ಹವಾಮಾನ ವೈಪರೀತ್ಯ: ತಲ್ಲಣ ಹುಟ್ಟಿಸಿದ 273 ದಿನಗಳು

ಭಾರತೀಯ ಹವಾಮಾನ ಇಲಾಖೆ, ವಿಪತ್ತು ನಿರ್ವಹಣಾ ವಿಭಾಗ ಮತ್ತು ಇಂತಹ ವಿಪರೀತಗಳ ಕುರಿತ ಮಾಧ್ಯಮ ವರದಿಗಳನ್ನೆಲ್ಲ ಕಲೆಹಾಕಿ ಪ್ರಕಟಿಸಲಾದ ವರದಿಯಲ್ಲಿರುವುದು ತಲ್ಲಣಕಾರಿ ಕಥೆ.

Update: 2022-11-04 03:55 GMT

ಇಡೀ ಪರಿಸರ ವ್ಯವಸ್ಥೆಯಲ್ಲಿನ ಗುಣಧರ್ಮದಲ್ಲಾದ ಭಾರೀ ವ್ಯತ್ಯಾಸವು ಉಂಟುಮಾಡುತ್ತಿರುವ ಪ್ರಾಕೃತಿಕ ವಿಕೋಪಗಳು ಕೂಡ ದೊಡ್ಡ ಮಟ್ಟದವೇ ಆಗಿವೆ. ಹವಾಮಾನ ವೈಪರೀತ್ಯದ ಪರಿಣಾಮಕ್ಕಂತೂ ಈ ವರ್ಷ ದೇಶಾದ್ಯಂತದ ಬಹುತೇಕ ವಲಯಗಳು ತತ್ತರಿಸಿಬಿಟ್ಟಿವೆ. ಮತ್ತೆ ಮತ್ತೆ ಸಂಭವಿಸಿದ ಪ್ರಕೃತಿ ವಿಪತ್ತುಗಳು ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿವೆ. ದೇಶದಲ್ಲಿ 2022ನ್ನು ಪ್ರಾಕೃತಿಕವಾಗಿ ವಿಪರೀತಗಳ ವರ್ಷ ಎಂದೇ ಹೇಳಬೇಕು. ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಹಾಗೂ ‘ಡೌನ್ ಟು ಅರ್ಥ್’ ಸರಕಾರದ ದಾಖಲೆಗಳನ್ನು ಆಧರಿಸಿ ಪ್ರಕಟಿಸಿರುವ ವರದಿಯೊಂದು ದೇಶದಲ್ಲಿ 2022ರ ಮೊದಲ ಒಂಭತ್ತು ತಿಂಗಳಲ್ಲಿ ಪ್ರಕೃತಿ ವಿಕೋಪದ ಕರಾಳತೆ ಎಂಥದಿತ್ತು ಎಂಬುದನ್ನು ಹೇಳುತ್ತದೆ. ದೇಶವು ಅತ್ಯಧಿಕ ಮಟ್ಟದಲ್ಲಿ ಹವಾಮಾನ ವೈಪರೀತ್ಯಗಳನ್ನು ಎದುರಿಸಿದ ಅವಧಿ ಇದು. ಹವಾಮಾನ ಬದಲಾವಣೆಯ ಕಾರಣದಿಂದಾಗಿ ತಾಪಮಾನ ಏರಿಕೆ, ತೀವ್ರ ಚಳಿ, ಪ್ರವಾಹಗಳ ಸರಮಾಲೆಯೇ ಉಂಟಾದವು ಈ ಒಂಭತ್ತು ತಿಂಗಳುಗಳಲ್ಲಿ. ವರದಿ ಹೇಳುವ ಪ್ರಕಾರ, ಜನವರಿ 1ರಿಂದ ಸೆಪ್ಟಂಬರ್ 30ರವರೆಗೆ ಶೇ.88 ದಿನಗಳು ಕಂಡದ್ದು ಪ್ರಕೃತಿ ವೈಪರೀತ್ಯವನ್ನೇ. ದೇಶಾದ್ಯಂತ 2,775 ಮಂದಿ ಪ್ರಾಣ ಕಳೆದುಕೊಂಡರೆ, 18 ಲಕ್ಷ ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿನ ಬೆಳೆ ನಾಶವಾಯಿತು. ಇದು ನೇರ ಪರಿಣಾಮವಾದರೆ, ಇಂತಹ ಆತಂಕಕಾರಿ ಅವಘಡಗಳಿಂದ ಜನರ ಆರೋಗ್ಯದಲ್ಲಿ ಸಮಸ್ಯೆ ಮತ್ತು ಮಾನಸಿಕ ಆಘಾತದಂಥ ಅಪ್ರತ್ಯಕ್ಷ ಪರಿಣಾಮಗಳೂ ಇನ್ನೊಂದೆಡೆ ಇದ್ದೇ ಇರುತ್ತವೆ. ಆದರೆ ಇದನ್ನು ದಾಖಲಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಅತ್ಯಧಿಕ ತಾಪಮಾನ, ಅತ್ಯಧಿಕ ಚಳಿ, ಅತಿವೃಷ್ಟಿ, ಭೂಕುಸಿತ, ಪ್ರವಾಹ, ಚಂಡಮಾರುತಗಳು, ಹಿಮಪಾತ, ಧೂಳು ಮತ್ತು ಮರಳಿನಿಂದ ಕೂಡಿದ ಬಿರುಗಾಳಿ, ಸುಂಟರಗಾಳಿ, ಆಲಿಕಲ್ಲು ಮಳೆ-ಹೀಗೆ ಒಂದಿಲ್ಲೊಂದು ಬಗೆಯಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿದವು. ಭಾರತೀಯ ಹವಾಮಾನ ಇಲಾಖೆ, ವಿಪತ್ತು ನಿರ್ವಹಣಾ ವಿಭಾಗ ಮತ್ತು ಇಂಥ ವಿಪರೀತಗಳ ಕುರಿತ ಮಾಧ್ಯಮ ವರದಿಗಳನ್ನೆಲ್ಲ ಕಲೆಹಾಕಿ ಪ್ರಕಟಿಸಲಾದ ವರದಿಯಲ್ಲಿರುವುದು ತಲ್ಲಣಕಾರಿ ಕಥೆ.

