ನಾಯಿಗೆ ಆಹಾರ ನೀಡಲು ತಡ ಮಾಡಿದ ಸೋದರ ಸಂಬಂಧಿಯನ್ನು ಥಳಿಸಿ ಕೊಂದ ಯುವಕ

Update: 2022-11-06 13:33 GMT

ಪಾಲಕ್ಕಾಡ್: ಸಾಕಿದ ನಾಯಿಗೆ ಆಹಾರ ನೀಡಲು ವಿಳಂಬ ಮಾಡಿದ ಕಾರಣಕ್ಕೆ ತನ್ನ ಸೋದರ ಸಂಬಂಧಿಯನ್ನು ಥಳಿಸಿ ಕೊಂದ ಆರೋಪದ ಮೇಲೆ 27 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪಾಲಕ್ಕಾಡ್ ಪೊಲೀಸರು ತಿಳಿಸಿದ್ದಾರೆ.

ತನ್ನ ಸೋದರಸಂಬಂಧಿ 21 ವರ್ಷದ ಅರ್ಷದ್‌‌ ಎಂಬ ಯುವಕನನ್ನು ಹೊಡೆದು ಕೊಂದಿದ್ದಕ್ಕಾಗಿ ಹಕೀಮ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಘಟನೆ ಗುರುವಾರ ರಾತ್ರಿ ನಡೆದಿದೆ.

ಘಟನೆಯ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ನಮಗೆ ಮಾಹಿತಿ ನೀಡಿದರು. ಯುವಕನನ್ನು ಕರೆ ತರುವಾಗಲೇ ಆತ ಮೃತಪಟ್ಟಿದ್ದ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿರುವುದಾಗಿ ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.

ಹಕೀಂನನ್ನು ಶನಿವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ, ಹಕೀಮ್ ಅರ್ಷದ್ ಮೇಲೆ ಪದೇ ಪದೇ ಹಲ್ಲೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

 "ಹಕೀಮ್ ಇಲ್ಲಿ ವ್ಯಾಪಾರವನ್ನು ಹೊಂದಿದ್ದು, ಅವನೊಂದಿಗೆ ಅರ್ಷದ್ ಕೂಡ ಕೆಲಸ ಮಾಡುತ್ತಿದ್ದನು. ಇಬ್ಬರೂ ಒಟ್ಟಿಗೆ ಇರುತ್ತಿದ್ದರು. ಹಕೀಮ್ ಅರ್ಷದ್ ಮೇಲೆ ಈ ಹಿಂದೆಯೂ ಹಲ್ಲೆ ನಡೆಸಿದ್ದ.  ಆದರೆ, ಈ ಬಾರಿ ಅದು ಮಾರಣಾಂತಿಕವಾಗಿದೆ," ಎಂದು ಪೊಲೀಸರು ತಿಳಿಸಿದ್ದಾರೆ.

ತಡವಾಗಿ ನಾಯಿಗೆ ಆಹಾರ ನೀಡಿದ್ದಕ್ಕಾಗಿ ಹಕೀಮ್ ಹರ್ಷದ್‌ನನ್ನು ಹೊಡೆಯಲು ಪ್ರಾರಂಭಿಸಿದ್ದ. ನಾಯಿಯ ಬೆಲ್ಟ್ ಮತ್ತು ಕೆಲವು ಕೋಲುಗಳನ್ನು ಬಳಸಿ ಅರ್ಷದ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಕೀಮ್ ಆರಂಭದಲ್ಲಿ ಹರ್ಷದ್ ಮೇಲ್ಛಾವಣಿಯಿಂದ ಬಿದ್ದಿದ್ದಾನೆ ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದನು. ಆದರೆ, ಅರ್ಷದ್‌ನ ದೇಹದಲ್ಲಿ ಹಲವಾರು ಗಾಯಗಳ ಗುರುತುಗಳನ್ನು ಕಂಡು ಸಂದೇಹ ಬಂದು, ಆಸ್ಪತ್ರೆಯವರು ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Similar News