ಗುಜರಾತ್: ಕನಿಷ್ಠ 20 ಬಿಜೆಪಿ ಶಾಸಕರಿಗೆ ಈ ಸಲ ಟಿಕೆಟ್ ಇಲ್ಲ

ಚುನಾವಣೆಗೆ ಸ್ಪರ್ಧಿಸದಿರಲು ರೂಪಾನಿ, ಭೂಪೇಂದ್ರ ಸಿನ್ಹಾ ನಿರ್ಧಾರ

Update: 2022-11-09 16:31 GMT

ಅಹ್ಮದಾಬಾದ್, ನ.10:  ಗುಜರಾತ್ ವಿಧಾನಸಭಾ ಚುನಾವಣೆಗೆ ತಾನು ಸ್ಪರ್ಧಿಸುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಗುರುವಾರ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ. ಇನ್ನೋರ್ವ ಹಿರಿಯ ಬಿಜೆಪಿ ನಾಯಕ ಭೂಪೇಂದ್ರ ಸಿನ್ಹಾ ಚೂಡಾಸಮಾ ಅವರು ಕೂಡಾ ಚುನಾವಣಾ ಕಣಕ್ಕಿಳಿಯದಿರಲು ನಿರ್ಧರಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ರೂಜಾ ಸ್ವಕ್ಷೇತ್ರವಾದ ಮೆಹ್ಸಾನಾದಿಂದ ಸ್ಪರ್ಧಿಸಲು ಆಸಕ್ತರಾಗಿಲ್ಲವೆಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಮಧ್ಯೆ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಶಮನಗೊಳಿಸುವ ಯತ್ನವಾಗಿ ಬಿಜೆಪಿಯು ಶೇ.20ರಷ್ಟು ಹಾಲಿ ವಿಧಾನಸಭಾ ಶಾಸಕರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂದು ಕಮಲ ಪಕ್ಷದ ಮೂಲಗಳು ತಿಳಿಸಿವೆ. ಶಾಸಕರ ಗೆಲ್ಲುವ ಸಾಮರ್ಥ್ಯದ ಆಧಾರದಲ್ಲಿ ಮಾತ್ರವೇ ಟಿಕೆಟ್‌ಗಳನ್ನು ನೀಡಲು  ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ (ಸಿಇಸಿ)  ತೀರ್ಮಾನಿಸಿದೆ.

ಸಿಇಸಿ ಸಭೆಯಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಎರಡು ಹಂತದಲ್ಲಿ ಅದನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಹಾಗೂ 5ರಂದು ಚುನಾವಣೆ ನಡೆಯಲಿದೆ. ಈ ಬಾರಿ ಕನಿಷ್ಠ 20 ಶಾಸಕರಿಗೆ ಟಿಕೆಟ್ ದೊರೆಯದಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Similar News