ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಯಾರು ಹೊಣೆ?

Update: 2022-11-10 03:58 GMT

ದೇಶದಲ್ಲಿ ಸಂವಿಧಾನ ಜಾರಿಯಾದ ನಂತರ ಪ್ರಜಾಪ್ರಭುತ್ವಕ್ಕೆ ಸಾಕಷ್ಟು ಮಹತ್ವ ಬಂದು, ನಿರಂತರವಾಗಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕೆಲಸ ಕಳೆದ ಎಪ್ಪತ್ತೈದು ವರ್ಚಗಳಿಂದ ನಡೆಯುತ್ತಾ ಬಂದಿದೆ. ಇದರಲ್ಲಿ ಮತದಾರರ ಪಟ್ಟಿಯನ್ನು ತಯಾರಿಸುವುದು, ಮತದಾರರ ವಯಸ್ಸನ್ನು ಕಡಿಮೆಗೊಳಿಸಿ 18 ವರ್ಷ ಮಾಡಿರುವುದು, ಒಂದೇ ಮತವಿದ್ದರೂ ಒಂದು ಮತದಾನ ಕೇಂದ್ರ ಮಾಡುವುದು, ರಸ್ತೆಯಿಲ್ಲದಿದ್ದರೂ ಮತದಾನದ ದಿನ ಮತಕೇಂದ್ರದ ಸಿಬ್ಬಂದಿ ಆ ಊರಿಗೆ ತೆರಳಿ ಮತದಾನ ಮಾಡಿಸುವುದು, ಪ್ರಜಾಪ್ರಭುತ್ವದ ಸಾರವನ್ನು ಕಟ್ಟಕಡೆಯ ವ್ಯಕ್ತಿಯೂ ಅನುಭವಿಸಬೇಕೆಂದು ಸ್ಥಳೀಯ ಆಡಳಿತ ರಚಿಸಲು ಮಾಡಲಾದ ಸಂವಿಧಾನ ತಿದ್ದುಪಡಿ ಸೇರಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ದೇಶದಲ್ಲಿ ಕೈಗೊಳ್ಳಲಾಗಿದೆ. ಅದರಲ್ಲಿ ವಿಶೇಷವಾಗಿ ಗ್ರಾಮಸ್ವರಾಜ್ಯ ಕಲ್ಪನೆಯ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯು ದೇಶದ ಗ್ರಾಮೀಣ ಭಾಗದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ, ಇದರಿಂದ ದೇಶದಲ್ಲಿ ಗ್ರಾಮ ಪಂಚಾಯತ್‌ಗಳು, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಗಳನ್ನು ರಚಿಸಲು ಸಾಧ್ಯವಾಗಿರುವುದು.

