ನೋಟು ನಿಷೇಧದ ಉದ್ದೇಶ ಈಡೇರಿದೆಯೇ?

Update: 2022-11-09 05:45 GMT

ನೋಟು ನಿಷೇಧದ ಆರು ವರ್ಷಗಳ ಬಳಿಕ ಯುಪಿಐ ಮತ್ತು ಡಿಜಿಟಲ್ ಪಾವತಿಗಳು ಹೆಚ್ಚಿವೆ ಮತ್ತು ನಗರ ಪ್ರದೇಶಗಳಲ್ಲಿಯ ಹೆಚ್ಚಿನ ಕುಟುಂಬಗಳು 2016ಕ್ಕೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವಿಧಾನವನ್ನು ಅಧಿಕವಾಗಿ ಬಳಸುತ್ತಿವೆ. ಆದಾಗ್ಯೂ ನಗದು ಹಣದ ದರ್ಬಾರು ಮುಂದುವರಿದಿದೆ ಎಂದು ಲೋಕಲ್‌ಸರ್ಕಲ್ಸ್ ನಡೆಸಿದ ಸಮೀಕ್ಷೆಯು ತೋರಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಶೇ.44ರಷ್ಟು ಜನರು ಕಳೆದ ಏಳು ವರ್ಷಗಳಲ್ಲಿ ಆಸ್ತಿಗಳನ್ನು ಖರೀದಿಸಿದ್ದು, ಅದಕ್ಕಾಗಿ ಭಾಗಶಃ ಪಾವತಿಯನ್ನು ನಗದುಹಣದ ರೂಪದಲ್ಲಿ ಮಾಡಿದ್ದಾಗಿ ತಿಳಿಸಿದ್ದಾರೆ.
ಚಲಾವಣೆಯಲ್ಲಿದ್ದ ಕಪ್ಪುಹಣವನ್ನು ಹೊರಗೆಳೆಯಲು ಮತ್ತು ಸಮಾಂತರ ಆರ್ಥಿಕತೆಯ ಬೆಳವಣಿಗೆಗೆ ಕಡಿವಾಣ ಹಾಕಲು ಮೋದಿ ಸರಕಾರವು 2016, ನ.8ರಂದು 500 ಮತ್ತು 1,000 ರೂ.ಗಳ ನೋಟುಗಳನ್ನು ರದ್ದುಗೊಳಿಸಿತ್ತು. ಆದರೆ ಈ ಕ್ರಮ ತನ್ನ ಗುರಿಯನ್ನು ಸಾಧಿಸಿದೆಯೇ ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ ಎಂದು ಸಮೀಕ್ಷಾ ವರದಿಯು ಹೇಳಿದೆ.

ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಈಗಲೂ ಜನರು ನಗದು ಹಣವನ್ನು ಪಾವತಿಸುತ್ತಿದ್ದಾರೆ ಅಥವಾ ಸ್ವೀಕರಿಸುತ್ತಿದ್ದಾರೆ. ಅವರು ಈಗಲೂ ಹಾರ್ಡ್ ವೇರ್, ಬಣ್ಣಗಳು ಮತ್ತು ಇತರ ಹಲವರು ಮನೆಬಳಕೆ ಸಾಮಗ್ರಿಗಳು, ಕಚೇರಿ ಪರಿಕರಗಳಂತಹ ಉತ್ಪನ್ನಗಳನ್ನು ನಗದು ಹಣದ ಮೂಲಕವೇ ಖರೀದಿಸುತ್ತಿದ್ದಾರೆ ಮತ್ತು ಮಾರಾಟ ಮಾಡುತ್ತಿದ್ದಾರೆ ಮತ್ತು ಸೂಕ್ತ ರಶೀದಿಗಳಿಲ್ಲದೆ ಸೇವೆಗಳನ್ನು ಒದಗಿಸುತ್ತಿದ್ದಾರೆ ಎಂದು ಸಮೀಕ್ಷೆಯು ಬೆಟ್ಟು ಮಾಡಿದೆ. ಆದರೆ ಕಳೆದ ಆರು ವರ್ಷಗಳಲ್ಲಿ ಹೆಚ್ಚಿನ ಜನರು ಡಿಜಿಟಲ್ ಪಾವತಿ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನೂ ಸಮೀಕ್ಷೆಯು ಒತ್ತಿ ಹೇಳಿದೆ. ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿನ ಜನರು ಮನೆಗಳಲ್ಲಿಯೇ ಇದ್ದು ಖರೀದಿಗಳಿಗಾಗಿ ಮತ್ತು ಇತರ ವಹಿವಾಟುಗಳಿಗಾಗಿ ಆನ್‌ಲೈನ್‌ನ್ನೇ ಅವಲಂಬಿಸಿದ್ದರು ಮತ್ತು ಇದು ಬದಲಾವಣೆಗೆ ವೇಗವನ್ನು ನೀಡಿತ್ತು.
ದೇಶಾದ್ಯಂತದ 342 ಜಿಲ್ಲೆಗಳ 32,000 ಜನರು ಸಮೀಕ್ಷೆಗೆ ಉತ್ತರಿಸಿದ್ದರು. ಕಳೆದ ಏಳು ವರ್ಷಗಳಲ್ಲಿ ಆಸ್ತಿ ಖರೀದಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ 11,499 ಜನರ ಪೈಕಿ ಶೇ.8ರಷ್ಟು ಜನರು ಆಸ್ತಿ ಖರೀದಿಗಾಗಿ ಶೇ.50 ಕ್ಕೂ ಹೆಚ್ಚು ನಗದನ್ನು ಪಾವತಿಸಿದ್ದರೆ, ಶೇ.35ರಷ್ಟು ಜನರು ವಿವರಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದ್ದಾರೆ. ಆಸ್ತಿ ಖರೀದಿಗಾಗಿ ತಾವು ಯಾವುದೇ ನಗದು ಪಾವತಿಸಿಲ್ಲ ಎಂದು ಶೇ.21ರಷ್ಟು ಜನರು ಹೇಳಿಕೊಂಡಿದ್ದರೆ,ಶೇ.15ರಷ್ಟು ಜನರು ಶೇ.30ರಿಂದ ಶೇ.50ರಷ್ಟು ನಗದು ಪಾವತಿಸಿದ್ದಾಗಿ ತಿಳಿಸಿದ್ದಾರೆ. ಶೇ.13ರಷ್ಟು ಜನರು ಶೇ.10ರಿಂದ ಶೇ.30ರಷ್ಟು ಮತ್ತು ಶೇ.8ರಷ್ಟು ಜನರು ಶೇ.10ರಷ್ಟರವರೆಗೆ ನಗದು ಪಾವತಿಸಿದ್ದಾಗಿ ತಿಳಿಸಿದ್ದಾರೆ.
ದುರದೃಷ್ಟವಶಾತ್ ಆಸ್ತಿ ವಹಿವಾಟು ಶೂನ್ಯ ಸುಧಾರಣೆಯನ್ನು ಕಂಡಿರುವ ಕ್ಷೇತ್ರವಾಗಿದೆ, ಹೀಗಾಗಿ ಲಂಚದ ಹಾವಳಿಯೂ ಅತಿಯಾಗಿದೆ. ಆಸ್ತಿಗಳ ಮಾಲಕರು ಪೂರ್ಣ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸಲು ಬಯಸುವುದರಿಂದ ಭೂಮಿ ಅಥವಾ ಆಸ್ತಿಯ ಮೂಲ ವಹಿವಾಟು ಗಣನೀಯವಾಗಿ ನಗದು ರೂಪದಲ್ಲಿಯೇ ಮುಂದುವರಿದಿದೆ ಎಂದು ಲೋಕಲ್ ಸರ್ಕಲ್ಸ್‌ನ ಸ್ಥಾಪಕ ಸಚಿನ್ ಟಪಾರಿಯಾ ವರದಿಯಲ್ಲಿ ಹೇಳಿದ್ದಾರೆ.
ಸಮೀಕ್ಷೆಗೊಳಗಾದ ಹೆಚ್ಚಿನ ಕುಟುಂಬಗಳು ಕಳೆದ 12 ತಿಂಗಳುಗಳಲ್ಲಿ ದಿನಸಿ ಖರೀದಿ, ಮನೆಗೆಲಸದವರ ವೇತನಗಳು, ಪ್ರಯಾಣ ವೆಚ್ಚಗಳು, ವೈಯಕ್ತಿಕ ಸೇವೆಗಳು ಮತ್ತು ಮನೆ ದುರಸ್ತಿಯಂತಹ ಖರ್ಚುಗಳನ್ನು ನಗದಾಗಿ ಪಾವತಿಸಿವೆ ಮತ್ತು ಇದಕ್ಕಾಗಿ ಯಾವುದೇ ರಶೀದಿಗಳನ್ನು ಪಡೆದುಕೊಂಡಿಲ್ಲ.
ಹಲವರು ಈಗಲೂ ಡಿಜಿಟಲ್ ಪಾವತಿ ವಿಧಾನಕ್ಕೆ ಬದಲಾಗಿಲ್ಲ ಎನ್ನುವುದನ್ನು ಇದು ತೋರಿಸುತ್ತಿದೆ. ಹಣ್ಣುಗಳು, ತರಕಾರಿಗಳು ಮತ್ತು ಕೆಲವು ದಿನಸಿ ಸಾಮಗ್ರಿಗಳನ್ನು ಖರೀದಿಸಲು ನಗದು ಪಾವತಿಯೇ ಹೆಚ್ಚು ಅನುಕೂಲಕರ ವಿಧಾನವಾಗಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಟಪಾರಿಯಾ ಹೇಳಿದ್ದಾರೆ.
ಯುಪಿಐನಂತಹ ಸೇವೆಗಳನ್ನು ಬಳಸುತ್ತಿರುವವರ ಸಂಖ್ಯೆ ಈಗಲೂ 25 ಕೋಟಿ ಅಥವಾ ನಮ್ಮ ಜನಸಂಖ್ಯೆಯ ಐದನೇ ಒಂದು ಭಾಗದಷ್ಟಿದೆ. ಮೂರನೇ ಒಂದರಷ್ಟು ಜನಸಂಖ್ಯೆ ಡಿಜಿಟಲ್ ಪಾವತಿ/ಸ್ವೀಕೃತಿ ವಿಧಾನವನ್ನು ಅಳವಡಿಸಿ ಕೊಳ್ಳುವವರೆಗೆ ಚಲಾವಣೆಯಲ್ಲಿರುವ ನಗದು ಹಣ ಕಡಿಮೆಯಾಗುವುದು ಕಷ್ಟ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಎಂಡಿ-ಸಿಇಒ ದಿಲೀಪ ಅಸ್ಬೆ ಅವರು ಕಳೆದ ಜುಲೈನಲ್ಲಿ ಹೇಳಿದ್ದರು.


