ಎಲಾನ್ ಮಸ್ಕ್‌ರನ್ನು ಪ್ರತಿವಾದಿಯನ್ನಾಗಿಸಲು ಕೋರಿದ್ದ ಅರ್ಜಿದಾರರಿಗೆ 25,000 ದಂಡ ಹೇರಿದ ದಿಲ್ಲಿ ಹೈಕೋರ್ಟ್

ಟ್ವಿಟರ್ ಖಾತೆ ಅಮಾನತು ಪ್ರಶ್ನಿಸಿದ್ದ ಪ್ರಕರಣ

Update: 2022-11-04 13:01 GMT

ಹೊಸದಿಲ್ಲಿ: ಟ್ವಿಟರ್ (Twitter) ಖಾತೆಯನ್ನು ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿದ ಪ್ರಕರಣದಲ್ಲಿ ಟ್ವಿಟರ್ ಮಾಲಿಕ ಎಲಾನ್ ಮಸ್ಕ್‌ರನ್ನು (Elon Musk) ಪ್ರತಿವಾದಿಯನ್ನಾಗಿ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದ ದಿಲ್ಲಿ ಉಚ್ಚ ನ್ಯಾಯಾಲಯವು Delhi High Court), ಅರ್ಜಿದಾರರಿಗೆ 25,000 ರೂ.ದಂಡವನ್ನು ವಿಧಿಸಿದೆ.

ತಪ್ಪು ಕಲ್ಪನೆಯಿಂದ ಅರ್ಜಿಯನ್ನು ಸಲ್ಲಿಸಲಾಗಿದೆ. ಬಾಕಿಯಿರುವ ಪ್ರಕರಣದಲ್ಲಿ ಟ್ವಿಟರ್‌ನ್ನು ಈಗಾಗಲೇ ಪ್ರತಿನಿಧಿಸಿರುವಾಗ ಈ ಅರ್ಜಿಯನ್ನು ಸಲ್ಲಿಸಿರುವ ಅಗತ್ಯವಿರಲಿಲ್ಲ. ಅರ್ಜಿದಾರ ಡಿಂಪಲ್ ಕೌಲ್ ಅವರಿಗೆ 25,000 ರೂ.ದಂಡದೊಂದಿಗೆ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾ.ಯಶವಂತ ಶರ್ಮಾ ಅವರು ತನ್ನ ಆದೇಶದಲ್ಲಿ ಹೇಳಿದರು.

ತನ್ನ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಪ್ರಕರಣ ದಾಖಲಿಸಿರುವ ಡಿಂಪಲ್ ಕೌಲ್, ತನ್ನ ಅಹವಾಲನ್ನು ಆಲಿಸದೆ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ವಾದಿಸಿದ್ದಾರೆ. ಅರ್ಜಿಯು ಮಸ್ಕ್ ಅವರ ಟ್ವೀಟ್‌ಗಳನ್ನು ನೆಚ್ಚಿಕೊಂಡಿತ್ತು.

ವಾಕ್ ಸ್ವಾತಂತ್ರದ ಕುರಿತು ಮಸ್ಕ್ ತೀರ ವಿಭಿನ್ನ ನಿಲುವು ಹೊಂದಿದ್ದಾರೆ. ಅಭಿಪ್ರಾಯಗಳು ಎಲ್ಲಿಯವರೆಗೆ ದೇಶದ ಕಾನೂನನ್ನು ಉಲ್ಲಂಘಿಸುವುದಿಲ್ಲವೋ ಅಲ್ಲಿಯವರೆಗೆ ಟ್ವಿಟರ್ ಕೂಡ ಅದನ್ನು ಮೊಟಕುಗೊಳಿಸಬಾರದು ಎನ್ನುವುದು ಅವರ ಅಭಿಪ್ರಾಯವಾಗಿದೆ ಎಂದು ವಕೀಲ ಮುಕೇಶ್ ಶರ್ಮಾರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ವಾದಿಸಲಾಗಿತ್ತು.
 
ಕೇಂದ್ರವು ಕೌಲ್ ಅರ್ಜಿಗೆ ಉತ್ತರವಾಗಿ ಈ ಹಿಂದೆ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳು ಖಾತೆಗೆ ಸಂಬಂಧಿಸಿದಂತೆ ಯಾವುದೇ ಕ್ರಮವನ್ನು ಕೈಗೊಳ್ಳುವ ಮುನ್ನ ಬಳಕೆದಾರರಿಗೆ ನೋಟಿಸ್‌ನ್ನು ನೀಡಬೇಕು ಮತ್ತು ಇದನ್ನು ಪಾಲಿಸುವಲ್ಲಿ ವೈಫಲ್ಯವು 2021ರ ಮಾಹಿತಿ ತಂತ್ರಜ್ಞಾನ ನಿಯಮಗಳ ಉಲ್ಲಂಘನೆಯಾಗಬಹುದು ಎಂದು ತಿಳಿಸಿತ್ತು. 

ಇದನ್ನೂ ಓದಿ: ಈಶ್ವರಪ್ಪ ಫೋಟೊ ಇರುವ ಕರೆನ್ಸಿ ನೋಟು ಬಿಡುಗಡೆ ಮಾಡಿದ ಕಾಂಗ್ರೆಸ್‌!

Similar News