ಕಣ್ತೆರೆಸೀತೆ ಮೊರ್ಬಿ ದುರಂತ?

ದೇಶದಲ್ಲಿವೆ 5 ಸಾವಿರಕ್ಕೂ ಹೆಚ್ಚು ಶಿಥಿಲ ಸೇತುವೆಗಳು

Update: 2022-11-10 05:16 GMT

ಗುಜರಾತ್‌ನ ನೂರು ವರ್ಷ ಹಳೆಯ ಮೊರ್ಬಿ ಸೇತುವೆ ದುರಂತ 135 ಮಂದಿಯ ಸಾವಿಗೆ ಕಾರಣವಾದ ಬಳಿಕ, ದೇಶಾದ್ಯಂತದ ವಸಾಹತು ಕಾಲದ ನಿರ್ಮಾಣಗಳಾದ ಅಂತಹದೇ ಸಾವಿರಾರು ಸೇತುವೆಗಳು ಎಷ್ಟು ಸುರಕ್ಷಿತ ಎಂದು ಯೋಚಿಸಬೇಕಾದ ಅಗತ್ಯ ಕಾಣಿಸುತ್ತಿದೆ. ಆವತ್ತು ತಮ್ಮೂರಿನ ಸಂಜೆಯ ಸೊಗಸನ್ನು ಆಸ್ವಾದಿಸಲೆಂದು ಮೊರ್ಬಿ ಸೇತುವೆಯ ಮೇಲೆ ಕುಟುಂಬಗಳು ಸೇರಿದ್ದ ಹೊತ್ತಲ್ಲಿಯೇ ನಡೆಯಬಾರದ ದುರಂತವೊಂದು ಸಂಭವಿಸಿಬಿಟ್ಟಿತ್ತು. ಇದ್ದಕ್ಕಿದ್ದಂತೆ ಕುಸಿದ ಸೇತುವೆ ಆ ಅಷ್ಟೂ ಜನರನ್ನು ಬಲಿ ಪಡೆದುಬಿಟ್ಟಿತ್ತು.

ಈಗ ಭೀತಿ ಶುರುವಾಗಿರುವುದು ದೇಶದಲ್ಲಿನ ಇತರ ಹಳೆಯ ಸೇತುವೆಗಳ ವಿಚಾರವಾಗಿ. ದೇಶದಲ್ಲಿ ಸುಮಾರು 1,73,000 ಸೇತುವೆಗಳಿದ್ದು, ಅವುಗಳಲ್ಲಿ 36,470 ಸೇತುವೆಗಳು ಬ್ರಿಟಿಷರ ಕಾಲದಲ್ಲಿ ಕಟ್ಟಿದವುಗಳು. 6,700 ಸೇತುವೆಗಳು ಇನ್ನೂ ಹಳೆಯವು. ಅವುಗಳಲ್ಲಿ ಕೆಲವು 140 ವರ್ಷಗಳ ಹಿಂದೆ ನಿರ್ಮಾಣವಾದವುಗಳು. ಹೆಚ್ಚಿನವು ತಾಂತ್ರಿಕವಾಗಿ ದುರ್ಬಲಗೊಂಡವಾಗಿದ್ದು, ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಅಪಾಯಕಾರಿಯೂ ಹೌದು.

ಅವುಗಳ ತುರ್ತು ದುರಸ್ತಿ, ಭದ್ರಪಡಿಸುವ ಕೆಲಸ ಆಗಬೇಕಿದೆ. ಭಾರತೀಯ ಸೇತುವೆ ನಿರ್ವಹಣೆ ವ್ಯವಸ್ಥಾ ಕೇಂದ್ರದ ಪ್ರಕಾರ, ಕನಿಷ್ಠ 5,300 ಸೇತುವೆಗಳು ಶಿಥಿಲ ಸ್ಥಿತಿಯಲ್ಲಿವೆ. ತಕ್ಷಣವೇ ಅವುಗಳ ಸುರಕ್ಷೆ ವಿಚಾರಕ್ಕೆ ಗಮನ ಕೊಡಬೇಕಾದ ಅಗತ್ಯವಿದೆ. ಉತ್ತರ ಪ್ರದೇಶವೊಂದರಲ್ಲಿಯೇ 226 ಸೇತುವೆಗಳು ಹೀಗೆ ದುರ್ಬಲಗೊಂಡವುಗಳಾಗಿವೆ. ಶಿಥಿಲಗೊಂಡಿರುವ ಮತ್ತು ಹಳೆಯ ಸೇತುವೆಗಳ ಬಗ್ಗೆ ಗಂಭೀರವಾಗಿ ಗಮನ ವಹಿಸದೆ ಇರುವುದು ಕಳವಳಕಾರಿ ಸಂಗತಿ.