ಆದರೆ, ಕರ್ನಾಟಕ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ. 2016ರ ಚುನಾವಣೆಯಂತೆ ರಾಜ್ಯದಲ್ಲಿ 30 ಜಿಲ್ಲಾ ಪಂಚಾಯತ್‌ಗಳು ಹಾಗೂ 176 ತಾಲೂಕು ಪಂಚಾಯತ್‌ಗಳು ಅಸ್ತಿತ್ವದಲ್ಲಿವೆ, ಆದರೆ ಇವುಗಳಿಗೆ ಕಳೆದ ಎರಡು ವರ್ಷಗಳಿಂದ ಚುನಾವಣೆಗಳು ನಡೆಯದೇ ಇರುವುದರಿಂದ ಜನ ಸ್ಥಳೀಯ ಆಡಳಿತವನ್ನೇ ಮರೆಯುವಂತೆ ಮಾಡಲಾಗುತ್ತಿದೆ ಎನಿಸುತ್ತಿದೆ. ರಾಜ್ಯದಲ್ಲಿ ಕೆಲವು ನೂತನ ತಾಲೂಕುಗಳು ಸೇರಿದಂತೆ ಸುಮಾರು 229 ತಾಲೂಕು ಪಂಚಾಯತ್‌ಗಳು ಅಸ್ತಿತ್ವದಲ್ಲಿವೆ. ಒಟ್ಟು 3,793 ಸದಸ್ಯರು ಆಯ್ಕೆಯಾಗಲು ಅವಕಾಶವಿದೆ, ಅದೇ ರೀತಿ ನೂತನ ಜಿಲ್ಲೆಯಾಗಿ ವಿಜಯನಗರ ಸೇರ್ಪಡೆಯಾಗಿರುವುದರಿಂದ ಒಟ್ಟು 31 ಜಿಲ್ಲಾ ಪಂಚಾಯತ್‌ಗಳಿಗೆ ಸುಮಾರು 1,082 ಜಿಲ್ಲಾ ಪಂಚಾಯತ್ ಸದಸ್ಯರು ಆಯ್ಕೆಯಾಗಲು ಅವಕಾಶವಿದೆ. 2016ರಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಅವಧಿ ಎಪ್ರಿಲ್ 2021ಕ್ಕೆ ಮುಗಿದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಅವಧಿಗಿಂತ ಮುಂಚೆಯೇ ಮುಗಿಸಿ ಸದಸ್ಯರನ್ನು ಹಿಂದಿನ ಅವಧಿ ಮುಗಿದ ತಕ್ಷಣ ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಆಡಳಿತ ನೀಡುವುದು ವಾಡಿಕೆ. ಆದರೆ, ಎಪ್ರಿಲ್ 2021ಕ್ಕೆ ಅವಧಿ ಮುಗಿದರೂ ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗಳಿಗೆ ಚುನಾವಣೆ ನಡೆಸದೆ ಇರುವುದು ರಾಜ್ಯದ ಜನರ ಸಂವಿಧಾನಬದ್ಧ ಹಕ್ಕು ಕಸಿದುಕೊಂಡಿದೆ ಎಂದೇ ಹೇಳಬಹುದು.

2022ರ ಜನವರಿ ಅವಧಿಯಲ್ಲಿ ಮಹಾರಾಷ್ಟ್ರದ ರಾಹುಲ್ ರಮೇಶ್ ವಾಘ್ ವರ್ಸಸ್ ಮಹಾರಾಷ್ಟ್ರ ರಾಜ್ಯ ಮತ್ತು ಇತರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಮಹಾರಾಷ್ಟ್ರ ಸರಕಾರ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ. 27ರಷ್ಟು ಮೀಸಲಾತಿ ನೀಡುತ್ತಿರುವ ಮಾನದಂಡದ ಬಗ್ಗೆ ಮೂವರು ನ್ಯಾಯಮೂರ್ತಿಗಳ ಪೀಠ ನೀಡಿರುವ ಆದೇಶವನ್ನು ದೇಶದ ಎಲ್ಲಾ ರಾಜ್ಯಗಳು ಅನುಸರಿಸಲು ಮುಂದಾಗಿರುವುದು ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯವೆಂದು ಹೇಳಲಾಗುತ್ತಿದೆ, ಆದರೆ ಕರ್ನಾಟಕದಲ್ಲಿ ಚುನಾವಣೆ ನಿಗದಿತ ಅವಧಿಯಲ್ಲಿ 2021ರ ಎಪ್ರಿಲ್‌ನಲ್ಲೇ ನಡೆದಿದ್ದರೆ ಈ ಸಂಕಷ್ಟ ಇರುತ್ತಿರಲಿಲ್ಲ.

