ಉತ್ತರ ಪ್ರದೇಶ: ಮತಾಂತರಕ್ಕೆ ಒತ್ತಾಯ ಆರೋಪ: 9 ಜನರ ವಿರುದ್ಧ ಪ್ರಕರಣ ದಾಖಲು

Update: 2022-10-29 09:50 GMT

ಲಕ್ನೊ: ಉತ್ತರ ಪ್ರದೇಶದ ಮೀರತ್‌ನಲ್ಲಿ 400 ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಆರೋಪದ ಮೇಲೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತರು ಹಿರಿಯ ಪೊಲೀಸ್ ಅಧೀಕ್ಷಕರನ್ನು (ಎಸ್‌ಎಸ್‌ಪಿ) ಸಂಪರ್ಕಿಸಿದರು ಹಾಗೂ  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಆಮಿಷ ಒಡ್ಡಲಾಗಿದೆ ಎಂದು ದೂರಿದರು. ಮಂಗಟ್ ಪುರಂನ ಮಲಿನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಹಿಂದೂ ದೇವರು ಹಾಗೂ  ದೇವತೆಗಳ ವಿಗ್ರಹಗಳನ್ನು ತೆಗೆದುಹಾಕುವಂತೆ ಒತ್ತಾಯಿಸಲಾಯಿತು ಎಂದು ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಎಫ್‌ಐಆರ್‌ನ ಪ್ರಕಾರ, ಅಕ್ರಮವಾಗಿ ಇತರ ಧರ್ಮಗಳಿಗೆ ಮತಾಂತರಗೊಳ್ಳಲು ಜನರನ್ನು ಒತ್ತಾಯಿಸಿದ ಆರೋಪಿಗಳು ಕೋವಿಡ್ -19 ಪ್ರೇರಿತ ಸಾಂಕ್ರಾಮಿಕ ಸಮಯದಲ್ಲಿ ಸಂತ್ರಸ್ತರೊಂದಿಗೆ ಸಂಪರ್ಕಕ್ಕೆ ಬಂದಿದ್ದರು.

ಶುಕ್ರವಾರ ಬಿಜೆಪಿ ನಾಯಕನೊಂದಿಗೆ ಬ್ರಹ್ಮಪುತ್ರಿ ಪೊಲೀಸ್ ಠಾಣೆಗೆ ಆಗಮಿಸಿದ ಸಂತ್ರಸ್ತರು, “ಆರೋಪಿಗಳು ಧಾರ್ಮಿಕ ಮತಾಂತರಕ್ಕಾಗಿ ಹಣ ಮತ್ತು ಆಹಾರದ ಆಮಿಷ ಒಡ್ಡಿದ್ದಾರೆ.  ಈಗ ಈ ಜನರು ಹಿಂದೂ ದೇವತೆಗಳ ವಿಗ್ರಹಗಳು, ಪ್ರತಿಮೆಗಳು ಹಾಗೂ ಭಾವಚಿತ್ರಗಳನ್ನು ತೆಗೆದು ಕ್ರಿಶ್ಚಿಯನ್ ಧರ್ಮ ಸ್ವೀಕರಿಸುವಂತೆ ಗ್ರಾಮಸ್ಥರನ್ನು ಒತ್ತಾಯಿಸುತ್ತಿದ್ದಾರೆ’’ ಎಂದು ಹೇಳಿದರು.

Similar News