ಧರ್ಮ ರಕ್ಷಕರಿಗೆ ಇವೆಲ್ಲವೂ ಕಾಣುವುದಿಲ್ಲವೇ?
ಅಳಿಸಿ ಹೋಗುತ್ತಿರುವ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು, ತನ್ನ ಪರಿಶ್ರಮ ಮತ್ತು ಪ್ರತಿಭೆಯಿಂದಲೇ ಬೆಳೆಯುತ್ತಿರುವ ಯುವ ನಟನೊಬ್ಬ ಒಂದು ಸಿನೆಮಾವನ್ನು ನಿರ್ಮಾಣ ಮಾಡಿ, ತಾನೇ ನಟಿಸಿ ಯಶಸ್ಸು ಗಳಿಸುತ್ತಿರುವುದನ್ನು ನೋಡಿ ಸಹಿಸದ ಕೆಲವು ಮನಸ್ಸುಗಳು ಕುಂಟು ನೆಪ ಹೇಳಿ ಆ ಸಿನೆಮಾ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ..? ಅದೂ ಸ್ವತಃ ನಿರ್ಮಾಪಕನಾದ ನಾಯಕನಟನೇ ಪತ್ರಿಕಾಗೋಷ್ಠಿ ಮಾಡಿ ಸ್ಪಷ್ಟನೆ ಕೊಟ್ಟ ಮೇಲೂ..?
ಕೆಲವು ಪೂಜಾರಿಗಳು, ಮಠಾಧೀಶರು, ದೈವ ಮಾನವರು, ದೇಶ ಬಿಟ್ಟು ಕೈಲಾಸದಲ್ಲಿ ನೆಲೆಸಿರುವವರು ಇತ್ತೀಚೆಗೆ ಹೆಚ್ಚು ಕುಖ್ಯಾತರಾದದ್ದು ಯಾವ ಕಾರಣಕ್ಕೆ..? ಇವರೆಲ್ಲ ಯಾವ ಧರ್ಮಕ್ಕೆ ಸೇರಿದವರು..? ಇವರ ವಿರುದ್ಧ ನಡೆಯಬೇಕಿದ್ದ ಉಗ್ರವಾದ ಹೋರಾಟ ಪ್ರತಿಭಟನೆಗಳು ಕಳ್ಳಬೆಕ್ಕಿನಂತಾಗಿರುವುದು ಯಾವ ಕಾರಣಕ್ಕೆ..?
ಸಿನೆಮಾದಲ್ಲಿ ನಟನೊಬ್ಬ ದೇವರಾದ ಗಣೇಶನನ್ನು ಬಾವಿಗೆ ನೂಕಿದಾಗ, ಪೂಜಾರಿಯ ಗಂಟಲಿಗೆ ಬ್ರಾಂಡಿ ಹೊಯ್ದಾಗ, ತಾನೇ ದೇವರೆಂದು ಪೂಜೆ ಮಾಡಿಸಿಕೊಂಡಾಗ ಧರ್ಮಗಳ ಬಗ್ಗೆ ಮಾತಾಡುವವರ ಭಾವನೆಗೆ ಧಕ್ಕೆಯಾಗಲಿಲ್ಲವೇ..?
ಸಿನೆಮಾವೊಂದರಲ್ಲಿ ಯಕ್ಷಗಾನ ವೇಷ ಹಾಕಿಕೊಂಡು ಗರ್ಭಿಣಿಯರ ಸರಣಿ ಕೊಲೆ ಮಾಡಿದಾಗ ಜನಪದ ಕಲೆಗೆ ಅವಮಾನ ಎನಿಸಲಿಲ್ಲವೇ..?
ನಿಜವಾದ ವೀರಗಾಸೆಯವರಲ್ಲದ, ತಮ್ಮ ಕಾಲುಗಳಿಗೆ ಬೂಟು ಹಾಕಿಕೊಂಡ, ವೀರಗಾಸೆ ವೇಷ ತೊಟ್ಟ ಕೇಡಿಗಳು ನಾಯಕನಟನನ್ನು ಸಾಯಿಸಲು ಬಂದಾಗ ಅವರನ್ನು ಹೊಡೆದು ತನ್ನನ್ನು ತಾನು ರಕ್ಷಿಸಿಕೊಂಡರೆ ಅದು ಧರ್ಮ ಸಂಸ್ಕೃತಿಗೆ ಅಪಚಾರವೇ..? ಇತ್ತೀಚಿನ ಕಾಂತಾರ ಸಿನೆಮಾದಲ್ಲಿ ದೈವದ ಆವೇಶವಾಗಿರುವ ವ್ಯಕ್ತಿಯನ್ನು ‘ವಿಲನ್’ ಗಳು ಹೊಡೆಯುತ್ತಾರಲ್ಲ ಅದು ಧರ್ಮಕ್ಕೆ ಧಕ್ಕೆ ತರುವುದಿಲ್ಲವೇ...?
