ಹಸ್ರತ್ ಮೊಹಾನಿ: ಕವಿಯ ಪ್ರೇಮ, ಕಲಿಯ ಕೆಚ್ಚು

Update: 2022-11-10 06:57 GMT

‘ಇಂಕ್ವಿಲಾಬ್ ಜಿಂದಾಬಾದ್’ 

ಮೊಹಾನಿಯವರು ಹುಟ್ಟುಹಾಕಿದ ಈ ಘೋಷಣೆ ಜನಪ್ರಿಯವಾದದ್ದು ಭಗತ್ ಸಿಂಗ್ ಬರವಣಿಗೆ ಮತ್ತು ಭಾಷಣಗಳ ಮೂಲಕ. ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್‌ನ ಅಧಿಕೃತ ಘೋಷಣೆಯೂ ಇದಾಗಿತ್ತು. ಇದು ಕಮ್ಯುನಿಸ್ಟ್ ಸಂಘಟನೆಯ ಘೋಷಣೆಯೂ ಹೌದು. ಭಾರತೀಯ ಸ್ವಾತಂತ್ರ್ಯ ಚಳವಳಿಯ ಮೆರವಣಿಗೆಯ ಘೋಷಣೆಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯ ಚಳವಳಿಯನ್ನು ಕುರಿತ ಭಾರತೀಯ ರಾಜಕೀಯ ಕಥಾ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರವಾದ ಭಾವನೆಯು ಈ ಘೋಷಣೆಯನ್ನು ಕೂಗುವ ಪಾತ್ರಗಳಿಂದ ನಿರೂಪಿತವಾಗಿರುವುದನ್ನು ಕಾಣುತ್ತೇವೆ.


‘ಕೃಷ್ಣನ ಕೊಳಲಿನ ಪ್ರತೀ ಸ್ವರದಲ್ಲೂ ಅಮರತ್ವದ ಸಂದೇಶ’ ಎಂಬರ್ಥದ ಸಾಲೊಂದು ಬರುವ ಆ ಉರ್ದು ಪದ್ಯದಲ್ಲಿ ಮಥುರೆಯು ಪ್ರೇಮದ ತಾಣವೆಂಬ ಬಣ್ಣನೆ, ಗೋಕುಲದ ಪ್ರತೀ ಕಣದಲ್ಲೂ ಈ ನೆಲವನ್ನು ಕಾಯುವ ಗುಣವಿದೆಯೆಂಬ ಭರವಸೆ. ಅದೆಂಥದೋ ವೈಭವದ ಭಾಸ ಅನುಭವಿಸುವ ಆರ್ದ್ರಭಾವ. ಕೃಷ್ಣನ ಬಗೆಗಿನ ಇಂತಹ ಪ್ರೇಮವನ್ನು ವ್ಯಕ್ತಪಡಿಸುವ, ಜನ್ಮಾಷ್ಟಮಿ ಆಚರಿಸಲು ಮಥುರೆಗೆ ಹೋಗುತ್ತಿದ್ದ ಆ ಕವಿ, ಹಸ್ರತ್ ಮೊಹಾನಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿರುವ ಸಯ್ಯದ್ ಫಝ್ಲುಲ್ ಹಸನ್.

ರಮ್ಯತೆ ತುಂಬಿದ ಕಾವ್ಯವನ್ನು ಮೊಗೆದು ಬಡಿಸಿದ ಹಸ್ರತ್ ಮೊಹಾನಿ, ಕೆಚ್ಚೆದೆಯ ಮತ್ತು ಪ್ರಖರ ವೈಚಾರಿಕತೆ ಝಳಪಿಸಿದ್ದ ಹೋರಾಟಗಾರರಾಗಿದ್ದರು. ‘ಇಂಕ್ವಿಲಾಬ್ ಜಿಂದಾಬಾದ್’ (ಕ್ರಾಂತಿ ಚಿರಾಯುವಾಗಲಿ) ಎಂಬ ಘೋಷಣೆಯನ್ನು ಹುಟ್ಟುಹಾಕಿದವರು, ಮೊತ್ತಮೊದಲ ಬಾರಿಗೆ ಪೂರ್ಣ ಸ್ವಾತಂತ್ರ್ಯಕ್ಕೆ ಕರೆ ಕೊಟ್ಟಿದ್ದವರೂ ಹಸ್ರತ್ ಮೊಹಾನಿ. ಜನಿಸಿದ್ದು 1875ರಲ್ಲಿ, ಬ್ರಿಟಿಷ್ ಭಾರತದಲ್ಲಿನ ಆಗ್ನೇಯ ಪ್ರಾಂತಕ್ಕೆ ಸೇರಿದ ಉನ್ನಾವೋ ಜಿಲ್ಲೆಯ ಮೊಹಾನ್ ಪಟ್ಟಣದಲ್ಲಿ. ಅವರ ಕಾವ್ಯನಾಮದಲ್ಲಿನ ಮೊಹಾನಿ ಎಂಬುದು ಅವರ ಈ ಹುಟ್ಟಿದೂರನ್ನು ಸೂಚಿಸುತ್ತದೆ.

