ನೋಟು ನಿಷೇಧದ ‘ಮಹಾ ವೈಫಲ್ಯ’ವನ್ನು ಪ್ರಧಾನಿ ಇನ್ನೂ ಒಪ್ಪಿಕೊಂಡಿಲ್ಲ: ಮಲ್ಲಿಕಾರ್ಜುನ ಖರ್ಗೆ

Update: 2022-11-07 16:47 GMT

ಹೊಸದಿಲ್ಲಿ,ನ.7: ಬಿಜೆಪಿ ನೇತೃತ್ವದ ಸರಕಾರದ 2016ರ ನೋಟು ನಿಷೇಧ ನಿರ್ಧಾರ ‘ಮಹಾ ವೈಫಲ್ಯ’('The Great Failure')ವಾಗಿತ್ತು ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಇನ್ನೂ ಒಪ್ಪಿಕೊಂಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjuna Kharge) ಸೋಮವಾರ ಹೇಳಿದ್ದಾರೆ.

ಈ ಬಗ್ಗೆ ಟ್ವೀಟಿಸಿರುವ ಖರ್ಗೆ,ಭಾರತೀಯ ನಾಗರಿಕರ ಬಳಿ ಈಗ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕರೆನ್ಸಿ ನೋಟುಗಳಿವೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ್ದಾರೆ.

ನೋಟು ನಿಷೇಧ ಕ್ರಮವು ದೇಶವನ್ನು ಕಪ್ಪುಹಣದ ಹಾವಳಿಯಿಂದ ಮುಕ್ತಗೊಳಿಸಲಿದೆ ಎಂಬ ಭರವಸೆಯನ್ನು ನೀಡಲಾಗಿತ್ತು. ಆದರೆ ಅದು ಉದ್ಯಮಗಳನ್ನು ನಾಶಗೊಳಿಸಿತ್ತು,ಉದ್ಯೋಗಗಳ ನಷ್ಟಕ್ಕೆ ಕಾರಣವಾಗಿತ್ತು. ಈ ‘ಮಾಸ್ಟರ್ ಸ್ಟ್ರೋಕ್ ’('Master Stroke')ನ ಆರುವರ್ಷಗಳ ಬಳಿಕ ಸಾರ್ವಜನಿಕರ ಬಳಿಯಿರುವ ನಗದು ಹಣ 2016ಕ್ಕೆ ಹೋಲಿಸಿದರೆ ಶೇ.72ರಷ್ಟು ಹೆಚ್ಚಾಗಿದೆ  ಎಂದು ಖರ್ಗೆ ಟ್ವೀಟ್ನಲ್ಲಿ ತಿಳಿಸಿದ್ದಾರೆ.

ದೇಶದ ನಾಗರಿಕರ ಬಳಿಯಿರುವ ಕರೆನ್ಸಿ ನೋಟುಗಳ ಮೌಲ್ಯ ಅಕ್ಟೋಬರ್ನಲ್ಲಿ 30.88 ಲ.ಕೋ.ರೂ.ಗಳ ಹೊಸ ಎತ್ತರವನ್ನು ತಲುಪಿದೆ ಎಂದು ಆರ್ಬಿಐ ಕಳೆದ ವಾರ ಬಿಡುಗಡೆಗೊಳಿಸಿರುವ ವರದಿಯು ತೋರಿಸಿದೆ.

ನೋಟು ನಿಷೇಧಕ್ಕೆ ಕೆಲವೇ ದಿನಗಳ ಮುನ್ನ 2016,ನ.4ರಂದು ಅಂತ್ಯಗೊಂಡಿದ್ದ 15 ದಿನಗಳ ಅವಧಿಯಲ್ಲಿ ಜನರ ಬಳಿ 17.7 ಲ.ಕೋ.ರೂ.ನಗದು ಹಣವಿದ್ದರೆ ಇದು 2017,ಅ.21ರಂದು ಶೇ.71.84ರಷ್ಟು ಏರಿಕೆಯಾಗಿದೆ.

ಮೋದಿ ನ.8,2016ರಂದು 1000 ರೂ. ಮತ್ತು 500 ರೂ ಮುಖಬೆಲೆಗಳ ನೋಟುಗಳ ರದ್ದತಿಯನ್ನು ಘೋಷಿಸಿದ್ದರು. ಈ ಕ್ರಮದ ಘೋಷಿತ ಉದ್ದೇಶಗಳಲ್ಲಿ ನಗದು ಹಣದ ಬಳಕೆಯನ್ನು ತಗ್ಗಿಸಿ, ಡಿಜಿಟಲ್ ವಹಿವಾಟುಗಳ ಬಳಕೆಯನ್ನು ಹೆಚ್ಚಿಸುವುದು ಒಂದಾಗಿತ್ತು.

Similar News