ಇದು ಸರಕಾರ ಮಾಡಿದ ಒಂದು ಬಹುದೊಡ್ಡ ತಪ್ಪು. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ಎರಡು ವರ್ಷಗಳ ಅವಧಿಗೆ ನಡೆಯದೇ ಇರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು, ಇದರ ಬಗ್ಗೆ ರಾಜ್ಯದ ಘಟಾನುಘಟಿ ನಾಯಕರಾರೂ ಚಕಾರ ಎತ್ತದೆ ಇರುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅದರಲ್ಲಿ ವಿಶೇಷವಾಗಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪ್ರಾರಂಭಿಸಿ ಈಗ ವಿಧಾನಸಭೆಯ ಪಡಸಾಲೆಯಲ್ಲಿ ಇರುವ ಬಹುತೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಇದರ ಬಗ್ಗೆ ಮಾತನಾಡದಿರುವುದು ಅವರ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಇದರಿಂದ ರಾಜ್ಯದಲ್ಲಿ ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಇದನ್ನೇ ಸರಕಾರ ಬಯಸುತ್ತಿದೆಯೇ ಎಂದು ಸಹ ಅನುಮಾನ ಬರುವಂತೆ ನಡೆದುಕೊಳ್ಳಲಾಗುತ್ತಿದೆ. ಕರ್ನಾಟಕ ಸರಕಾರ ದೇಶದ ಸಂವಿಧಾನ ನೀಡಿದ ಅವಕಾಶವನ್ನು ರಾಜ್ಯದ ನಾಗರಿಕರಿಗೆ ನೀಡಲು ಹಿಂದೇಟು ಹಾಕುತ್ತಿರುವಂತೆ ಕಾಣುತ್ತಿದೆ. ಸ್ಥಳೀಯ ಆಡಳಿತವು ಜನರಿಗೆ ಹತ್ತಿರವಾಗಿದ್ದು, ಸ್ಥಳೀಯವಾಗಿಯೇ ಹಲವಾರು ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ. ಇದರಿಂದ ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರಿಗೆ ನಂಬಿಕೆ ಹೆಚ್ಚಾಗುತ್ತದೆ. ಅದೇ ರೀತಿ 2018ರ ಸೆಪ್ಟಂಬರ್‌ನಲ್ಲಿ ನಡೆದ 110 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶದ ನಂತರ ಆಡಳಿತ ಮಂಡಳಿ ರಚಿಸಲು ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟಿಸುವಲ್ಲಿ ಮಾಡಿದ್ದ ಸರಕಾರದ ತಪ್ಪಿನಿಂದ ಮತ್ತು ನ್ಯಾಯಾಲಯದಲ್ಲಿ ಸಮರ್ಪಕ ವಾದಮಾಡದೇ ಇರುವುದರಿಂದ 2020 ನವೆಂಬರ್‌ವರೆಗೆ ಚುನಾವಣೆ ನಡೆದ ಎಲ್ಲಾ 110 ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತ ಮಂಡಳಿ ಇಲ್ಲದಂತಾಗಿತ್ತು, ಇದರಿಂದ ಸದಸ್ಯರು ಚುನಾವಣೆಯಲ್ಲಿ ಗೆದ್ದರೂ ಅಧಿಕಾರವಿಲ್ಲದೆ ಪರಿತಪಿಸುವಂತಾಗಿತ್ತು.