ಒಟ್ಟು 273 ದಿನಗಳಲ್ಲಿ 241 ದಿನ ಪ್ರಾಕೃತಿಕ ವಿಕೋಪದ ಘಟನೆಗಳು ಸಂಭವಿಸಿವೆ. ವರ್ಷದ ಈ ಒಂಭತ್ತು ತಿಂಗಳಲ್ಲಿ ಹೆಚ್ಚು ಕಡಿಮೆ ಪ್ರತಿದಿನವೂ ಒಂದಿಲ್ಲೊಂದು ನೈಸರ್ಗಿಕ ವಿಪತ್ತು ಘಟಿಸಿದೆ. 2022ರ ಮಾರ್ಚ್ ಅತ್ಯಧಿಕ ತಾಪಮಾನದ ಮಾರ್ಚ್ ಆಗಿ ದಾಖಲಾದರೆ, ಶತಮಾನದ ಅವಧಿಯಲ್ಲೇ ಮೂರನೇ ಅತಿ ಹೆಚ್ಚು ತಾಪಮಾನ ಕಂಡ ಎಪ್ರಿಲ್ ಈ ವರ್ಷದ ಎಪ್ರಿಲ್ ಆಗಿತ್ತು. ಇಂತಹ ಹವಾಮಾನ ವೈಪರೀತ್ಯಗಳು ಹೆಚ್ಚು ಸಂಭವಿಸಿದ್ದು ಮಧ್ಯಪ್ರದೇಶದಲ್ಲಿ. ಪ್ರತೀ ಎರಡು ದಿನಗಳಿಗೊಮ್ಮೆ ಈ ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದ ಘಟನೆಗಳು ಉಂಟಾದವು. ದೇಶಾದ್ಯಂತ ಪ್ರಾಕೃತಿಕ ವಿಕೋಪಕ್ಕೆ ಈ ವರ್ಷ ಬಲಿಯಾದವರು 2,775 ಜನರು. ಅಸ್ಸಾಂ ಮತ್ತು ಮಧ್ಯಪ್ರದೇಶಗಳಲ್ಲಿ 301 ಮಂದಿ ಸಾವಿಗೀಡಾದರೆ, ಹಿಮಾಚಲ ಪ್ರದೇಶ ಅತಿ ಹೆಚ್ಚು ಅಂದರೆ 359 ಜನರ ಸಾವಿಗೆ ಸಾಕ್ಷಿಯಾಯಿತು. ವಲಯವಾರು ನೋಡುವುದಾದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಛತ್ತೀಸ್‌ಗಡ, ಒಡಿಶಾ ಮತ್ತು ಗೋವಾ ರಾಜ್ಯಗಳನ್ನೊಳಗೊಂಡ ಕೇಂದ್ರ ವಲಯವು 198 ದಿನಗಳಷ್ಟು ಕಾಲ ಪ್ರಾಕೃತಿಕ ವಿಕೋಪಗಳನ್ನು ಕಂಡಿತು ಮತ್ತು 887 ಜನರು ಈ ವಲಯದಲ್ಲಿ ಬಲಿಯಾದರು. ಪೂರ್ವ ಮತ್ತು ಈಶಾನ್ಯ ವಲಯಗಳು 783 ಸಾವುಗಳನ್ನು ಕಂಡವು. ದೊಡ್ಡ ಮಟ್ಟದಲ್ಲಿ ಬೆಳೆ ನಾಶ, ಲಕ್ಷಾಂತರ ಮನೆಗಳಿಗೆ ಹಾನಿ, 70ಸಾವಿರ ಜಾನುವಾರುಗಳ ಬಲಿ ಇವೆಲ್ಲವೂ ಈ ವರ್ಷದಲ್ಲಿನ ಪ್ರಕೃತಿ ವಿಕೋಪದ ಪರಿಣಾಮಗಳು.