ಇತ್ತೀಚೆಗೆ ದಲಿತ ಬಾಲಕನೊಬ್ಬ ದೇವರ ಕೋಲನ್ನು ಮುಟ್ಟಿದ ಎಂದು ದಂಡ ವಿಧಿಸಿ ಬಹಿಷ್ಕಾರದ ಮಾತನ್ನಾಡಿದ್ದರಲ್ಲ... ಈ ಬಾಲಕ ಮತ್ತು ಅವನ ತಾಯಿಗೆ ‘..ನಾವೆಲ್ಲ ಒಂದು’ ಎಂದು ಮೆರೆಯುವ, ಅಬ್ಬರಿಸುವ ಒಂದು ಸಂಘಟನೆಯೂ ಇವರ ನೆರವಿಗೆ ಬರಲಿಲ್ಲ. ಕಾರಣವೇನು..? ಇವರನ್ನು ಕಾಪಾಡಿದ್ದು, ಬದುಕಲು ಅವಕಾಶ ನೀಡಿದ್ದು ಧರ್ಮವಲ್ಲ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಮತ್ತು ಈ ನೆಲದ ಕಾನೂನು..! ದಲಿತ ಹೆಣ್ಣು ಮಕ್ಕಳ ರೇಪ್ ಆ್ಯಂಡ್ ಮರ್ಡರ್ ಆದಾಗ, ಅಮಾನುಷ ಹಲ್ಲೆಗಳಾದಾಗ ಧರ್ಮರಕ್ಷಕರಾಗಲಿ, ಮಾಧ್ಯಮಗಳಾಗಲಿ ಹೆಚ್ಚು ಉಸಿರನ್ನೇ ಬಿಡುವುದಿಲ್ಲವೇಕೆ..? ಬೇರೆ ಜಾತಿ, ವರ್ಗದ ಜನರ ಮೇಲೆ ಅತ್ಯಾಚಾರ, ಹಲ್ಲೆಗಳಾದರೆ ‘ಬ್ರೇಕಿಂಗ್ ನ್ಯೂಸ್’ ಗಳಾಗಿ ಮೂರು ಮೂರು ದಿನಗಳ ಪ್ಯಾನೆಲ್ ಚರ್ಚೆ ನಡೆಸುವ ಮಾಧ್ಯಮಗಳಿಗೇಕೆ ಕುರುಡುಗಣ್ಣು ದಲಿತರ ಮೇಲೆ..? ಮಾಧ್ಯಮಗಳಿಗೂ ಮೇಲ್ವರ್ಗದವರಿಗೂ ಇರುವ ನಂಟಾದರೂ ಏನು..? ದಲಿತರು ಈ ದೇಶದ ಮೂಲನಿವಾಸಿಗಳು ಅನ್ನೋ ಹೊಟ್ಟೆ ಕಿಚ್ಚೇ.? ಒಬ್ಬರಿಗೆ ಅನ್ಯಾಯ ಮಾಡಿ, ಒಬ್ಬರನ್ನು ಕೊಲೆ ಮಾಡಿ ಧರ್ಮವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಏನಾದರೂ ಇದೆಯಾ..? ಅನ್ನೋ ಪ್ರಶ್ನೆ ಕೇಳಿದರೆ ಬಹುತೇಕ ಉತ್ತರ ಇಲ್ಲ..! ಅಂತಲೇ ಬರುತ್ತದೆ.
ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್, ಪಾರಸಿ, ಸಿಖ್ ಮುಂತಾದ ಯಾವ ಧರ್ಮವಾದರೇನು..? ನಾಟಕೀಯತೆಗಳಿಂದ ದೂರ ಉಳಿದು, ಜಾತಿ-ಲಿಂಗ-ಉಳ್ಳವರು-ಬಡವರು ಎಂದು ಯಾವುದೇ ತಾರತಮ್ಯ ಮಾಡದೆ, ಸಮಾನವಾಗಿ ಬದುಕುವ ಹಕ್ಕನ್ನು ಎಲ್ಲರಿಗೂ ನೀಡಿ, ಎಲ್ಲರೂ ತನ್ನವರೇ ಎಂದು ಅಪ್ಪಿ, ಒಪ್ಪಿಕೊಳ್ಳುವ ಧರ್ಮವೇ ನಿಜವಾದ ಧರ್ಮ ಮತ್ತು ಅದುವೇ ಮಾನವ ಧರ್ಮ.