ಉರ್ದು ಕಾವ್ಯ ಜಗತ್ತಿನ ಮಹತ್ವದ ಹೆಸರು ಹಸ್ರತ್ ಮೊಹಾನಿ. ಮನೆಯಲ್ಲಿಯೇ ಆರಂಭಿಕ ಶಿಕ್ಷಣ ಪಡೆದ ಅವರು ಬಿ.ಎ. ಪದವಿ ಪಡೆದದ್ದು (1903) ಅಲಿಗಡ ವಿಶ್ವವಿದ್ಯಾನಿಲಯದಿಂದ. ಮಾರನೇ ವರ್ಷ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಮತ್ತು ರಾಷ್ಟ್ರೀಯ ಚಳವಳಿಯಲ್ಲಿ ಭಾಗಿಯಾದರು. 1905ರಲ್ಲಿ ಅವರು ತಿಲಕರ ಸ್ವದೇಶಿ ತೆಹ್ರೀಕ್‌ನಲ್ಲೂ ಪಾಲ್ಗೊಂಡರು.

 
1919ರ ಖಿಲಾಫತ್ ಚಳವಳಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದ ಮೊಹಾನಿ, 1921ರಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಹುಟ್ಟುಹಾಕಿದರು. ಅದೇ ವರ್ಷ ಕಾಂಗ್ರೆಸ್‌ನ ಅಹ್ಮದಾಬಾದ್ ಸಮ್ಮೇಳನದಲ್ಲಿ ಅವರು ಪೂರ್ಣ ಸ್ವಾತಂತ್ರ್ಯದ ಪ್ರಸ್ತಾವ ಮುಂದಿಟ್ಟಾಗ ಗಾಂಧಿಯಿಂದ ವಿರೋಧ ವ್ಯಕ್ತವಾಯಿತು. ಇಬ್ಬರೂ ಗೆಳೆಯರೇ ಆಗಿದ್ದರೂ ವಿಚಾರಧಾರೆಗಳಲ್ಲಿ ಭಿನ್ನತೆಯಿತ್ತು.

ಗಾಂಧಿ ಖಾದಿ ಚಳವಳಿ ಆರಂಭಿಸಿದಾಗ ಅದನ್ನು ಮೊಹಾನಿ ವಿರೋಧಿಸಿದರು. ಸ್ವದೇಶಿ ಉದ್ಯಮ ನಶಿಸುತ್ತದೆ ಮತ್ತು ಕಾರ್ಮಿಕರು ಕಷ್ಟಕ್ಕೊಳಗಾಗುತ್ತಾರೆ ಎಂಬುದು ಅವರ ಕಳಕಳಿಯಾಗಿತ್ತು. ಆದರೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವ ಮೊಹಾನಿ ಪ್ರಸ್ತಾವವನ್ನು ಗಾಂಧಿಯವರು ಒಪ್ಪಿದರು.