ಕರ್ನಾಟಕದಲ್ಲಿ ಅರ್ಧಕ್ಕರ್ಧ ಬೆಳೆ ನಾಶ 
ಕರ್ನಾಟಕದಲ್ಲಿಯೂ ಪ್ರಾಕೃತಿಕ ವಿಪತ್ತಿನ ಪರಿಣಾಮ ಸಣ್ಣದಾಗಿರಲಿಲ್ಲ. ಶೇ.50ಕ್ಕೂ ಹೆಚ್ಚು ಬೆಳೆಪ್ರದೇಶಕ್ಕೆ ಬಾಧೆ ತಟ್ಟಿತು. ಹಲವಾರು ಮನೆಗಳು ಹಾನಿಗೊಳಗಾದವು. ಜಾನುವಾರುಗಳೂ ಬಲಿಯಾದವು.
ಕರ್ನಾಟಕದಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಉತ್ತರ ಕರ್ನಾಟಕ ಭಾಗಗಳಲ್ಲಿ ವಿಪರೀತ ಮಳೆ, ಪ್ರವಾಹ ಪರಿಸ್ಥಿತಿ ತಲೆದೋರುತ್ತಿದೆ. ಮತ್ತಿದು ಅತಿ ಎನ್ನಿಸುವಂಥ

ಮಟ್ಟದಲ್ಲಿರುವುದು ಪರಿಸರದ ಮೇಲಿನ ಮನುಷ್ಯನ ದಾಳಿಯ ಪರಿಣಾಮವಾಗಿ ಉಂಟಾಗಿರುವ ಅಸಮತೋಲನವನ್ನೇ ಸೂಚಿಸುತ್ತದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ಸುಮಾರು 2 ಲಕ್ಷ ಕೋಟಿ ರೂ.ಎಂಬುದು ಒಂದು ಅಂದಾಜು. ಹವಾಮಾನ ವೈಪರೀತ್ಯವು ರೈತರನ್ನು ತೀವ್ರವಾಗಿ ಬಾಧಿಸುವ ಸಂಗತಿಯಾಗಿದ್ದು, ಇದು ಇನ್ನೂ ಹೆಚ್ಚಲಿದೆ ಎನ್ನುತ್ತಾರೆ ಪರಿಣತರು.

Similar News