ಹೆಚ್ಚು ವೌಲ್ಯದ ಮತ್ತು ಚಿಲ್ಲರೆ ವಿಭಾಗಗಳನ್ನು ವ್ಯಾಪಿಸಿರುವ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯು ವರ್ಷದಿಂದ ವರ್ಷಕ್ಕೆ ಪ್ರಮಾಣ ಮತ್ತು ವೌಲ್ಯಕ್ಕೆ ಸಂಬಂಧಿಸಿದಂತೆ ಏರಿಕೆಯನ್ನು ಮುಂದುವರಿಸಿದೆ ಎನ್ನುವುದನ್ನು ಆರ್‌ಬಿಐ ಸೆ.16ರಂದು ಬಿಡುಗಡೆಗೊಳಿಸಿರುವ 'ಆರ್ಥಿಕತೆಯ ಸ್ಥಿತಿ' ವರದಿಯು ಸೂಚಿಸಿದೆ. ಯುಪಿಐ 10.73 ಲ.ಕೋ.ರೂ.ವೌಲ್ಯದ 658 ಕೋಟಿ ವಹಿವಾಟುಗಳೊಂದಿಗೆ ತನ್ನ ದಾಖಲೆಯ ಓಟವನ್ನು ಮುಂದುವರಿಸಿದೆ. ಆದರೂ ನಗದು ಹಣ ಈಗಲೂ ತನ್ನ ದರ್ಬಾರನ್ನು ಮುಂದುವರಿಸಿದೆ. ದೇಶದ ನಾಗರಿಕರ ಬಳಿಯಿರುವ ಕರೆನ್ಸಿ ನೋಟುಗಳ ವೌಲ್ಯ ಅಕ್ಟೋಬರ್‌ನಲ್ಲಿ 30.88 ಲ.ಕೋ.ರೂ.ಗಳ ಹೊಸ ಎತ್ತರವನ್ನು ತಲುಪಿದೆ ಎಂದು ಆರ್‌ಬಿಐ ಕಳೆದ ವಾರ ಬಿಡುಗಡೆಗೊಳಿಸಿರುವ ವರದಿಯು ತೋರಿಸಿದೆ. ನೋಟು ನಿಷೇಧಕ್ಕೆ ಕೆಲವೇ ದಿನಗಳ ಮುನ್ನ 2016,ನ.4ರಂದು ಅಂತ್ಯಗೊಂಡಿದ್ದ 15 ದಿನಗಳ ಅವಧಿಯಲ್ಲಿ ಜನರ ಬಳಿ 17.7 ಲ.ಕೋ.ರೂ.ನಗದು ಹಣವಿದ್ದರೆ ಇದು 2017,ಅ.21ರಂದು ಶೇ.71.84ರಷ್ಟು ಏರಿಕೆಯಾಗಿದೆ. ನೋಟು ನಿಷೇಧ ಕ್ರಮದ ಘೋಷಿತ ಉದ್ದೇಶಗಳಲ್ಲಿ ನಗದು ಹಣದ ಬಳಕೆಯನ್ನು ತಗ್ಗಿಸಿ, ಡಿಜಿಟಲ್ ವಹಿವಾಟುಗಳ ಬಳಕೆಯನ್ನು ಹೆಚ್ಚಿಸುವುದು ಒಂದಾಗಿತ್ತು. ಆದರೆ ಈ ಗುರಿ ತಲುಪುವಲ್ಲಿ ನಿರೀಕ್ಷಿತ ಸಾಧನೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.

Similar News