ಗುಜರಾತ್‌ ಚುನಾವಣೆ ದಿನಾಂಕ ಘೋಷಣೆ: ಅಯೋಧ್ಯೆಗೆ ಕರೆದೊಯ್ಯುವ ಭರವಸೆ ನೀಡಿದ ಕೇಜ್ರಿವಾಲ್

Update: 2022-11-03 15:22 GMT

ಅಹ್ಮದಾಬಾದ್:‌ ಚುನಾವಣಾ ಆಯೋಗವು ಗುಜರಾತ್‌ಗೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಪಕ್ಷವು ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‌

ಗುಜರಾತ್‌ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಹೊರಬೀಳಲಿದೆ

"ನಾನು ನಿಮ್ಮ ಸಹೋದರ, ನಿಮ್ಮ ಕುಟುಂಬದ ಭಾಗ. ನನಗೆ ಒಂದು ಅವಕಾಶ ನೀಡಿ, ನಾನು ನಿಮಗೆ ಉಚಿತ ವಿದ್ಯುತ್ ನೀಡುತ್ತೇನೆ; ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುತ್ತೇನೆ... ನಿಮ್ಮನ್ನು ಅಯೋಧ್ಯೆಯ ರಾಮಮಂದಿರಕ್ಕೆ ಕರೆದೊಯ್ಯುತ್ತೇನೆ" ಎಂದು ದಿಲ್ಲಿ ಮುಖ್ಯಮಂತ್ರಿ ಗುಜರಾತಿಗರಿಗೆ ಭರವಸೆ ನೀಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಪಂಜಾಬ್‌ನಲ್ಲಿ ಗೆಲುವು ಸಾಧಿಸಿರುವ ಎಎಪಿ ಕಳೆದ ಎರಡು ದಶಕಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಪಕ್ಷದ ಬಲ ವಿಸ್ತರಿಸುವ ತವಕದಲ್ಲಿದೆ.

"ನಾವು ಈಗ 90-95 ಸ್ಥಾನಗಳನ್ನು (182 ರಲ್ಲಿ) ಗೆಲ್ಲುತ್ತಿದ್ದೇವೆ ಮತ್ತು ಇದೇ ವೇಗವನ್ನು ಮುಂದುವರೆಸಿದರೆ, ನಾವು 140 ರಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ" ಎಂದು ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್‌ ಹೇಳಿದ್ದಾರೆ.

Similar News