ಮೀಸಲಾತಿ ವ್ಯವಸ್ಥೆ ಸದಾ ಮುಂದುವರಿಯಲು ಸಾಧ್ಯವಿಲ್ಲ, ಅದಕ್ಕೊಂದು ಸಮಯಮಿತಿ ನಿಗದಿಪಡಿಸಬೇಕು ಎಂದ ಸುಪ್ರೀಂಕೋರ್ಟ್‌

Update: 2022-11-08 10:35 GMT

ಹೊಸದಿಲ್ಲಿ: ಸಾಮಾನ್ಯ ವಿಭಾಗದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮೀಸಲಾತಿಗೆ ಒಪ್ಪಿಗೆ ಸೂಚಿಸಿ ಇನ್ನೊಂದು ವಿಧದ ಮೀಸಲಾತಿಗೆ  ಸೋಮವಾರ ಅನುಮೋದನೆ ನೀಡುವ ವೇಳೆ ಸುಪ್ರೀಂ ಕೋರ್ಟ್‌ ಇನ್ನೊಂದು ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಮೀಸಲಾತಿ ವ್ಯವಸ್ಥೆಯು ಅನಿಯಮಿತ ಕಾಲಾವಧಿಯ ತನಕ ಮುಂದುವರಿಯಲು ಅನುಮತಿಸಬಾರದು ಮತ್ತು ಅದಕ್ಕೊಂದು ಸಮಯಮಿತಿ ನಿಗದಿಪಡಿಸಿ ಮುಂದೆ ಜಾತಿರಹಿತ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ದಾರಿಮಾಡಿಕೊಡಬೇಕಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಒಂದು ಕಾಲಮಿತಿಯ ನಂತರ ಈ ರೀತಿಯ ಆದ್ಯತೆ ನೀಡುವ ಕ್ರಮವನ್ನು ಕೈಬಿಡಬೇಕು ಎಂದು ದುರ್ಬಲ ವರ್ಗಗಳವರಿಗೆ ಮೀಸಲಾತಿ ಒದಗಿಸಲು 103 ನೇ ಸಂವಿಧಾನಿಕ ತಿದ್ದುಪಡಿಯ ಕಾನೂನುಬದ್ಧತೆಯನ್ನು ಎತ್ತಿ ಹಿಡಿಯುವ ವೇಳೆ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ಡಿವಾಲ ಹೇಳಿದರು.

ʻʻಸಂವಿಧಾನ ರಚನಾಕಾರರ ದೂರದೃಷ್ಟಿಯಂತೆ, 1985 ರಲ್ಲಿ ಸಂವಿಧಾನಿಕ ಪೀಠ ಮುಂದಿಟ್ಟ ಪ್ರಸ್ತಾವನೆಯಂತೆ ಹಾಗೂ  ಸಂವಿಧಾನ ರಚನೆಯ 50 ವರ್ಷಗಳ ಪೂರ್ಣಗೊಳಿಸುವಿಕೆ ಸಂದರ್ಭದ  ಇಚ್ಛೆಯಾನುಸಾರ ಮೀಸಲಾತಿ ನೀತಿಗೆ ಒಂದು ಸಮಯ ಮಿತಿ ಇರಬೇಕು. ಆದರೆ ಅದು ಇನ್ನೂ ಸಾಧ್ಯವಾಗಿಲ್ಲ, ಅಂದರೆ ದೇಶ ತನ್ನ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದ ವರ್ಷದಲ್ಲೂ ಸಾಧ್ಯವಾಗಿಲ್ಲ. ಮೀಸಲಾತಿ ವ್ಯವಸ್ಥೆಗೆ ದೇಶದ ಪುರಾತನ ಜಾತಿ ವ್ಯವಸ್ಥೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಪರಿಶಿಷ್ಟ ಜಾತಿ,ವರ್ಗಗಳು ಮತ್ತು ಇತರ ಹಿಂದುಳಿದ ವರ್ಗಗಳು ಹಿಂದಿನಿಂದಲೂ ಎದುರಿಸಿದ್ದ ಅನ್ಯಾಯವನ್ನು ಸರಿಪಡಿಸಲು ಅದನ್ನು ಜಾರಿಗೊಳಿಸಲಾಗಿತ್ತು. ದೇಶದ 75ನೇ ಸ್ವಾತಂತ್ರ್ಯ ವರ್ಷದ ಕೊನೆಯಲ್ಲಿ ನಾವು ಈ ವ್ಯವಸ್ಥೆಯನ್ನು ಸಮಾಜದ ಹಿತದೃಷ್ಟಿಯಿಂದ  ಪರಾಮರ್ಶಿಸಬೇಕಿದೆ,ʼʼ ಎಂದು ಜಸ್ಟಿಸ್‌ ತ್ರಿವೇದಿ ಹೇಳಿದರು.

ʻʻಮೀಸಲಾತಿಯೆಂಬುದು  ಸಾಮಾಜಿಕ ಮತ್ತು ಆರ್ಥಿಕ ನ್ಯಾಯವೊದಗಿಸುವ ಒಂದು ಸಾಧನ ಆದರೆ ಅದನ್ನು ಸ್ಥಾಪಿತ ಹಿತಾಸಕ್ತಿಯನ್ನಾಗಿಸಲು ಆಸ್ಪದ ನೀಡಬಾರದು. ಅಭಿವೃದ್ಧಿ ಮತ್ತು ಶಿಕ್ಷಣದಿಂದಾಗಿ ಹಿಂದುಳಿದ ವರ್ಗಗಳ ಹಲವು ಸದಸ್ಯರು ಉತ್ತಮ ಉದ್ಯೋಗದೊಂದಿಗೆ ಒಳ್ಳೆಯ ಜೀವನ ನಡೆಸುತ್ತಿದ್ದಾರೆ, ಅಂತಹವರನ್ನು ಹಿಂದುಳಿದ ವರ್ಗಗಳಿಂದ ಕೈಬಿಡಬೇಕು ಹಾಗೂ ಇದರಿಂದ  ನಿಜವಾಗಿಯೂ ಸಹಾಯದ ಅಗತ್ಯವಿರುವ ವರ್ಗಗಳತ್ತ ಗಮನ ಹರಿಸುವುದು ಸಾಧ್ಯವಾಗುತ್ತದೆ,ʼʼ ಎಂದು ಜಸ್ಟಿಸ್‌ ಪರ್ಡಿವಾಲ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Similar News