ಕಾಳಿಂಗ ಸರ್ಪದ ಸಾಮ್ರಾಜ್ಯ

Update: 2022-11-04 04:58 GMT

ದಕ್ಷಿಣ ಭಾರತದ ಪಶ್ಚಿಮ ಕರಾವಳಿಯ ಒಳನಾಡಿನಲ್ಲಿ ಒಣ ಬಯಲಿನ ಮಧ್ಯೆ 2,000 ಮೀಟರ್ ಎತ್ತರದ ಬೆನ್ನುಹುರಿಯನ್ನು ಹೋಲುವ ಪುರಾತನ ಪರ್ವತಶ್ರೇಣಿಯಿದೆ. ಈ ಬೆಟ್ಟಗಳಲ್ಲಿ ಕಣ್ಣಿಗೆ ಕಾಣದ ಕಣಿವೆಗಳಲ್ಲಿರುವ ಆರ್ದ್ರ ಕಗ್ಗತ್ತಲಿನ ಪುರಾತನ ಮಳೆಕಾಡುಗಳು ಈವರೆಗೆ ಯಾವುದೇ ಜೀವಶಾಸ್ತ್ರಜ್ಞ ಕಾಣದ ಅಥವಾ ವಿವರಿಸದ ಕೌತುಕಗಳನ್ನು ಒಳಗೊಂಡಿವೆ. ಈ ಕಣಿವೆಯಲ್ಲಿ ಸಾಮ್ರಾಜ್ಯ ಸ್ಥಾಪಿಸಿರುವ ಸರೀಸೃಪವೇ ಕಾಳಿಂಗ ಸರ್ಪ.

1973ರಲ್ಲಿ ಡಬ್ಲೂಡಬ್ಲೂಎಫ್ ವಾರ್ತಾಪತ್ರದಲ್ಲಿ ಪ್ರಕಟವಾದ ‘ಸೇವ್ ಸೈಲೆಂಟ್ ವ್ಯಾಲಿ’ ಕಿರುಲೇಖನವು ದೊಡ್ಡ ಪರಿಸರ ಯೋಜನೆ ಕುರಿತು ಎಚ್ಚರಿಕೆ ಗಂಟೆ ಬಾರಿಸಿತು. ಪರಿಸರ ಹೋರಾಟಗಾರರು ಗೆದ್ದರು: ಅಣೆಕಟ್ಟು ನಿರ್ಮಾಣವಾಗಲಿಲ್ಲ ಮತ್ತು ಮೌನ ಕಣಿವೆ ಉಳಿದುಕೊಂಡಿತು. ಆದರೆ, ಸಂರಕ್ಷಣಾಕಾರರ ಉತ್ತಮ ಪ್ರಯತ್ನಗಳ ನಡುವೆಯೂ ಕಾಡುಗಳ ನಾಶ ಹಾಗೂ ವನ್ಯಜೀವಿಗಳ ನಿರ್ವಂಶ ಮುಂದುವರಿಯಿತು. ಮೂಲಸೌಲಭ್ಯ ವ್ಯವಸ್ಥೆ ನಿರ್ಮಾಣ ಹಾಗೂ ಮನುಷ್ಯರ ಮರಮಟ್ಟು, ಟೀ, ಕಾಫಿ, ಸಂಬಾರ ಪದಾರ್ಥಗಳು ಮತ್ತು ರಬ್ಬರ್ ದಾಹ ತೀರಿಸಲು ಕಾಡುಗಳು ಗಾಬರಿಯಾಗುವಷ್ಟು ವೇಗದಲ್ಲಿ ಕಣ್ಮರೆಯಾಗುತ್ತಿವೆ. ವನ್ಯಜೀವಿಗಳನ್ನು ಬೋನು ಇರಿಸಿ, ಗುಂಡಿಕ್ಕಿ, ಕುಣಿಕೆ ಹಾಕಿ ಹಾಗೂ ವಿಷವಿಕ್ಕಿ ಕೊಲ್ಲಲಾಗುತ್ತಿದ್ದು, ಹಲವು ಪ್ರಭೇದಗಳು ನಿರ್ವಂಶವಾಗಿವೆ.