ಏಕೆಂದರೆ ಬ್ರಿಟಿಷರು ಅವನ್ನು ನಿರ್ಮಿಸಿದ್ದಾಗ ಚಿಕ್ಕ ಹೊರೆಗಳನ್ನು ಸಾಗಿಸುವುದಕ್ಕಷ್ಟೇ ಉದ್ದೇಶಿಸಲಾಗಿತ್ತು. ಸರಕಾರವು ಪ್ರತೀ ಮೂರರಿಂದ ನಾಲ್ಕು ವರ್ಷಗಳಿಗೊಮ್ಮೆ ರಚನಾತ್ಮಕವಾಗಿ ಇವುಗಳ ಸ್ಥಿತಿಯನ್ನು ಪರಿಶೀಲಿಸಬೇಕು. ಸ್ಟ್ರೈನ್ ಗೇಜ್ ಸಂವೇದಕಗಳನ್ನು ಬಳಸಿಕೊಂಡು ಕಾಂಕ್ರಿಟ್ ಗುಣಮಟ್ಟವನ್ನು ಪರೀಕ್ಷಿಸಲು, ಅವುಗಳ ಮೇಲೆ ಭಾರ ಹಾಕಬಹುದೇ ಎಂದು ನೋಡಲು ಆಧುನಿಕ ಸೇತುವೆಗಳಲ್ಲಿ, ಸಂವೇದಕಗಳನ್ನು ಧ್ವನಿ ಎಚ್ಚರಿಕೆಗಳನ್ನು ಅಳವಡಿಸಲಾಗಿರುತ್ತದೆ. ಆದರೆ ಭಾರತದ ಹಳೆಯ ಸೇತುವೆಗಳು ಅವುಗಳನ್ನು ಹೊಂದಿಲ್ಲ. 2018ರಲ್ಲಿ, ಸಂಸದೀಯ ಸಮಿತಿಯು ಭಾರತದ ರೈಲ್ವೇ ಸೇತುವೆಗಳು ಅಪಾಯದಲ್ಲಿದ್ದು, ನವೀಕರಿಸುವ ಅವಶ್ಯಕತೆಯಿದೆ ಎಂದು ಗುರುತಿಸಿತ್ತು.

ಶಿಥಿಲ ಸೇತುವೆಗಳನ್ನು ದುರಸ್ತಿ ಮಾಡುವಲ್ಲಿ ಅತಿಯಾದ ವಿಳಂಬ ಮಾಡಿದ ರೈಲ್ವೆಯನ್ನು ಅದು ಖಂಡಿಸಿತ್ತು. ಹಳೆಯ ಬ್ರಿಟಿಷ್ ಸೇತುವೆಗಳನ್ನು ಅವುಗಳ ಗುಣಮಟ್ಟಕ್ಕಾಗಿ ಶ್ಲಾಘಿಸಿದ್ದ ಆ ವರದಿಯು, ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೆಲವು ರೈಲ್ವೆ ಸೇತುವೆಗಳು ಉತ್ತಮ ಸ್ಥಿತಿಯಲ್ಲಿದ್ದರೂ, ಸ್ವಾತಂತ್ರ್ಯದ ನಂತರ ನಿರ್ಮಿಸಲಾದ ರೈಲ್ವೆ ಸೇತುವೆಗಳು ಕಳಪೆ ಗುಣಮಟ್ಟದ್ದಾಗಿವೆ ಮತ್ತು ಆಗಾಗ್ಗೆ ದುರಸ್ತಿ ಮಾಡಬೇಕಾಗುತ್ತದೆ ಎಂದಿತ್ತು.

ರೈಲ್ವೆ ಅಧಿಕಾರಿಗಳು ಮತ್ತು ಕೆಲವು ಗುತ್ತಿಗೆದಾರರ ನಡುವಿನ ಸಂಬಂಧವು ಅದರ ನಿರ್ಮಾಣದ ಸೇತುವೆಗಳ ಗುಣಮಟ್ಟ ಮತ್ತು ಬಾಳಿಕೆ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದಿತ್ತು. ಹೀಗೆ ದೇಶದಲ್ಲಿನ ಹಳೆಯ ನಿರ್ಮಾಣಗಳ ವಿಚಾರವಾಗಿ ಎಚ್ಚರವಹಿಸಬೇಕಾದ ಅಗತ್ಯವನ್ನು ಮನಗಾಣಬೇಕಾದ ಸರಕಾರಕ್ಕೆ ಮಾತ್ರ ಬೇರೆಯದೇ ಚಿಂತೆ. ಆಳುವ ನಾಯಕರಿಗೆ ಭಾರತದಲ್ಲಿನ ಬ್ರಿಟನ್ ಪರಂಪರೆಯನ್ನು ಟೀಕಿಸುವುದರಲ್ಲಿ, ಇಂಗ್ಲಿಷ್ ಭಾಷೆಯನ್ನು ಗುರಿಯಾಗಿಸಿ, ಅದನ್ನು ಗುಲಾಮ ಮನಃಸ್ಥಿತಿಯನ್ನು ಹುಟ್ಟುಹಾಕಿರುವ ವಸಾಹತುಶಾಹಿ ಅವಶೇಷ ಎಂದು ಜರೆಯುವುದರಲ್ಲಿ ಆಸಕ್ತಿ.

