ಕೆಂಪೇಗೌಡರಿಗೆ ಕೊಡುವ ನಿಜವಾದ ಗೌರವ
ಮಾನ್ಯರೇ,
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗ್ಗೆ ಕನ್ನಡಿಗರೆಲ್ಲರಿಗೂ ಅಭಿಮಾನ ಮತ್ತು ಗೌರವವಿದೆ. ಐನೂರು ವರ್ಷಗಳ ಹಿಂದೆ ದೂರದೃಷ್ಟಿತ್ವದಿಂದ ವಿಶ್ವದಲ್ಲಿಯೇ ಅತ್ಯಂತ ಮಾದರಿ ಎನ್ನಬಹುದಾದ ನಗರವನ್ನು ನಿರ್ಮಿಸಿದ ಮಾನವತಾವಾದಿ ಅವರು. ಕೆರೆ, ಕಾಲುವೆಗಳನ್ನು ನಿರ್ಮಿಸಿ ಕಲ್ಯಾಣಿಗಳನ್ನು ಕಟ್ಟಿಕೊಟ್ಟು, ದನ, ಕರುಗಳಿಗಾಗಿ ಗೋಮಾಳವನ್ನು ನೀಡಿದಂತಹ ಮಹಾಪುರುಷ ಕೆಂಪೇಗೌಡರು. ಸಮಾಜದ ಎಲ್ಲ ವರ್ಗದ, ಎಲ್ಲ ಕುಲಕಸುಬಿನ ಜನರಿಗೆ ಬಡಾವಣೆಗಳನ್ನು ನಿರ್ಮಿಸಿಕೊಟ್ಟವರು ಅವರು.
ಇವರು ಅಂದು ಕಟ್ಟಿದ ಬೆಂಗಳೂರಿನ ಅನೇಕ ಆಸ್ತಿಗಳು ಇತ್ತೀಚಿನ ದಶಕಗಳಲ್ಲಿ ಯಾರ್ಯಾರದೋ ಪಾಲಾಗಿವೆ. ಪ್ರತಿವರ್ಷವೂ ಕೆಂಪೇಗೌಡರನ್ನು ಸ್ಮರಿಸುತ್ತಾರೆ, ಹೂವು, ಹಾರ ಹಾಕಿ ಗೌರವಿಸುತ್ತಾರೆ. ಆದರೆ ಕೆಂಪೇಗೌಡರ ಮೂಲ ಆಶಯವನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಬೆಂಗಳೂರು ನಗರದ ಮತ್ತು ಸುತ್ತಮುತ್ತಲೂ ಹಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೆರೆಗಳ ಜಾಗ, ಕಲ್ಯಾಣಿಗಳ ಜಾಗ, ಗೋಮಾಳ ಇತ್ಯಾದಿ ಸರಕಾರಿ ಆಸ್ತಿಗಳನ್ನು ಕಬಳಿಸಿದ್ದಾರೆಂದು ಎ.ಟಿ. ರಾಮಸ್ವಾಮಿ ನೇತೃತ್ವದ ವರದಿ ತಿಳಿಸಿದೆ.
ನಿಜಕ್ಕೂ ಕನ್ನಡಿಗರಿಗೆ ಕೆಂಪೇಗೌಡರ ಬಗ್ಗೆ ಅಭಿಮಾನವಿರುವುದು ಸತ್ಯವೇ ಎನುವುದಾದರೆ ಆ ಪುಣ್ಯಪುರುಷನ ಕಾಲದಲ್ಲಿ ಅಭಿವೃದ್ಧಿಯಾಗಿದ್ದ ಸ್ವತ್ತುಗಳನ್ನು ಕಬಳಿಸಿರುವ ಪುಣ್ಯಾತ್ಮರು ಯಾವುದೇ ಮಟ್ಟದಲ್ಲಿ ದೊಡ್ಡವರಾಗಿದ್ದರೂ ಅವುಗಳನ್ನು ಹಿಂದಿರುಗಿಸಿ ಕೆಂಪೇಗೌಡರಿಗೆ ನಿಜವಾದಂತಹ ಗೌರವವನ್ನು ಸಲ್ಲಿಸಲಿ.