ಹಾವುಗಳಲ್ಲಿ ಕಾಳಿಂಗ ಸರ್ಪ ಅತ್ಯಂತ ಬುದ್ಧಿವಂತ ಜೀವಿ. ಐದು ಮೀಟರ್‌ಗಿಂತ ಹೆಚ್ಚು ಉದ್ದ ಬೆಳೆಯುವ ಹಾಗೂ ಜಗತ್ತಿನ ಅತ್ಯಂತ ವಿಷಯುಕ್ತ ಹಾವು. ಆದರೆ, ಕಾಳಿಂಗದ ವಿಷವು ಕನ್ನಡಿ ಹಾವಿನ(ಸ್ಪೆಕ್ಟಕಲ್ಡ್ ಕೋಬ್ರಾ) ವಿಷದಷ್ಟು ತೀವ್ರ ವಿಷಕಾರಿಯಲ್ಲ. ಕನ್ನಡಿ ಹಾವು ಕಚ್ಚಿದಾಗ 2 ಮಿ.ಲೀ. ವಿಷ ತುಂಬಿದರೆ, ಕಾಳಿಂಗ 6 ಮಿ.ಲೀ. ವಿಷ ತುಂಬುತ್ತದೆ. ಕಾಳಿಂಗ ಸರ್ಪ 30 ವರ್ಷಕ್ಕಿಂತ ಅಧಿಕ ಕಾಲ ಬದುಕಬಲ್ಲದು. ಅದರ ವಾಸನೆ ಗ್ರಹಿಸುವ ಹಾಗೂ ಸ್ಪರ್ಶ ಜ್ಞಾನ ವಿಶಿಷ್ಟವಾದುದು. ಸಾಮಾನ್ಯವಾಗಿ ಮನುಷ್ಯನ ಕಣ್ಣು ಅದನ್ನು ನೋಡುವ ಮೊದಲೇ ಸರಿದು ಹೋಗಿರುತ್ತದೆ. ವನ್ಯ ಪ್ರದೇಶದಲ್ಲಿ ಅವುಗಳ ಸಂಖ್ಯೆ ಎಷ್ಟಿದೆ ಎನ್ನುವುದು ಗೊತ್ತಿಲ್ಲ. ಆದರೆ, ಕಾಡನ್ನು ಕಡಿದಂತೆ ಅದರ ಜೀವಾವಾಸ ಸ್ಥಾನ ಕಡಿಮೆಯಾಗುತ್ತಿದೆ.

ಮಾರ್ಚ್ ಕಾಳಿಂಗಗಳು ಎಣೆ ಹಾಕುವ ಕಾಲ. ಎಣೆ ಒಂದು ಅಪಾಯಕರ ಸಮ್ಮಿಲನ. ದೊಡ್ಡ ಗಾತ್ರದ ಗಂಡು ಹಾವು ಸಣ್ಣ ಗಾತ್ರದ ಹೆಣ್ಣು ಹಾವನ್ನು ತಿಂದು ಹಾಕುವ ಸಾಧ್ಯತೆ ಇರುತ್ತದೆ. ಗಂಡು ಹಾವು ಫೆರೋಮೋನ್ ವಾಸನೆ ಹಿಡಿದು, ಹೆಣ್ಣು ಹಾವನ್ನು ಪತ್ತೆ ಹಚ್ಚುತ್ತದೆ. ಹೆಣ್ಣು ಸಿದ್ಧವಾಗಿದ್ದಲ್ಲಿ, ಕೂಡುತ್ತದೆ. ಒಂದು ವೇಳೆ ಸಿದ್ಧವಾಗದೆ ಇದ್ದಲ್ಲಿ, ಅಪ್ಪಿಕೆಣಕಿ ಹೆಣ್ಣು ಹಾವು ಬಾಲ ಎತ್ತುವವರೆಗೆ ಪ್ರಯತ್ನ ಮುಂದುವರಿಸುತ್ತದೆ. ಸಂಯೋಗ ಮೂರು ಗಂಟೆ ಕಾಲ ನಡೆಯುತ್ತದೆ. ಕಾಡುಗಳ ನಾಶದಿಂದ ಗಂಡು-ಹೆಣ್ಣು ಕಾಳಿಂಗಗಳಿಗೆ ಜೊತೆಗಾರ್ತಿ/ಜೊತೆಗಾರ ಸಿಗುತ್ತಿಲ್ಲ. ಸಂಗಾತಿಯನ್ನು ಹುಡುಕಿಕೊಂಡು ಟಿ, ಕಾಫಿ ತೋಟ ಮಾತ್ರವಲ್ಲದೆ, ನದಿ-ಜಲಾಶಯಗಳನ್ನು ಈಜಿ ದಾಟಿ, ಅರಣ್ಯದ ಇನ್ನೊಂದು ತುಣುಕನ್ನು ತಲುಪಬೇಕಾಗುತ್ತದೆ. ಕಳೆದ 15 ವರ್ಷಗಳ ಅಧ್ಯಯನದಿಂದ ಗೊತ್ತಾಗಿರುವುದೇನೆಂದರೆ, ಕೂಡಿದ ಕಾಳಿಂಗಗಳು ಹಲವು ದಿನ, ವಾರ ಒಟ್ಟಿಗೆ ಇರುತ್ತವೆ. ಆನಂತರ ಗಂಡು ಕಾಳಿಂಗ ಇನ್ನೊಂದು ಹೆಣ್ಣನ್ನು ಹುಡುಕಿಕೊಂಡು ಹೋಗುತ್ತದೆ.

