ಕೆಂಪು ಕೋಟೆಯ ಮೇಲೆ ದಾಳಿ ; ಮರಣ ದಂಡನೆ ರದ್ದುಪಡಿಸಬೇಕೆನ್ನುವ ಉಗ್ರನ ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2022-11-03 16:13 GMT

ಹೊಸದಿಲ್ಲಿ, ನ. 3: 2000ದ ಕೆಂಪು ಕೋಟೆ ದಾಳಿ(Attack on the Red Fort) ಪ್ರಕರಣದಲ್ಲಿ ತನಗೆ ನೀಡಲಾಗಿರುವ ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಕೋರಿ ಲಷ್ಕರೆ ತಯ್ಯಬ ಉಗ್ರ ಮುಹಮ್ಮದ್ ಆರಿಫ್ ಯಾನೆ ಅಶ್ಫಾಕ್(Muhammad Arif Yane Ashfaq) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್(Supreme Court) ಗುರುವಾರ ತಳ್ಳಿಹಾಕಿದೆ ಎಂದು ‘ಲೈವ್ ಲಾ’ ('Live Law')ವರದಿ ಮಾಡಿದೆ.

‘ಇಲೆಕ್ಟ್ರಾನಿಕ್ ದಾಖಲೆಗಳನ್ನು ಪರಿಗಣಿಸಬೇಕು ಎಂಬ ಮನವಿಯನ್ನು ನಾವು ಸ್ವೀಕರಿಸಿದ್ದೇವೆ’’ ಎಂದು ಮುಖ್ಯ ನ್ಯಾಯಮೂರ್ತಿ ಉದಯ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಬೇಲಾ ಎಮ್. ತ್ರಿವೇದಿ (Bela M. Trivedi)ಅವರನ್ನೊಳಗೊಂಡ ಪೀಠವೊಂದು ತಿಳಿಸಿದೆ. ‘‘ಅವನ ಅಪರಾಧ ಸಾಬೀತಾಗಿದೆ. ಈ ನ್ಯಾಯಾಲಯ ತೆಗೆದುಕೊಂಡಿರುವ ನಿರ್ಧಾರವನ್ನು ನಾವು ದೃಢೀಕರಿಸುತ್ತೇವೆ ಹಾಗೂ ಆ ತೀರ್ಪನ್ನು ಮರುಪರಿಶಿಲಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ತಿರಸ್ಕರಿಸುತ್ತೇವೆ’’ ಎಂದು ಪೀಠ ಹೇಳಿದೆ.

2000 ಡಿಸೆಂಬರ್ 22ರಂದು ಕೆಂಪುಕೋಟೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಜಪುತಾನ ರೈಫಲ್ಸ್ನ 7ನೇ ಬೆಟಾಲಿಯನ್ನ ಇಬ್ಬರು ಸೈನಿಕರು ಮತ್ತು ಓರ್ವ ಸಿವಿಲಿಯನ್ ಕಾವಲುಗಾರ ಮೃತಪಟ್ಟಿದ್ದರು. ದಾಳಿಯನ್ನು ಯೋಜಿಸಿದ ಪಾಕಿಸ್ತಾನದ ಅಬ್ಬೊಟ್ಟಾಬಾದ್ ನಿವಾಸಿ ಆರಿಫ್ ಮತ್ತು ಇತರ 10 ಮಂದಿಯ ಅಪರಾಧ ನ್ಯಾಯಾಲಯದಲ್ಲಿ ಸಾಬೀತಾಗಿತ್ತು.

ದಿಲ್ಲಿ ಹೈಕೋರ್ಟ್ 2007ರಲ್ಲಿ ಆರಿಫ್ಗೆ ಮರಣ ದಂಡನೆ ವಿಧಿಸಿತ್ತು. ಬಳಿಕ ಅವನು ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದನು. ಅದನ್ನು 2011ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.

Similar News