ನಟಿ ಜಾಕ್ವೆಲಿನ್‌ ರನ್ನು ಯಾಕೆ ಬಂಧಿಸಿಲ್ಲ? 'ನೋಡಿ ಆಯ್ಕೆ ಮಾಡುವ' ನೀತಿಯೇಕೆ? ಎಂದು ಪ್ರಶ್ನಿಸಿದ ದಿಲ್ಲಿ ಕೋರ್ಟ್‌

Update: 2022-11-10 12:46 GMT

ಹೊಸದಿಲ್ಲಿ: ರೂ. 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ನಟಿ ಜಾಕ್ವೆಲೀನ್‌ ಫೆರ್ನಾಂಡಿಝ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆದಾಗ ನ್ಯಾಯಾಧೀಶರಿಂದ ಜಾರಿ ನಿರ್ದೇಶನಾಲಯಕ್ಕೆ ಎಚ್ಚರಿಕೆಯ ಮಾತೊಂದು ಬಂದಿದೆ. ʻʻಪಿಕ್‌ ಎಂಡ್‌ ಚೂಸ್‌(ನೋಡಿ ಆಯ್ಕೆ ಮಾಡುವ)ʼʼ ನೀತಿ ಜಾರಿಗೊಳಿಸಬೇಡಿ ಎಂದು ನ್ಯಾಯಾಧೀಶರು ಇಡಿಗೆ ಹೇಳಿದರಲ್ಲದೆ, ಜಾರಿ ನಿರ್ದೇಶನಾಲಯ ಆಕೆಯನ್ನು ಏಕೆ ಬಂಧಿಸಿಲ್ಲ ಹಾಗೂ ಈ ಪ್ರಕರಣದಲ್ಲಿನ ಆರೋಪಿಗಳಿಗೆ ಬೇರೆ ಬೇರೆ ಮಾನದಂಡಗಳನ್ನು ಏಕೆ ಅನುಸರಿಸಲಾಗುತ್ತಿದೆ ಎಂದು ಪ್ರಶ್ನಿಸಿದರು.

ಇತ್ತಂಡಗಳ ವಾದಗಳನ್ನು ಆಲಿಸಿದ ನಂತರ ಜಾಮೀನು ಅರ್ಜಿಯ ಕುರಿತು ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸುವ ಸಾಧ್ಯತೆಯಿದೆ.

ಇಂದಿನ ವಿಚಾರಣೆ ವೇಳೆ ತಮ್ಮ ವಾದ ಮಂಡಿಸಿದ ಜಾಕ್ವೆಲೀನ್‌ ಪರ ವಕೀಲ ಸಿದ್ಧಾರ್ಥ್‌ ಅಗರ್ವಾಲ್‌,   ಆಕೆ  ದೇಶ ಬಿಟ್ಟು ಪಲಾಯನಗೈಯ್ಯಲು ಈ ಹಿಂದೆ ಯತ್ನಿಸಿದ್ದರು ಎಂಬ ಜಾರಿ ನಿರ್ದೇಶನಾಲಯದ ಆರೋಪವನ್ನು ಉಲ್ಲೇಖಿಸಿ, ಆಕೆ ಎರಡು ಬಾರಿ ವಿಚಾರಣೆಗೆ ಹಾಜರಾಗಿದ್ದಾರೆ ಹಾಗೂ ಆರೋಪಿ ಎಂದು ಆಕೆಯನ್ನು ಆಗ ಆರೋಪಿಯೆಂದು ಹೆಸರಿಸಲಾಗಿರಲಿಲ್ಲ. ಆಕೆ 2021 ರಲ್ಲಿ ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿದ ಸಂದರ್ಭ ಆಕೆಯ ವಿರುದ್ಧ ಲುಕೌಟ್‌ ನೋಟಿಸ್‌ ಇದೆ ಎಂಬ ವಿಚಾರ ಕುರಿತು ಆಕೆಗೆ ಮಾಹಿತಿ ನೀಡಲಾಗಿರಲಿಲ್ಲ ಎಂದರು.

ತಮ್ಮ ತಾಯಿಯನ್ನು ಭೇಟಿಯಾಗಲು ತೆರಳಲು ಎರಡು ಬಾರಿ ಜಾರಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿದ್ದರೂ ಉತ್ತರ ದೊರಕಿರಲಿಲ್ಲ ಎಂದು ವಕೀಲರು ತಿಳಿಸಿದರಲ್ಲದೆ ಆಕೆಗೆ ವೃತ್ತಿ ಸಂಬಂಧಿ ಕೆಲಸಗಳಿಗಾಗಿ ಪ್ರಯಾಣಿಸಲು ಅನುಮತಿಸಿದ್ದ ಈ ಹಿಂದಿನ ನ್ಯಾಯಾಲಯದ ಆದೇಶದತ್ತವೂ ವಕೀಲರು ಕೋರ್ಟಿನ ಗಮನ ಸೆಳೆದರು.

ವಿಶೇಷ ಸಾರ್ವಜನಿಕ ಅಭಿಯೋಜಕರಾದ ಶೈಲೇಶ್‌ ಎನ್‌ ಪಾಠಕ್‌ ತಮ್ಮ ವಾದ ಮಂಡನೆ ವೇಳೆ ಮಹಿಳೆಯೆಂಬ ಕಾರಣಕ್ಕೆ ಅಕ್ರಮ ಹಣ ವರ್ಗಾಗಣೆ ತಡೆ ಕಾಯಿದೆಯಿಂದ ಆಕೆ ವಿನಾಯಿತಿ ಕೋರುವಂತಿಲ್ಲ ಎಂದರು. ವಿನಾಯಿತಿಗಾಗಿ ಅಪರಾಧವು ರೂ 1 ಕೋಟಿಗಿಂತ ಕಡಿಮೆ ಹಣ ಒಳಗೊಂಡಿರಬೇಕು ಎಂದೂ ಅವರು ಹೇಳಿದರು.

ʻʻಬಂಧನಕ್ಕಾಗಿ ಅಧಿಕಾರ ಹೊಂದಿರುವುದು ಹಾಗೂ ಆ ಅಧಿಕಾರ ಚಲಾಯಿಸುವುದು ಬೇರೆ ಬೇರೆ ವಿಚಾರ,ʼʼ ಎಂದು ಅವರು ಹೇಳಿದಾಗ ನ್ಯಾಯಾಧೀಶರು ಪ್ರತಿಕ್ರಿಯಿಸಿ ʻʻನೀವು ಪಿಕ್‌ ಎಂಡ್‌ ಚೂಸ್‌ ನೀತಿ ಹೊಂದುವಂತಿಲ್ಲ. ಆಕೆಯನ್ನು ಬಂಧಿಸದೇ ಇರಲು ಕಾರಣವಿರಬೇಕು,ʼʼ ಎಂದರು.

Similar News