 ವಾರಗಳು ಕಳೆದಂತೆ, ಆಕಾಶದಲ್ಲಿ ಮೋಡಗಳು ದಟ್ಟೈಸಿ ಮಳೆ ಆರಂಭವಾಗುತ್ತದೆ. ಕಪ್ಪೆಗಳ ವಾಲಗ ಆರಂಭವಾಗುತ್ತದೆ. ಹೆಣ್ಣು ಕಾಳಿಂಗ ಹುತ್ತವೊಂದನ್ನು ಆಯ್ಕೆ ಮಾಡಿಕೊಂಡು, ಮುತ್ತಿನಂಥ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಗೆದ್ದಲುಗಳು ಹುತ್ತದ ಉಷ್ಣಾಂಶ ಹಾಗೂ ತೇವವನ್ನು ಕಾಯ್ದುಕೊಳ್ಳುವುದರಿಂದ, ಆಗಮಿಸಲಿರುವ ಮರಿಗಳಿಗೆ ಪರಿಪೂರ್ಣ ವಾತಾವರಣ ಸೃಷ್ಟಿಯಾಗಿರುತ್ತದೆ. ತಾಯಿ ಕಾಳಿಂಗ ಎರಡು ತಿಂಗಳು ಕಾಲ ನೀರು, ಆಹಾರವಿಲ್ಲದೆ ಕಳೆಯಬೇಕಾಗುತ್ತದೆ.

ಜಗತ್ತಿನ ಮೂರು ಸಾವಿರಕ್ಕೂ ಅಧಿಕ ಹಾವಿನ ಪ್ರಭೇದಗಳಲ್ಲಿ ಕಾಳಿಂಗ ಮಾತ್ರ ಗೂಡು ನಿರ್ಮಿಸುತ್ತದೆ. ಬಿದಿರಿನ ಮೆಳೆಯೊಂದರಲ್ಲಿ ಜಾಗ ಹುಡುಕಿಕೊಂಡು, ತನ್ನ ದೇಹದ ಸುರುಳಿಗಳಲ್ಲಿ ತರಗನ್ನು ಸಾಗಿಸುತ್ತದೆ ಹೆಣ್ಣು ಕಾಳಿಂಗ. ಸಾಲುವಷ್ಟು ಎಲೆಗಳನ್ನು ಹೊಂದಿಸಲು ಅದಕ್ಕೆ ಒಂದು ವಾರ ತಗಲುತ್ತದೆ. ಆನಂತರ ಹುತ್ತದೊಳಗೆ ನುಸುಳಿ ಮೂವತ್ತಕ್ಕೂ ಅಧಿಕ ಮೊಟ್ಟೆಗಳನ್ನು ಇರಿಸುತ್ತದೆ. ಒಂದೋ ಅದು ಎರಡು ತಿಂಗಳು ಮೊಟ್ಟೆಗಳ ಜೊತೆ ಇರುತ್ತದೆ, ಇಲ್ಲವೇ ಮೊಟ್ಟೆಗಳನ್ನು ಅವಷ್ಟಕ್ಕೆ ಬಿಟ್ಟು ತೆರಳುತ್ತದೆೆ. ಮೊಟ್ಟೆಗಳಿಗಾಗಿ ಮುಂಗುಸಿ, ಹಂದಿ, ಪುನುಗಿನ ಬೆಕ್ಕು, ಬೇರೆ ಹಾವುಗಳು ಕಾಯುತ್ತಿರುತ್ತವೆ. ಆದರೆ, ನಾಗಿಣಿ ರಚಿಸಿದ ಕೊಠಡಿಯನ್ನು ಪ್ರವೇಶಿಸುವುದು ಅಷ್ಟು ಸುಲಭವಲ್ಲ ಮತ್ತು ಅದರ ವಾಸನೆಯನ್ನು ಗ್ರಹಿಸಿದ ಯಾವುದೇ ಪ್ರಾಣಿ, ಗೂಡಿನ ಕಡೆಗೆ ತಲೆ ಹಾಕುವ ಧೈರ್ಯ ಮಾಡುವುದಿಲ್ಲ.

ಮಳೆಗಾಲದಲ್ಲಿ ಹೆಚ್ಚಾಗುವ ಕಪ್ಪೆ, ಕೀಟಗಳಲ್ಲದೆ, ಬೇರೆ ಪ್ರಭೇದದ ಹಾವಿನ ಮರಿಗಳನ್ನು ಕಾಳಿಂಗದ ಮರಿಗಳು ಬೇಟೆಯಾಡುತ್ತವೆ. ಇದೇ ಹೊತ್ತಿನಲ್ಲಿ ಹೆಚ್ಚಿನವು ಬೇರೆ ಮಾಂಸಾಹಾರಿಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಒಂದೇ ಒಂದು ಉಳಿದುಕೊಂಡು ಪ್ರಬುದ್ಧವಾದರೂ ಸಾಕು; ಭಾರೀ ಶ್ರಮಪಟ್ಟು ಗೂಡು ಕಟ್ಟಿ, ಅಂದಾಜು ಎರಡು ತಿಂಗಳು ಆಹಾರ-ನೀರು ಇಲ್ಲದೆ ಹೆಣಗಿದ ಹೆಣ್ಣು ಕಾಳಿಂಗದ ಶ್ರಮ ಸಾರ್ಥಕವಾಗುತ್ತದೆ.

Similar News