ಗುಜರಾತ್ ಸೇತುವೆ ದುರಂತ: 100 ದಾಟಿದ ಮೃತರ ಸಂಖ್ಯೆ

Update: 2022-10-31 01:53 GMT

ರಾಜಕೋಟ್: ಗುಜರಾತ್ ತೂಗು ಸೇತುವೆ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 100ಕ್ಕೇರಿದೆ. 140 ವರ್ಷಗಳಿಂದ ಬಳಕೆಯಲ್ಲಿಲ್ಲದ ಸೇತುವೆಯನ್ನು ಇತ್ತೀಚೆಗಷ್ಟೇ ನವೀಕರಿಸಿ, ಐದು ದಿನಗಳ ಹಿಂದಷ್ಟೇ ಬಳಕೆಗೆ ತೆರೆಯಲಾಗಿತ್ತು. ಸುಮಾರು 400 ಮಂದಿಯ ರಜಾಕಾಲದ ದಟ್ಟಣೆಯಿಂದಾಗಿ ಸೇತುವೆ ಕುಸಿದಿದೆ ಎಂದು ಮೂಲಗಳು ಹೇಳಿವೆ.

ಗುಜರಾತ್‍ನ ರಾಜ್ಯ ಸಚಿವ ಮತ್ತು ಮೊರ್ಬಿ ಶಾಸಕ ಬ್ರಿಜೇಶ್ ಮೆರ್ಜಾ 60ಕ್ಕೂ ಹೆಚ್ಚು ಸಾವುಗಳನ್ನು ದೃಢಪಡಿಸಿದ್ದು, ದುರಂತ ಸಂಭವಿಸಿದ ನಾಲ್ಕು ಗಂಟೆಗಳ ಬಳಿಕ ಬದುಕಿ ಉಳಿದಿರುವ ಸಾಧ್ಯತೆ ಕ್ಷೀಣ ಎಂದು ತಡರಾತ್ರಿ ಹೇಳಿಕೆ ನೀಡಿದ್ದಾರೆ.

ಈಗಾಗಲೇ 50ಕ್ಕೂ ಹೆಚ್ಚು ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಡುಗತ್ತಲು ಮತ್ತು ಪಾಚಿಯ ದಪ್ಪ ಪದರಗಳು ಶೋಧ ಕಾರ್ಯಾಚರಣೆಗೆ ತೊಡಕು ಉಂಟು ಮಾಡಿವೆ ಎಂದು ರಾಜಕೋಟ್ ಸಂಸದ ಮೋಹನ್ ಕುಂದಾರಿಯಾ ಹೇಳಿದ್ದಾರೆ.

ಪರಿಹಾರ ಕಾರ್ಯಾಚರಣೆಗಾಗಿ ಗರುಡಾ ಕಮಾಂಡೊ ಪಡೆ ಮತ್ತು ಭಾರತೀಯ ವಾಯುಪಡೆಯ ತಂಡ ಜಾಮ್‍ನಗರದಿಂದ ಧಾವಿಸಿದೆ. ವೈದ್ಯಕೀಯ ಆ್ಯಂಬುಲೆನ್ಸ್ ಮತ್ತು ಅಕ್ಕಪಕ್ಕದ ಜಿಲ್ಲೆಗಳ ವೈದ್ಯರನ್ನು ಮೊರ್ಬಿಗೆ ಕರೆಸಲಾಗಿದ್ದು, ಗಾಯಾಳುಗಳಿಗೆ ಗರಿಷ್ಠ ನೆರವು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಬ್ರಿಟಿಷ್ ಯುಗದ ಸೇತುವೆ, ಜನದಟ್ಟಣೆಯ ಕಾರಣದಿಂದ ಕುಸಿದಿರುವ ಸಾಧ್ಯತೆ ಇದೆ. ಏಕೆಂದರೆ 400ಕ್ಕೂ ಹೆಚ್ಚು ಟಿಕೆಟ್‍ಗಳನ್ನು ಪ್ರವಾಸಿಗರಿಗೆ ಈ ವೇಳೆಗಾಗಲೇ ನೀಡಲಾಗಿತ್ತು ಎಂದು ರಸ್ತೆ ಮತ್ತು ಕಟ್ಟಡ ಖಾತೆ ರಾಜ್ಯ ಸಚಿವ ಜಗದೀಶ್ ಪಾಂಚಾಲ್ ಹೇಳಿದ್ದಾರೆ. ಈ ಬಗ್ಗೆ timesofindia.com, hindustantimes ವರದಿ ಮಾಡಿವೆ.

Similar News