ಗಣರಾಜ್ಯೋತ್ಸವದಲ್ಲಿ ಹಾಡಲಾಗುತ್ತಿದ್ದ ‘ಅಬೈಡ್ ವಿತ್ ಮಿ’ ತೆಗೆದು ಈ ಸಲದಿಂದ ಹಿಂದಿ ಗೀತೆಯನ್ನು ಎತ್ತಿಕೊಳ್ಳಲಾಗಿದೆ. ಇನ್ನೊಂದೆಡೆ ಭಾರತೀಯ ಸೇನೆಯ ಕೆಲವು ರೆಜಿಮೆಂಟ್‌ಗಳ ಇಂಗ್ಲಿಷ್ ಹೆಸರುಗಳನ್ನು ತೆಗೆಯುವ ಚಿಂತನೆ ಕೂಡ ನಡೆದಿದೆ. ಆಗಬೇಕಾಗಿರುವುದೇನು ಎಂಬುದರ ಬಗ್ಗೆ ಏಕೆ ಗಮನವಿಲ್ಲ ಎಂಬ ಟೀಕೆಗಳು ವ್ಯಕ್ತವಾಗದೇ ಇಲ್ಲ. ರಸ್ತೆಗಳಿಗೆ ಮರುನಾಮಕರಣ ಮಾಡುವ ಮತ್ತು ಇಂಗ್ಲಿಷ್ ಮೇಲೆ ದಾಳಿ ಮಾಡುವ ಬದಲು, ಬಿಜೆಪಿಯು ನಿಜವಾದ ಸವಾಲನ್ನು ಎದುರಿಸಬೇಕಿದೆ.

ವಸಾಹತುಶಾಹಿ ಯುಗದ ಸೇತುವೆಗಳನ್ನು ನಿರ್ವಹಿಸುವುದಕ್ಕೆ ಆದ್ಯತೆ ಕೊಡಬೇಕಿದೆ. ಅವು ಬಹಳ ಕಾಲ ಉಳಿಯುವಂಥವು. ಆದರೆ, ಅವುಗಳ ಮೇಲೆ ಹೆಚ್ಚು ಭಾರಗಳನ್ನು ವಿವೇಚನೆಯಿಲ್ಲದೆ ಹಾಕಲಾಗುತ್ತಿದೆ. ಅವು ಅಷ್ಟು ಭಾರ ಹೊರುವ ಉದ್ದೇಶದ ನಿರ್ಮಾಣಗಳೇ ಅಲ್ಲ ಎಂಬುದನ್ನು ಮೊದಲು ಮನವರಿಕೆ ಮಾಡಿಕೊಳ್ಳಬೇಕು ಎನ್ನುತ್ತಿದ್ದಾರೆ ವಿಶ್ಲೇಷಕರು.

ಭಾರತದ ರಾಜಧಾನಿಯಲ್ಲಿರುವ ಹಳೆಯ ಯಮುನಾ ಸೇತುವೆ ಕೂಡ ಅಂತಹವುಗಳಲ್ಲಿ ಒಂದಾಗಿದ್ದು, ಇದನ್ನು 1866ರಲ್ಲಿ ನಿರ್ಮಿಸಲಾಯಿತು, ಇದು ದೇಶದ ಅತ್ಯಂತ ಹಳೆಯ ಸೇತುವೆಯಾಗಿದೆ. ಬಡ ಕೂಲಿ ಕಾರ್ಮಿಕರು ಇದರಡಿಯಲ್ಲಿ ಮಲಗುತ್ತಾರೆ. ನಿತ್ಯ ಇದನ್ನು ಬಳಸುವ ಸಾವಿರಾರು ಪ್ರಯಾಣಿಕರು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇದು ಕುದುರೆಗಳು, ಗಾಡಿಗಳು ಮತ್ತು ಭಾರ ಹೊತ್ತು ಸಾಗುವ ಪ್ರಾಣಿಗಳಿಗೆ ಮೀಸಲಾಗಿತ್ತು. ಈಗ ಅದರ ಮೇಲೆ ರೈಲುಗಳು ಮತ್ತು ಕಾರುಗಳು ಕೂಡ ಓಡುತ್ತಿವೆ. 1885ರಲ್ಲಿ ರಾಣಿ ವಿಕ್ಟೋರಿಯಾ 50ನೇ ವಾರ್ಷಿಕೋತ್ಸವದ ನೆನಪಿಗೆ ನಿರ್ಮಿಸಲಾದ ಕೋಲ್ಕತಾದ ಹೂಗ್ಲಿ ನದಿಯ ಮೇಲಿನ ಹಿಂದಿನ ಜುಬಿಲಿ ಸೇತುವೆ ಕೂಡ ಇಂತಹದೇ ಒಂದಾಗಿತ್ತು. 131 ವರ್ಷಗಳ ಬಳಿಕ ಈ ಸೇತುವೆಯನ್ನು 2016ರಲ್ಲಿ ಸ್ಥಗಿತಗೊಳಿಸಲಾಯಿತು.

Similar News