ಪೊಲೀಸರು ಹೀಗೇಕೆ?
ಮಾನ್ಯರೇ,
ಇತ್ತೀಚಿನ ದಿನಗಳಲ್ಲಿ ರಕ್ಷಣೆ ನೀಡುವ ಪೊಲೀಸರು ಆರೋಪಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿರುವುದು ಮಿತಿ ಮೀರುತ್ತಿದೆ. ಕಳೆದ ವರ್ಷ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಸೈ ಒಬ್ಬರು ದಲಿತ ಯುವಕನೊಬ್ಬನಿಗೆ ಮನಬಂದತೆ ಥಳಿಸಿ ಮೂತ್ರ ನೆಕ್ಕಿಸಿ ದೌರ್ಜನ್ಯ ಎಸಗಿದ್ದ ಪ್ರಕರಣವು ಇಡೀ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಲ್ಲದೆ ಪೊಲೀಸ್ ಇಲಾಖೆಗೆ ದೊಡ್ಡ ಕಳಂಕ ತಂದಿತ್ತು. ಇದರಿಂದ ದಕ್ಷ ಪೊಲೀಸ್ ಅಧಿಕಾರಿಗಳು ಕೂಡಾ ಮುಜುಗರಕ್ಕೀಡಾಗುವಂತಾಯಿತು. ಈಗ ಚಿತ್ರದುರ್ಗ ಚಳ್ಳೆಕೆರೆಯ ಓರ್ವ ಪೊಲೀಸ್ ಅಧಿಕಾರಿಯು ಯುವತಿಯೊಬ್ಬಳಿಗೆ ನಿವೇಶನ ಕೊಡಿಸುವ ನೆಪದಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಆರೋಪಿ ಸ್ಥಾನದಲ್ಲಿ ನಿಂತಿದ್ದು, ಇಂತಹ ನಡೆ ಕಾನೂನು ಪಾಲಕರಿಗೆ ಸರಿಯಲ್ಲ. ಇಂತಹ ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಿಸಬೇಕಿದೆ. ಇಲ್ಲದಿದ್ದರೆ ರಾಜ್ಯದಲ್ಲಿ ಪೊಲೀಸರ ದೌರ್ಜನ್ಯ ಪ್ರಕರಣಗಳು ನಿರಂತರವಾಗುತ್ತದೆ. ದೇಶದ ಕಾನೂನು ಎಲ್ಲರಿಗೂ ಒಂದೇ. ಯಾರು ತಪ್ಪು ಮಾಡಿದರೂ ಅವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಹಿರಿಯ ಅಧಿಕಾರಿಗಳು ಇಂತಹವರನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಸರಕಾರ ಕೂಡಾ ಪೊಲೀಸರಿಂದ ನಡೆಯುವ ದೌರ್ಜನ್ಯ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ರೂಪಿಸಬೇಕು.