ಭಾರತದಲ್ಲಿನ ಉದ್ಯೋಗಿಗಳನ್ನು ಸಾಮೂಹಿಕ ವಜಾಗೊಳಿಸಿದ ಟ್ವಿಟರ್:‌ ವರದಿ

#OneTeam ಹ್ಯಾಶ್‌ಟ್ಯಾಗ್‌ ಬಳಸಿ ಹತಾಷೆ ಹೊರಹಾಕಿದ ಟ್ವಿಟರ್‌ ಉದ್ಯೋಗಿಗಳು

Update: 2022-11-04 16:06 GMT

ಹೊಸದಿಲ್ಲಿ: ಭಾರತದಲ್ಲಿನ ತನ್ನ ಉದ್ಯೋಗಿಗಳನ್ನು ಟ್ವಿಟರ್‌ ಸಂಸ್ಥೆಯು ಸಾಮೂಹಿಕ ವಜಾ ಮಾಡುವುದಾಗಿ ಘೋಷಿಸಿದ್ದು, ಈ ಭಾರೀ ಉದ್ಯೋಗ ಕಡಿತವು ಇಂಜಿನಿಯರ್‌ಗಳು ಸೇರಿದಂತೆ ಸಂಪೂರ್ಣ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದ ಎಲ್ಲಾ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರಿದೆ ಎಂದು ಮೂಲಗಳನ್ನುಲ್ಲೇಖಿಸಿ ndtv.com ವರದಿ ಮಾಡಿದೆ. 
 
ಟ್ವಿಟರ್‌ ನ ಹೊಸ ಮಾಲಕ ಎಲಾನ್ ಮಸ್ಕ್ (Elon Musk) ಆದೇಶಿಸಿದ 'ಜಾಗತಿಕ ಪುನರ್ರಚನೆಯ' ಭಾಗವಾಗಿ ಈ ಉದ್ಯೋಗ ಕಡಿತಗಳು ನಡೆದಿವೆ.

ಕೆಲಸ ಕಳೆದುಕೊಂಡವರ ಸಂಪೂರ್ಣ ಸಂಖ್ಯೆ ತಕ್ಷಣಕ್ಕೆ ಲಭ್ಯವಿಲ್ಲದಿದ್ದರೂ, ವಿಸರ್ಜಿಸಲ್ಪಟ್ಟ ಎರಡು ಇಲಾಖೆಗಳನ್ನು ಹೊರತುಪಡಿಸಿ, ಮಾರಾಟ, ಎಂಜಿನಿಯರಿಂಗ್ ಮತ್ತು ಪಾಲುದಾರಿಕೆ ವಿಭಾಗಗಳಲ್ಲಿನ ನೌಕರರ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ.

ಅದಾಗ್ಯೂ, ಮಾರಾಟ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲವರನ್ನು ಉಳಿಸಿಕೊಳ್ಳಲಾಗಿದೆ ಎಂದು ಮೂಲವೊಂದು ತಿಳಿಸಿದೆ.

ಟ್ವಿಟರ್‌ನ ಸಿಇಒ ಪರಾಗ್ ಅಗರವಾಲ್ ಸೇರಿದಂತೆ ಇತರ ಉನ್ನತ ಕಾರ್ಯನಿರ್ವಾಹಕರನ್ನು ಕೆಲಸದಿಂದ ತೆಗೆದುಹಾಕಿದ ಕೆಲವೇ ದಿನಗಳಲ್ಲಿ ಈ ಭಾರೀ ವಜಾಗೊಳಿಸುವಿಕೆಯು ವರದಿಯಾಗಿದೆ. ಎಲಾನ್‌ ಮಸ್ಕ್‌ ನೂತನ ಮಾಲಿಕನಾದಂಗಿನಿಂದ ಟ್ವಿಟರ್‌ನಲ್ಲಿ ಗಂಭೀರ ಬದಲಾವಣೆಗಳಾಗುತ್ತಿದ್ದು, ʼಬ್ಲೂಟಿಕ್‌ ಖಾತೆʼಗಳಿಗೆ  ತಿಂಗಳಿಗೆ $8 ಶುಲ್ಕ ವಿಧಿಸುವ ಬಗ್ಗೆಯೂ ಮಸ್ಕ್‌ ತಿಳಿಸಿದ್ದಾರೆ.

ಕಂಪನಿಯು ಶುಕ್ರವಾರದಂದು ವಿಶ್ವಾದ್ಯಂತ ತನ್ನ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಉದ್ಯೋಗಿಗಳಿಗೆ ಅವರನ್ನು ವಜಾಗೊಳಿಸಲಾಗುತ್ತಿದೆಯೇ ಎಂಬ ಬಗ್ಗೆ ನಂತರದ ದಿನಗಳಲ್ಲಿ ಇಮೇಲ್ ಮೂಲಕ ತಿಳಿಸಲಾಗುವುದು ಎನ್ನಲಾಗಿದೆ.

"ಟ್ವಿಟರ್ ಅನ್ನು ಆರೋಗ್ಯಕರ ಹಾದಿಯಲ್ಲಿ ಇರಿಸುವ ಪ್ರಯತ್ನದಲ್ಲಿ, ನಾವು ಶುಕ್ರವಾರ ನಮ್ಮ ಜಾಗತಿಕ ಉದ್ಯೋಗಿಗಳನ್ನು ಕಡಿಮೆ ಮಾಡುವ ಕಷ್ಟಕರ ಪ್ರಕ್ರಿಯೆಯ ಮೂಲಕ ಹೋಗುತ್ತೇವೆ" ಎಂದು ಗುರುವಾರ ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್ ನಲ್ಲಿ ತಿಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಈ ವಾರ ರಾಯಿಟರ್ಸ್ ಪರಿಶೀಲಿಸಿದ ಆಂತರಿಕ ಯೋಜನೆಗಳ ಪ್ರಕಾರ, ವೆಚ್ಚ ಕಡಿತಗೊಳಿಸುವ ಸಲುವಾಗಿ ಮಸ್ಕ್ ಅವರು ಸುಮಾರು 3,700 ಟ್ವಿಟರ್ ಸಿಬ್ಬಂದಿಯನ್ನು (ಅಂದರೆ ಅರ್ಧದಷ್ಟು ಉದ್ಯೋಗಿಗಳನ್ನು) ಕೆಲಸದಿಂದ ತೆಗೆದುಹಾಕಲು ಬಯಸುತ್ತಿದ್ದಾರೆ. 

ಟ್ವಿಟರ್ ಉದ್ಯೋಗಿಗಳು #OneTeam ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಜಾಗೊಳಿಸುವಿಕೆಯ ಬಗ್ಗೆ ತಮ್ಮ ಹತಾಶೆಯನ್ನು ಹೊರಹಾಕಿದ್ದಾರೆ ಎಂದು ndtv ವರದಿ ಮಾಡಿದೆ.

Similar News