ಮೊಹಾನಿಯವರ ಈ ಆಲೋಚನೆಯೇ ಮುಂದೆ 10 ವರ್ಷಗಳ ಬಳಿಕ ಗಾಂಧೀಜಿಯವರ ಸ್ವದೇಶಿ ಚಳವಳಿಯಲ್ಲಿ ಸಾಕಾರಗೊಂಡಿತ್ತು. ಅದೊಂದು ಆಗ್ರಹವಾಗಿ ತಮ್ಮ ಮನಸ್ಸಿಗೆ ಬಂದುದನ್ನೂ, ಸ್ವದೇಶಿ ಚಳವಳಿಯಲ್ಲಿ ಅಸಹಕಾರ ಚಳವಳಿಯನ್ನು ಸೇರಿಸಬೇಕಾಯಿತೆಂದೂ ತಮ್ಮ ಆತ್ಮಕಥನದಲ್ಲಿ ಮೊಹಾನಿಯವರ ಬಗ್ಗೆ ಗಾಂಧೀಜಿ ಪ್ರಸ್ತಾಪಿಸಿದ್ದಾರೆ.

ಮೊಹಾನಿಯವರು ಉರ್ದು ವೃತ್ತಪತ್ರಿಕೆಯೊಂದನ್ನು ಆರಂಭಿಸಿದ್ದು ಮತ್ತದನ್ನು ಸ್ವಾತಂತ್ರ್ಯ ಹೋರಾಟದ ಭಾಗವಾಗಿಸಿದ್ದು ಅವರ ಬದುಕಿನಲ್ಲಿನ ಮತ್ತೊಂದು ಮಹತ್ವದ ಘಟ್ಟ. ಇದರಿಂದ ಸಿಟ್ಟಾದ ಬ್ರಿಟಿಷರು 3 ಸಾವಿರ ರೂಪಾಯಿ ದಂಡ ವಿಧಿಸಿದರು. ಆದರೆ ಮೊಹಾನಿಯವರ ಬಳಿಯಿದ್ದ ಆಸ್ತಿಯೆಲ್ಲವನ್ನೂ ಲೆಕ್ಕಹಾಕಿದರೂ ಸಿಕ್ಕಿದ್ದು 50 ರೂಪಾಯಿ ಮಾತ್ರ. ದಂಡ ಕಟ್ಟಲಾಗದ್ದಕ್ಕೆ ಜೈಲುಪಾಲಾಗಬೇಕಾಯಿತು. ಜೈಲಿನಿಂದ ಬಿಡುಗಡೆ ಬಳಿಕವೂ ಅವರು ಬ್ರಿಟಿಷರ ವಿರುದ್ಧ ಬರೆಯುವುದು, ಬ್ರಿಟಿಷರು ಜೈಲುಶಿಕ್ಷೆ ವಿಧಿಸುವುದು ಪುನರಾವರ್ತನೆಯಾಗತೊಡಗಿತು.

ಪ್ರಖರ ಆಲೋಚನೆಯುಳ್ಳವರಾಗಿದ್ದ ಮೊಹಾನಿ, ಮೂಲಭೂತವಾದಿಗಳನ್ನು ಧರ್ಮಾತೀತವಾಗಿ ವಿರೋಧಿಸುತ್ತಿದ್ದರು. ಮೊಹಾನಿಯವರಂತೆ ಸೆಕ್ಯುಲರ್ ಮನಸ್ಸುಳ್ಳವರು ಸ್ವಾತಂತ್ರ್ಯ ಚಳವಳಿಯಲ್ಲಿ ಕಾಣುವುದು ಕೆಲವೇ ಕೆಲವರು ಮಾತ್ರ. 1946ರಲ್ಲಿ ಭಾರತದ ಸಂವಿಧಾನ ರಚನಾ ಸಭೆಗೆ ಅವರು ಉತ್ತರ ಪ್ರದೇಶ ರಾಜ್ಯದಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು.

1947ರಲ್ಲಿ ಭಾರತ ವಿಭಜನೆಯನ್ನು ವಿರೋಧಿಸಿದ ಅವರು, ಭಾರತದಲ್ಲಿಯೇ ಇರಬಯಸಿದರು. ಭಾರತೀಯ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಲ್ಲಿ ಮೊಹಾನಿಯವರೂ ಒಬ್ಬರು. ಲಕ್ನೋದಲ್ಲಿ 1951ರಲ್ಲಿ ನಿಧನರಾದ ಮೊಹಾನಿಯವರ ನೆನಪು ಭಾರತೀಯ ನೆಲದ ಇತಿಹಾಸದಲ್ಲಿ, ಹೋರಾಟದ ಘೋಷದಲ್ಲಿ ಸದಾ ಇದೆ.

Similar News