ಜಾನುವಾರುಗಳಿಗೆ ಢಿಕ್ಕಿ : ಅಕ್ಟೋಬರ್‌ನ ಮೊದಲ 9 ದಿನ 200 ರೈಲುಗಳ ಸಂಚಾರಕ್ಕೆ ಅಡ್ಡಿ

Update: 2022-10-30 17:32 GMT

ಹೊಸದಿಲ್ಲಿ, ಅ. 30: ಜಾನುವಾರುಗಳಿಗೆ ಢಿಕ್ಕಿಯಾದ ಪರಿಣಾಮ ಅಕ್ಟೋಬರ್‌ನ ಮೊದಲ 9 ದಿನಗಳಲ್ಲಿ 200 ರೈಲುಗಳ ಹಾಗೂ ಈ ವರ್ಷ ಇದುವರೆಗೆ 4,000ಕ್ಕೂ ಅಧಿಕ ರೈಲುಗಳ  ಸಂಚಾರಕ್ಕೆ ಅಡ್ಡಿ ಉಂಟಾಗಿದೆ ಎಂದು ಅಧಿಕೃತ ದತ್ತಾಂಶ ತಿಳಿಸಿದೆ. 

ಜಾನುವಾರುಗಳಿಗೆ ಢಿಕ್ಕಿಯಾದ ಪರಿಣಾಮ ಅಕ್ಟೋಬರ್ 1ರಂದು ನೂತನವಾಗಿ ಆರಂಭಿಸಲಾದ ಮುಂಬೈ-ಅಹ್ಮದಾಬಾದ್ ವಂದೇ ‘ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.  ಈ ತಿಂಗಳು ಈ ರೈಲು ಮೂರು ಜಾನುವಾರುಗಳಿಗೆ ಢಿಕ್ಕಿಯಾಗಿದೆ. ಇದರಿಂದ ರೈಲಿನ  ಮೂತಿಗೆ ಹಾನಿ ಉಂಟಾಗಿದೆ. 
ಇಂತಹ ಘಟನೆಗಳು ಸಂಭವಿಸುವ ರೈಲು ಹಳಿಗಳ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ರೈಲ್ವೇ ತಡೆಬೇಲಿಗಳನ್ನು ಹಾಕಿದೆ. ಆದರೆ, ಒಂದೆಡೆ ವಸತಿ ಪ್ರದೇಶ ಹಾಗೂ ಇನ್ನೊಂದೆಡೆ ಹೊಲ ಇರುವುದರಿಂದ ರೈಲು ಹಳಿಯ ಸುತ್ತಮುತ್ತ ದೂರದ ವರೆಗೆ ತಡೆಬೇಲಿಗಳನ್ನು ಹಾಕುವುದು ಕಷ್ಟಕರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇಂತಹ ಅತ್ಯಧಿಕ ಸಂಖ್ಯೆಯ ಘಟನೆಗಳು ದಾಖಲಾದ ರೈಲು ಹಳಿಗಳಿರುವ  ಪ್ರದೇಶಗಳನ್ನು ರೈಲ್ವೆ ಗುರುತಿಸಿದೆ ಹಾಗೂ ಅಲ್ಲಿಗೆ ತಡೆಬೇಲಿ ಹಾಕುವ  ಪ್ರಕ್ರಿಯೆಯಲ್ಲಿ ತೊಡಗಿದೆ. ಈ ವಲಯದ ಕೆಲಸ ಶೇ. 40 ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘‘ಜಾನುವಾರುಗಳಿಗೆ ರೈಲು ಢಿಕ್ಕಿಯಾಗುವುದನ್ನು ಕಡಿಮೆ ಮಾಡಲು ರೈಲ್ವೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲಿ ಢಿಕ್ಕಿ ಸಂಭವಿಸುತ್ತದೆ ಎಂದು ನಾವು ಗುರುತಿಸುತ್ತಿದ್ದೇವೆ. ಅಂತಹ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಆಗಾಗ ಢಿಕ್ಕಿ ಸಂಭವಿಸಲು ಇರುವ ಕಾರಣವನ್ನು ಕಂಡು ಹಿಡಿಯುತ್ತಿದ್ದೇವೆ   ಕೆಲವು ಸಂದರ್ಭ ಕಾರಣಗಳು ತಿಳಿಯುತ್ತದೆ. ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ. ಆದರೆ, ಇನ್ನು ಕೆಲವು ಸಂದರ್ಭ ನೇರ ಕಾರಣವೇ ಪತ್ತೆಯಾಗುವುದಿಲ್ಲ ಎಂದು ರೈಲ್ವೆಯ ಮಾಹಿತಿ ಹಾಗೂ ಪ್ರಸಾರದ ಕಾರ್ಯಕಾರಿ ನಿರ್ದೇಶಕ ಅಮಿತಾಬ್ ಶರ್ಮಾ ಅವರು ತಿಳಿಸಿದ್ದಾರೆ.

‘‘ನಮ್ಮ ತಂಡ ಈಗಲೂ ಸಮೀಪದ ಗ್ರಾಮವನ್ನು ಭೇಟಿ ನೀಡುತ್ತದೆ ಹಾಗೂ ಸರಪಂಚರನ್ನು ಸಂಪರ್ಕದಲ್ಲಿ ಇರಿಸಿಕೊಂಡಿದೆ. ಜಾನುವಾರುಗಳಿಗೆ ರೈಲು ಢಿಕ್ಕಿಯಾಗುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಗ್ರಾಮಸ್ಥರಿಗೆ ಸಲಹೆ ನೀಡುತ್ತಿದ್ದೇವೆೆ’’ ಎಂದು ಅವರು ಹೇಳಿದ್ದಾರೆ.

Similar News