ಅಹ್ಮದಾಬಾದ್‍ನ ಈ ಒಂದೇ ವಾರ್ಡ್‍ನಿಂದ ಆಯ್ಕೆಯಾಗುವ ಶಾಸಕರು, ಸಂಸದರೆಷ್ಟು ಗೊತ್ತೇ?

Update: 2022-11-09 02:43 GMT

ಅಹ್ಮದಾಬಾದ್: ಅಹ್ಮದಾಬಾದ್ (Ahmedabad) ಮಹಾನಗರ ಪಾಲಿಕೆಯ ಲಂಭಾ (Lambha) ವಾರ್ಡ್‍ನಲ್ಲಿ ಎಲ್ಲರೂ ನಾಯಕರೇ ಆಗಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. 44 ಚದರ ಕಿಲೋಮೀಟರ್ ವಿಸ್ತೀರ್ಣದ ಈ ವಾರ್ಡ್‍ನಿಂದ ಈಗಾಗಲೇ ನಾಲ್ವರು ಸಂಸದರು ಮತ್ತು ಐದು ಮಂದಿ ಶಾಸಕರು ಹಾಗೂ ನಾಲ್ವರು ಪಾಲಿಕೆ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು timesofindia ವರದಿ ಮಾಡಿದೆ.

ಸಮಸ್ಯೆ ಇಷ್ಟಕ್ಕೇ ಮುಗಿಯದೇ ಹಲವು ಮಂದಿ ಪ್ರತಿನಿಧಿಗಳು ಇರುವುದು ವಾರ್ಡ್ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ. ಈ ವಾರ್ಡ್ ಹಲವು ವಿಧಾನಸಭಾ ಕ್ಷೇತ್ರ ಹಾಗೂ ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಹೋಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಯಾರನ್ನು ಸಂಪರ್ಕಿಸಬೇಕು ಎನ್ನುವುದೇ ನಾಗರಿಕರಿಗೆ ತಲೆನೋವಾಗಿದೆ.

ವೆಜಲ್‍ಪುರ, ದಸ್ಕೊರಯ್, ದನಿಲಿಂಬ್ಡಾ, ವಟ್ವಾ ಮತ್ತು ಮಣಿನಗರ ವಿಧಾನಸಭಾ ಕ್ಷೇತ್ರಗಳು ಲಂಭಾ ವ್ಯಾಪ್ತಿಯಲ್ಲಿವೆ. ಅಂತೆಯೇ ಖೇಡಾ, ಗಾಂಧಿನಗರ, ಅಹ್ಮದಾಬಾದ್ ಪಶ್ಚಿಮ ಮತ್ತು ಅಹ್ಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರಗಳು ಕೂಡಾ ಲಂಭಾ ವ್ಯಾಪ್ತಿಯಲ್ಲೇ ಬರುತ್ತವೆ.

ಇಡೀ ಪಾಲಿಕೆಯಲ್ಲಿ ಹೀಗೆ ಕ್ಷೇತ್ರಗಳು ಹರಿದು ಹಂಚಿ ಹೋಗಿರುವ ವಾರ್ಡ್ ತನ್ನದು ಮಾತ್ರ ಎಂದು ಈ ಕ್ಷೇತ್ರದಿಂದ ಆಯ್ಕೆಯಾದ ಪಕ್ಷೇತರ ಸದಸ್ಯ ಕಲು ಭರ್ವಾದ್ ಹೇಳುತ್ತಾರೆ. ಈ ವಿಭಜನೆಗಳು ಭಾರಿ ತೊಂದರೆಗೆ ಕಾರಣವಾಗಿದ್ದು, ಒಂದು ಸಮಸ್ಯೆ ಬಂದಾಗ ಯಾವ ಶಾಸಕರನ್ನು ಭೇಟಿ ಮಾಡಬೇಕು ಎನ್ನುವುದು ಜನತೆಗೆ ತಿಳಿಯುತ್ತಿಲ್ಲ ಎಂದು ವಿವರಿಸಿದರು. ಈ ಗೊಂದಲದ ಜತೆಗೆ ಶಾಸಕರು ಹಾಗೂ ಸಂಸದರ ಅನುದಾನದ ಯೋಜನೆ ಪ್ರಯೋಜನಗಳು ಕೂಡಾ ಇಲ್ಲಿಗೆ ಸಿಗುತ್ತಿಲ್ಲ. ಏಕೆಂದರೆ ಸಣ್ಣ ಭಾಗಗಳು ಎಂದಿಗೂ ಆದ್ಯತೆ ಪಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಸಿಎಎ, ಅಲ್ಪಸಂಖ್ಯಾತರ ಹಕ್ಕುಗಳು, ದ್ವೇಷಭಾಷಣ ಬಗ್ಗೆ ಭಾರತವನ್ನು ಪ್ರಶ್ನಿಸಲಿರುವ ಅಮೆರಿಕ, ಬೆಲ್ಜಿಯಂ

Similar News