ಅಪಘಾತಗಳಿಗೆ ಕಾರಣ
ಮಾನ್ಯರೇ,
ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯದ ಹೆದ್ದಾರಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮೇಲಿಂದ ಮೇಲೆ ಅಪಘಾತಗಳಾಗಿ ಸಾವುಗಳು ಸಂಭವಿಸುತ್ತಲೇ ಇವೆ. ಹೆದ್ದಾರಿಗಳನ್ನು ನಿರ್ಮಾಣ ಮಾಡುವವರು ಸ್ಥಳೀಯ ಜನರ ಅನುಕೂಲಕ್ಕಾಗಿ ನಿರ್ಮಿಸುವ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸುವುದೇ ಇಲ್ಲ. ಇದರಿಂದಾಗಿ ಅನಿವಾರ್ಯವಾಗಿ ಹೆದ್ದಾರಿಗಳ ಮೇಲೆ ಸ್ಥಳೀಯ ನಾಗರಿಕರು ತಮ್ಮ ವಾಹನಗಳನ್ನು ಚಲಾಯಿಸುತ್ತಾರೆ. ಇದರೊಂದಿಗೆ ಹೆದ್ದಾರಿಗಳಲ್ಲಿ ತಿರುವುಗಳು ಇರುವ ಬಗ್ಗೆ ಸೂಕ್ತವಾದಂತಹ ಫಲಕಗಳನ್ನು ಅಳವಡಿಸಿರುವುದಿಲ್ಲ. ಹಳ್ಳಿಗಳಿಗೆ ಸಂಪರ್ಕಿಸುವ ಇಳಿಯುವ ಮಾರ್ಗವನ್ನು ಸೂಚಿಸುವ ಫಲಕಗಳು ಸಣ್ಣದಾಗಿರುತ್ತದೆ. ಇದರ ಬದಲಿಗೆ ದೊಡ್ಡ ಪ್ರಮಾಣದಲ್ಲಿ ಆ ಫಲಕಗಳನ್ನು ಅಳವಡಿಸಿ ಕನಿಷ್ಠ ಪಕ್ಷ ಐದು ಕಿ.ಮೀ.ಗಳ ದೂರದಲ್ಲಿಯೇ ನಿರ್ಗಮಿಸಬೇಕಾಗಿರುವ ಮಾರ್ಗವನ್ನು ಸೂಚಿಸುವ ಫಲಕವನ್ನು ಅಳವಡಿಸಿದರೆ ಇದ್ದಕ್ಕಿದ್ದ ಹಾಗೆ ವಾಹನಗಳನ್ನು ಇಳಿಸುವ ಸಂದರ್ಭದಲ್ಲಿ ವೇಗವನ್ನು ನಿಯಂತ್ರಿಸಲಾಗದೆ ಆಗುವ ಅಪಘಾತಗಳನ್ನು ತಪ್ಪಿಸಬಹುದು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳಾದಾಗ ಆ್ಯಂಬುಲೆನ್ಸ್‌ಗಳು ಬರಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಕನಿಷ್ಠ ಪಕ್ಷ ಐವತ್ತು ಕಿ. ಮೀ. ಅಂತರದಲ್ಲಿ ಆ್ಯಂಬುಲೆನ್ಸ್ ಮತ್ತು ತುರ್ತು ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದರೆ ಅಪಘಾತದ ಸಂದರ್ಭದಲ್ಲಿ ಸೂಕ್ತವಾದಂತಹ ಪ್ರಥಮ ಚಿಕಿತ್ಸೆ ದೊರೆಯದೆ ಸಾವುಗಳಾಗುವುದನ್ನು ನಿವಾರಿಸಬಹುದು. ಬೆಳಕಿನ ವ್ಯವಸ್ಥೆ ಮತ್ತು ವೇಗ ನಿಯಂತ್ರಣದ ಸಲಕರಣೆಗಳ ಅಳವಡಿಕೆ ಸಮರ್ಪಕವಾಗಿರಬೇಕಾಗುತ್ತದೆ. ವಾಹನ ಸವಾರರು ಸಹ ವಿಶೇಷವಾಗಿ ರಾತ್ರಿಯ ವೇಳೆಯಲ್ಲಿ ಸಂಚರಿಸುವ ತಮ್ಮ ವಾಹನಗಳಿಗೆ ಇರಬೇಕಾದಂತಹ ಅಗತ್ಯವಾದ ದೀಪ ಮತ್ತು ವಿವಿಧ ಚಿಹ್ನೆಗಳನ್ನು ತೋರಿಸುವ ಸ್ಟಿಕ್ಕರ್‌ಗಳನ್ನು ಸಹ ಅಳವಡಿಸಿಕೊಳ್ಳುವುದು ಒಳ್ಳೆಯದು.