ದಿಲ್ಲಿ ನ್ಯಾಯಾಲಯದಿಂದ ಪಿಎಫ್ಐ ಸದಸ್ಯನಿಗೆ ಮಧ್ಯಂತರ ಜಾಮೀನು

Update: 2022-11-05 17:29 GMT

ಹೊಸದಿಲ್ಲಿ, ನ. 5: ನಿಷೇಧಿತ ಸಂಘಟನೆ ಪಿಎಫ್ಐ(PFI)ನ ಓರ್ವ ಬಂಧಿತ ಸದಸ್ಯನಿಗೆ ದಿಲ್ಲಿಯ ನ್ಯಾಯಾಲಯವೊಂದು ಶುಕ್ರವಾರ 60 ದಿನಗಳ ಮಧ್ಯಂತರ ಜಾಮೀನು ನೀಡಿದೆ. ಆರೋಪಿಯ ಪತ್ನಿ ಗರ್ಭಿಣಿ ಎಂಬ ಅಂಶ ಹಾಗೂ ನವೆಂಬರ್ ಮಧ್ಯ ಭಾಗದಲ್ಲಿ ಹೆರಿಗೆಯಾಗುವ ಸಾಧ್ಯತೆಯನ್ನು ಪರಿಗಣಿಸಿ ಆತನಿಗೆ ಜಾಮೀನು ಮಂಜೂರಾಗಿದೆ.


ಆರೋಪಿ ಸೈಯದ್ ಸಲಾವುದ್ದೀನ್(Syed Salahuddin) ನನ್ನು ದಿಲ್ಲಿ ಪೊಲೀಸರು ಕಳೆದ ತಿಂಗಳು ಕಾನುನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಎಂಬ ಕಠಿಣ ಕಾನೂನಿನಡಿ ಬಂಧಿಸಿದ್ದರು.
ಆರೋಪಿಯ ಪತ್ನಿ ಗರ್ಭಿಣಿ ಹಾಗೂ ನವೆಂಬರ್ 16/17ರಂದು ಹೆರಿಗೆಯಾಗುವ ನಿರೀಕ್ಷೆಯಿದೆ ಎಂಬ ಪರಿಶೀಲನಾ ವರದಿಯನ್ನು ತನಿಖಾ ಕಚೇರಿಯು ನೀಡಿದೆ ಎಂದು ತನ್ನ ಜಾಮೀನು ಆದೇಶದಲ್ಲಿ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಸಂಜಯ್ ಖನಗ್ವಾಲ್ ಹೇಳಿದ್ದಾರೆ.


ಆರೋಪಿಯ ಕುಟುಂಬದಲ್ಲಿ ಯಾರ್ಯಾರಿದ್ದಾರೆ ಎನ್ನುವುದನ್ನೂ ಪರಿಶೀಲಿಸಲಾಗಿದೆ. ಆರೋಪಿಯ ತಂದೆಗೆ ಸುಮಾರು 70 ವರ್ಷವಾಗಿದ್ದು, 40% ಅಂಗವೈಕಲ್ಯ ಹೊಂದಿದ್ದಾರೆ ಎಂಬುದಾಗಿ ಪರಿಶೀಲನಾ ವರದಿ ತಿಳಿಸಿದೆ. ತಂದೆಯಲ್ಲದೆ, ಆರೋಪಿಯು ಒಂದು ವರ್ಷ ಮತ್ತು ಮೂರು ವರ್ಷದ ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಕುಟುಂಬದಲ್ಲಿ ಆರೋಪಿಯ ಅತ್ತಿಗೆ ಇದ್ದರೂ, ಅವರಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ ಎಂಬುದಾಗಿ ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.

Similar News