ಅತ್ಯಾಚಾರ ಯತ್ನ ಪ್ರಕರಣದ ಸಂತ್ರಸ್ತೆಯ ವೀಡಿಯೋ ಚಿತ್ರೀಕರಿಸಿದ ಪ್ರಕರಣ: 15-20 ಮಂದಿಯ ವಿರುದ್ಧ ಪೊಲೀಸ್ ಕೇಸ್

Update: 2022-10-29 12:13 GMT

ಕನೌಜ್ : ಉತ್ತರ ಪ್ರದೇಶದ ಕನೌಜ್‍ನಲ್ಲಿ ಅತ್ಯಚಾರ ಯತ್ನಕ್ಕೊಳಗಾಗಿದ್ದಳೆನ್ನಲಾಗಿರುವ ಹಾಗೂ ಗಾಯಾಳುವಾಗಿದ್ದ 13ರ ಬಾಲಕಿಯೊಬ್ಬಳು ನೋವಿನಿಂದ ನರಳುತ್ತಿದ್ದರೆ ಆಕೆಗೆ ಸಹಾಯ ಮಾಡುವ ಬದಲು ಆಕೆಯ ವೀಡಿಯೋ ತೆಗೆದು ಅದನ್ನು ವೈರಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಕನೌಜ್ ಪೊಲೀಸರು ಸುಮಾರು 15 ರಿಂದ 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯ ಗುರುತು ಬಹಿರಂಗಪಡಿಸಿದ ಆರೋಪ ಸಹಿತ ಇತರ ಆರೋಪಗಳನ್ನು ಅವರ ಮೇಳೆ ಹೊರಿಸಲಾಗಿದೆ.

ಘಟನೆ ಅಕ್ಟೋಬರ್ 23 ರಂದು ನಡೆದಿತ್ತು. ಕನೌಜ್‍ನ ಸರಕಾರಿ ಅತಿಥಿಗೃಹದ ಸಮೀಪ ಪೊದೆಗಳ ಪಕ್ಕದಲ್ಲಿ ಬಿದ್ದುಕೊಂಡಿದ್ದ ಬಾಲಕಿ ನೋವಿನಿಂದ ಚೀರಾಡುತ್ತಿದ್ದರೂ ಆಕೆಗೆ ಸಹಾಯ ಮಾಡದೆ ಹಲವರು ವೀಡಿಯೋ ತೆಗೆಯುತ್ತಿದ್ದರು. ಅಲ್ಲಿಗೆ ಪೊಲೀಸ್ ಅಧಿಕಾರಿಯೊಬ್ಬರು ಆಗಮಿಸಿ ಆಕೆಯನ್ನು ಆಟೋವೊಂದರಲ್ಲಿ ಆಸ್ಪತ್ರೆಗೆ ಸಾಗಿಸುವ ತನಕ ಯಾರೂ ಆಕೆಯ ಸಹಾಯಕ್ಕೆ ಬಂದಿರಲಿಲ್ಲ.

ಈ ಸಂದರ್ಭ ಫೋಟೋ ಹಾಗೂ ವೀಡಿಯೋ ಸೆರೆ ಹಿಡಿದಿದ್ದಕ್ಕಾಗಿ ಪ್ರಕರಣ ಎದುರಿಸುತ್ತಿರುವವರ ವಿರುದ್ಧ ಐಪಿಸಿ ಸೆಕ್ಷನ್ 228ಎ, 354ಸಿ ಹಾಗೂ 505(2) ಮತ್ತು ಐಟಿ ಕಾಯಿದೆಯಡಿು ಕೇಸ್ ದಾಖಲಿಸಲಾಗಿದೆ.

ಬಾಲಕಿಗೆ ಪ್ರಸ್ತುತ ಕಾನ್ಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆಯ ಮಾವ ದೂರು ದಾಖಲಿಸಿ ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ಕೊಲೆಯತ್ನ ಆರೋಪ ಹೊರಿಸಿದ್ದಾರೆ.

ಆಕೆಯ ಮೇಲೆ ಬಲಾತ್ಕಾರ ಯತ್ನದಲ್ಲಿ ವಿಫಲರಾದ ಆರೋಪಿಗಳು ಆಕೆಗೆ ಥಳಿಸಿದ್ದಾರೆಂದು ಶಂಕಿಸಲಾಗಿದೆ.

ಪ್ರಮುಖ ಆರೋಪಿಯನ್ನು ಗುರುತಿಸಲಾಗಿದ್ದು ಆತನಿಗಾಗಿ ಶೋಧಿಸಲಾಗುತ್ತಿದೆ, ಆತನಿಗೆ ತಲೆಮರೆಸಿಕೊಳ್ಳಲು ಹಾಗೂ ಆತನಿಗೆ ಆಶ್ರಯವೊದಗಿಸಿದ ಆರೊಪದ ಮೇಲೆ ಓರ್ವ ಮಹಿಳೆ ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ.

ಹತ್ತಿರದ ಅಂಗಡಿಯಲ್ಲಿ ಪಿಗ್ಗಿ ಬ್ಯಾಂಕ್ ಖರೀದಿಸಲೆಂದು 9ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿ ಅಕ್ಟೋಬರ್ 23 ರಂದು ಮನೆಯಿಂದ ಹೊರ ಹೋಗಿದ್ದಳು, ಆದರೆ ಆಕೆ ವಾಪಸಾಗದೇ ಇದ್ದಾಗ ಆಕೆಗಾಗಿ ಹುಡುಕಾಟ ಆರಂಭಗೊಂಡಿತ್ತು.

ಬಾಲಕಿಯ ತಲೆಗೆ ಮಾತ್ರ ಗಾಯಗಳಾಗಿವೆ ಎಂದು ವೈದ್ಯಕೀಯ ವರದಿ ದೃಢಪಡಿಸಿದೆ, ಲೈಂಗಿಕ ಹಲ್ಲೆ ನಡೆದಿದೆ ಎಂಬ ಆರೋಪ ಇನ್ನೂ ದೃಢಪಟ್ಟಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Similar News