ವಿರಾಟ್ ಕೊಹ್ಲಿ ವಿರುದ್ಧ ‘ನಕಲಿ ಫೀಲ್ಡಿಂಗ್’ ಆರೋಪ ಹೊರಿಸಿದ ಬಾಂಗ್ಲಾ ಬ್ಯಾಟರ್ ನೂರುಲ್ ಹಸನ್
ಅಡಿಲೇಡ್: ಬಾಂಗ್ಲಾದೇಶದ ವಿಕೆಟ್‌ಕೀಪರ್-ಬ್ಯಾಟರ್ ನೂರುಲ್ ಹಸನ್ ಅವರು ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿರುದ್ಧ "ನಕಲಿ ಫೀಲ್ಡಿಂಗ್" ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಆನ್-ಫೀಲ್ಡ್ ಅಂಪೈರ್‌ಗಳ ಗಮನಕ್ಕೆ ಬರಲಿಲ್ಲ. ಹೀಗಾಗಿ ನಮ್ಮ ತಂಡ ಟಿ-20 ವಿಶ್ವಕಪ್ ಪಂದ್ಯದಲ್ಲಿ ಐದು ಪ್ರಮುಖ ಪೆನಾಲ್ಟಿ ರನ್‌ಗಳನ್ನು ಪಡೆಯುವುದರಿಂದ ವಂಚಿತವಾಯಿತು ಎಂದಿದ್ದಾರೆ.
ಸ್ವಲ್ಪ ಹೊತ್ತು ಮಳೆ ಬಿದ್ದ ಕಾರಣ ಬಾಂಗ್ಲಾಕ್ಕೆ 16 ಓವರ್‌ಗಳಲ್ಲಿ 151 ರನ್‌ಗಳ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲಾಗಿತ್ತು. ಬಾಂಗ್ಲಾದೇಶ ಐದು ರನ್‌ಗಳ ಅಂತರದಿಂದ ಸೋಲುಂಡಿತು. ಅರ್ಷದೀಪ್ ಸಿಂಗ್ ಅವರ ಅಂತಿಮ ಓವರ್‌ನಲ್ಲಿ ಒಂದು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ ಬಾಂಗ್ಲಾದೇಶ ಕೊನೆಯ ತನಕ ಹೋರಾಡಲು ಕಾರಣವಾದ ನೂರುಲ್ ಪಂದ್ಯದ ನಂತರ ಆನ್-ಫೀಲ್ಡ್ ಅಂಪೈರ್‌ಗಳನ್ನು ಟೀಕಿಸಿದರು.
"ಖಂಡಿತವಾಗಿಯೂ, ನಾವು ಆಟವನ್ನು ಪುನರಾರಂಭಿಸಿದಾಗ ಒದ್ದೆಯಾದ ಔಟ್‌ಫೀಲ್ಡ್ ಪ್ರಭಾವ ಬೀರಿತು. ಆದರೆ ನಕಲಿ ಥ್ರೋ ಕಾರಣಕ್ಕೆ ನಮಗೆ ಐದು ರನ್ ಸಿಗಬೇಕಾಗಿತ್ತು. ಆದರೆ ನಾವು ಅದನ್ನು ಕೂಡ ಪಡೆಯಲಿಲ್ಲ" ಎಂದು ನೂರುಲ್ ಹೇಳಿದರು. ಅಂಪೈರ್‌ಗಳಾದ ಕ್ರಿಸ್ ಬ್ರೌನ್ ಹಾಗೂ ಮರೈಸ್ ಎರಾಸ್ಮಸ್ ಘಟನೆಯನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ನೂರುಲ್ ಉಲ್ಲೇಖಿಸಿದ ಘಟನೆ ನಡೆದದ್ದು ಏಳನೇ ಓವರ್‌ನಲ್ಲಿ. ಅರ್ಷದೀಪ್ ಅವರು ಡೀಪ್‌ನಿಂದ ಚೆಂಡನ್ನು ಎಸೆದರು ಹಾಗೂ ಕೊಹ್ಲಿ ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ಅದನ್ನು ರಿಲೇ ಮಾಡುತ್ತಿರುವಂತೆ ನಟಿಸಿರುವುದು ವೀಡಿಯೊ ರೆಕಾರ್ಡಿಂಗ್ ತೋರಿಸಿದೆ.
ಬಾಂಗ್ಲಾದ ಇಬ್ಬರು ಬ್ಯಾಟರ್‌ಗಳಾದ ಲಿಟನ್ ದಾಸ್ ಹಾಗೂ ನಜ್ಮುಲ್ ಹುಸೇನ್ ಅವರು ಕೊಹ್ಲಿಯತ್ತ ನೋಡಲಿಲ್ಲ. ಹೀಗಾಗಿ ನೂರುಲ್ ಅವರ ವಾದವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ICC ಆಟದ ಪರಿಸ್ಥಿತಿಗಳ ನಿಯಮ 41.5 ಫೀಲ್ಡಿಂಗ್ ತಂಡವು "ಉದ್ದೇಶಪೂರ್ವಕ ವಂಚನೆ ಅಥವಾ ಬ್ಯಾಟರ್‌ಗೆ ಅಡಚಣೆ ಮಾಡುವುದನ್ನು ನಿರ್ಬಂಧಿಸುತ್ತದೆ.
ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿರುವುದು ಅಂಪೈರ್ ಗೆ ಗೊತ್ತಾದರೆ, ಅವರು ಅದನ್ನು ಡೆಡ್ ಬಾಲ್ ಎಂದು ಕರೆಯಬಹುದು ಹಾಗೂ ಐದು ಪೆನಾಲ್ಟಿ ರನ್ ಗಳನ್ನು ನೀಡಬಹುದು.
ರನ್ ಗಾಗಿ ಓಡುತ್ತಿದ್ದ ಹುಸೈನ್ ಅಥವಾ ಲಿಟನ್ ದಾಸ್ ಅವರು ಕೊಹ್ಲಿಯನ್ನು ನೋಡಲಿಲ್ಲ, ಆದ್ದರಿಂದ ಅವರು ಕೊಹ್ಲಿಯಿಂದ ಅಡಚಣೆಗೆ ಒಳಗಾಗಲಿಲ್ಲ ಅಥವಾ ಮೋಸ ಹೋಗಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ, ಪಂದ್ಯದ ಅಧಿಕಾರಿಗಳನ್ನು ಟೀಕಿಸಿದ್ದಕ್ಕಾಗಿ ನೂರುಲ್ ಅವರಿಗೆ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಯಿದೆ.
#INDvsBAN is this considered fake fielding? pic.twitter.com/rwLaPwv3xs
— Siddharth (@siddyhere1) November 3, 2022