ಇದಲ್ಲದೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರ ಆಯ್ಕೆಗೆ ಚುನಾವಣೆ ಎಂದು ನಡೆದರೂ ಅವರ ಅವಧಿ ಪ್ರಾರಂಭವಾಗುವುದು ಆಡಳಿತ ಮಂಡಳಿಯ ಮೊದಲ ಸಭೆಯ ದಿನಾಂಕದಿಂದ ಆಗಿರುವುದರಿಂದ ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೋಗುವ ಸಾಧ್ಯತೆಯಿರುತ್ತದೆ. ಅಲ್ಲದೆ ನಂತರ 2021ರಲ್ಲಿ 57 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗಿರುತ್ತಾರೆ. ಆದರೆ, ಇಲ್ಲಿಯವರೆಗೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ನಿಗದಿಗೊಳಿಸದೆ ಇರುವುದರಿಂದ ಸದಸ್ಯರಿದ್ದರೂ ಅಧಿಕಾರ ಇಲ್ಲದಿರುವುದರಿಂದ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇನ್ನು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣಾ ಅವಧಿ ಮುಗಿದು ಎರಡು ವರ್ಷಗಳಾಗುತ್ತಾ ಬಂದಿದ್ದರೂ ಇಲ್ಲಿಯವರೆಗೆ ಚುನಾವಣೆ ನಡೆಯುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಬೆಂಗಳೂರು ನಗರದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನ ಪರದಾಡುವಂತಾಗಿದೆ, ಕಳೆದ ಎರಡು ವರ್ಷಗಳಿಂದ ಸ್ಥಳೀಯ ಸದಸ್ಯರಿಲ್ಲದೆ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ನಗರವೆಲ್ಲ ಜಲಾವೃತವಾಗಿರುವುದು ಸಹ ಜನ ಕಂಡಿದ್ದಾರೆ. ಇನ್ನೂ ಹಲವು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆದು ಸದಸ್ಯರ ಆಯ್ಕೆ ಪ್ರಕ್ರಿಯೆ ಮುಗಿದಿದ್ದರೂ ಇಲ್ಲಿಯವರೆಗೆ ಮೇಯರ್-ಉಪಮೇಯರ್ ಮೀಸಲಾತಿ ನಿಗದಿಗೊಳಿಸಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆದು, ತಕ್ಷಣ ಮುಂದಿನ ಸದಸ್ಯರು ಅಧಿಕಾರ ಪಡೆಯುವ ಪದ್ಧತಿ ರಾಜ್ಯದಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಈಗಿನ ಸರಕಾರದ ಇಚ್ಛಾಶಕ್ತಿಯ ಕೊರತೆ ಮತ್ತು ಸ್ವಹಿತಾಸಕ್ತಿಯಿಂದಾಗಿ ನಿಗದಿತ ಕಾಲಮಿತಿಯೊಳಗೆ ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಈ ಸಮಸ್ಯೆಯನ್ನು ನಿರಂತರವಾಗಿ ಬಹುತೇಕ ಸ್ಥಳೀಯ ಸಂಸ್ಥೆಗಳು ಎದುರಿಸುತ್ತಿವೆ. ಇದಕ್ಕೆ ಮೂಲ ಕಾರಣ ಆಡಳಿತ ನಡೆಸುತ್ತಿರುವ ಸರಕಾರದ ಸ್ವಹಿತಾಸಕ್ತಿ, ತಮ್ಮ ಪಕ್ಷ ಗೆಲ್ಲಬೇಕೆಂಬ ಅಭಿಲಾಷೆಯಿಂದ ನಿಯಮ ಮೀರಿ ವಾರ್ಡ್‌ಗಳ ವಿಂಗಡಣೆ, ಮೀಸಲಾತಿ ನಿಗದಿಗೊಳಿಸುವುದು, ಅದನ್ನು ಪ್ರಶ್ನಿಸಿ ಸಾರ್ವಜನಿಕರು ನ್ಯಾಯಾಲಯಕ್ಕೆ ಹೋಗುವುದು, ಸರಕಾರಕ್ಕೆ ತಾವು ಮಾಡಿರುವುದನ್ನು ನ್ಯಾಯಾಲಯಗಳಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದೆ ಹಿನ್ನಡೆಯಾಗಿರುವುದು ಸಹ ನಡೆದಿದೆ. ಒಂದು ವೇಳೆ ಸರಕಾರ ನಿಯಮದಂತೆ ಇವನ್ನೆಲ್ಲ ಮಾಡಿದಲ್ಲಿ ದೇಶದ ಯಾವ ನ್ಯಾಯಾಲಯವೂ ಸರಕಾರದ ಆಡಳಿತದಲ್ಲಿ ಮೂಗು ತೂರಿಸಿದ ಉದಾಹರಣೆ ಇಲ್ಲ. ಇಂದು ಸರಕಾರದ ದ್ವಂದ್ವ ನಿಲುವುಗಳ ಕಾರಣದಿಂದ ನ್ಯಾಯಾಲಯ ರಸ್ತೆಯ ಗುಂಡಿ ಮುಚ್ಚಲೂ ಆದೇಶ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ದೇಶದಲ್ಲಿ ಸಂವಿಧಾನಬದ್ಧವಾಗಿ ಲಭ್ಯವಿರುವ ಸ್ಥಳೀಯ ಸರಕಾರಗಳನ್ನು ರಚಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಸರಿಪಡಿಸುವುದು ಮತ್ತು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ವಿಶ್ವಾಸ ಹೆಚ್ಚಿಸಲು ಯಾವುದೇ ಕಾರಣ ಹೇಳದೆ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕಿದೆ.

Similar News