ಸಿಎಎ, ಅಲ್ಪಸಂಖ್ಯಾತರ ಹಕ್ಕುಗಳು, ದ್ವೇಷಭಾಷಣ ಬಗ್ಗೆ ಭಾರತವನ್ನು ಪ್ರಶ್ನಿಸಲಿರುವ ಅಮೆರಿಕ, ಬೆಲ್ಜಿಯಂ: ವರದಿ

Update: 2022-11-09 02:19 GMT

ಹೊಸದಿಲ್ಲಿ: ಭಾರತದಲ್ಲಿ ಪತ್ರಕರ್ತರು ಹಾಗೂ ಮಾನವ ಹಕ್ಕು ಸಂರಕ್ಷಕರನ್ನು ನಡೆಸಿಕೊಳ್ಳುವುದು, ಪೌರತ್ವ ತಿದ್ದುಪಡಿ ಕಾಯ್ದೆ (CAA), ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA) ಮತ್ತು ಕಸ್ಟಡಿ ಚಿತ್ರಹಿಂಸೆ ಮತ್ತಿತರ ವಿಚಾರಗಳು ಜಿನೀವಾದಲ್ಲಿ ಗುರುವಾರ ನಡೆಯುವ ವಿಶ್ವಸಂಸ್ಥೆಯ ಮಾನವಹಕ್ಕು ಮಂಡಳಿಯ ಸಾರ್ವತ್ರಿಕ ನಿಯತಕಾಲಿಕ ಪರಾಮರ್ಶೆ (UPR) ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆ ಇದೆ ಎಂದು thehindu.com ವರದಿ ಮಾಡಿದೆ.

ಮಂಡಳಿಗೆ ಮುಂಚಿತವಾಗಿಯೇ ಸಲ್ಲಿಕೆಯಾಗಿರುವ ಪ್ರಶ್ನೆಗಳ ಪೈಕಿ ಬೆಲ್ಜಿಯಂ(Belgium ), ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು "ಅಲ್ಪಸಂಖ್ಯಾತ ವಿರೋಧಿ" ಎಂದು ಬಣ್ಣಿಸಿದ್ದು, ಈ ಕಾಯ್ದೆಯನ್ನು ವಾಪಾಸು ಪಡೆಯಬಹುದೇ ಎಂದು ಭಾರತವನ್ನು ಪ್ರಶ್ನಿಸಿದೆ. ಅಂತೆಯೇ ದ್ವೇಷ ಭಾಷಣ ಹಾಗೂ ಇಂಟರ್‍ನೆಟ್ ವಿಚಾರಗಳು, ಕರ್ನಾಟಕದ ಹಿಜಾಬ್‍ನಂಥ ವಿಷಯಗಳಲ್ಲಿ ಅಮೆರಿಕ ಆತಂಕ ವ್ಯಕ್ತಪಡಿಸಿದೆ.

"ಭಾರತ ಸರ್ಕಾರವು ಅಲ್ಪಸಂಖ್ಯಾತ ವಿರೋಧಿ ಕಾನೂನುಗಳಾದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಮತಾಂತರ ವಿರೋಧಿ ಕಾಯ್ದೆಗಳನ್ನು ಪರಾಮರ್ಶಿಸಿ ರದ್ದುಪಡಿಸುತ್ತದೆಯೇ ಹಾಗೂ ಕೋಮುಗಲಭೆ ಮತ್ತು ಹಿಂಸೆಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತದೆಯೇ" ಎಂದು ಬೆಲ್ಜಿಯಂ ಪ್ರಶ್ನಿಸಿದೆ.

ದೇಶದಲ್ಲಿ ಮಾನವ ಹಕ್ಕು ಸಂರಕ್ಷಕರು ಹಾಗೂ ಪತ್ರಕರ್ತರು, ನಾಗರಿಕ ಸಮಾಜ ಸೇವಾ ಸಂಸ್ಥೆಗಳು ತಮ್ಮ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತವಾಗಿ ಸಭೆ ಸೇರುವುದು, ಬೆದರಿಕೆ, ಕಿರುಕುಳ, ದ್ವೇಷ ಮತ್ತು ದಾಳಿಗಳ ವಿರುದ್ಧದ ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗಬಹುದೇ ಎಂದೂ ಕೇಳಿದೆ. ಮಂಗಳವಾರದವರೆಗೆ ಅಮೆರಿಕ, ಬೆಲ್ಜಿಯಂ, ಸ್ಪೇನ್, ಪನಾಮಾ, ಕೆನಡಾ ಮತ್ತು ಸ್ಲೋವಾಕಿಯಾ ಭಾರತ ಕೇಂದ್ರಿತ ಅಧಿವೇಶನಕ್ಕೆ ಮುಂಗಡ ಪ್ರಶ್ನೆಗಳನ್ನು ನೀಡಿವೆ.

ಇದನ್ನೂ ಓದಿ: ನೇಪಾಳದಲ್ಲಿ ಭೂಕಂಪ: 6 ಮಂದಿ ಮೃತ್ಯು; ದಿಲ್ಲಿಯಲ್ಲೂ ಕಂಪಿಸಿದ ಭೂಮಿ

Similar News