್‌ಗಳು ’('items)ಎಂದು ಕರೆದಿದ್ದರು. ಖುಷ್ಬು ಡಿಎಂಕೆ ಸದಸ್ಯೆಯಾಗಿದ್ದ ಸಮಯದ ಕುರಿತು ಮಾತನಾಡುವಾಗ ಅವರ ಕುರಿತು ಸಾದಿಕ್ ಅಸಭ್ಯ ಹೇಳಿಕೆಗಳನ್ನೂ ನೀಡಿದ್ದರು.

ಪುರುಷರು ಮಹಿಳೆಯರನ್ನು ನಿಂದಿಸುವಾಗ ಅದು ಅವರ ಸಂಸ್ಕೃತಿಯನ್ನು ಮತ್ತು ಅವರು ಬೆಳೆದಿರುವ ವಿಷಪೂರಿತ ವಾತಾವರಣವನ್ನು ತೋರಿಸುತ್ತದೆ ಎಂದು ಗುರುವಾರ ಟೀಕೆಗೆ ಪ್ರತಿಕ್ರಿಯಿಸಿದ್ದ ಖುಷ್ಬು,ಇಂತಹ ಪುರುಷರು ಮಹಿಳೆಯ ಗರ್ಭಕೋಶವನ್ನು ಅವಮಾನಿಸುತ್ತಾರೆ. ಇಂತಹವರು ತಮ್ಮನ್ನು ಕಲೈಜ್ಞರ್ (ಕರುಣಾನಿಧಿ) ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಾರೆ ಎಂದು ಕಿಡಿಕಾರಿದ್ದರು.

ಓರ್ವ ಮಹಿಳೆಯಾಗಿ ಮತ್ತು ಮನುಷ್ಯಳಾಗಿ ತಾನು ಖಷ್ಬು ಸುಂದರ ಅವರ ಕ್ಷಮೆಯನ್ನು ಕೋರುತ್ತೇನೆ ಎಂದು ಹೇಳಿರುವ ಡಿಎಂಕೆಯ ಮಹಿಳಾ ಘಟಕದ ಕಾರ್ಯದರ್ಶಿಯೂ ಆಗಿರುವ ಕನಿಮೋಳಿ, ಸ್ಟಾಲಿನ್ ಮತ್ತು ತನ್ನ ಪಕ್ಷ ಇಂತಹ ನಿಂದನೆಗಳನ್ನು ಕ್ಷಮಿಸುವುದಿಲ್ಲವಾದ್ದರಿಂದ ಬಹಿರಂಗವಾಗಿ ಕ್ಷಮೆ ಯಾಚಿಸಲು ತನಗೆ ಸಾಧ್ಯವಾಗಿದೆ ಎಂದಿದ್ದಾರೆ.

ಇಂತಹ ಕೃತ್ಯವನ್ನು ಯಾರೇ ಮಾಡಿರಲಿ,ಅದನ್ನೆಂದಿಗೂ ಸಹಿಸಲು ಸಾಧ್ಯವಿಲ್ಲ ಎಂದೂ ಕನಿಮೋಳಿ ಟ್ವೀಟಿಸಿದ್ದಾರೆ.

Similar News